

27 ವರ್ಷದ ಯುವಕ ಆಸ್ಟ್ರೇಲಿಯಾದ ಹೆದ್ದಾರಿಯಲ್ಲಿ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ. ಆತನ ಕಾರಿನ ವೇಗ ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿತ್ತು. ಆ ವೇಗವನ್ನು ನೋಡಿದ ಪೊಲೀಸ್ ಅಧಿಕಾರಿಯೋರ್ವರು ಹೆದ್ದಾರಿ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಯುವಕ ಇದ್ಯಾವುದರ ಪರಿವೇ ಇಲ್ಲದೆ ಅದೇ ವೇಗದಲ್ಲಿ ಸಾಗುತ್ತಿದ್ದ. ಹೀಗೆ ಹೋಗುತ್ತಿರುವಾಗ ಒಂದು ಕಡೆ ಪೊಲೀಸರು ಅಡ್ಡಗಟ್ಟಿದರು. ಆಗ ಆ ಯುವಕ ಅದ್ಯಾಕೆ ಅಷ್ಟು ವೇಗದಿಂದ ಕಾರು ಡ್ರೈವ್ ಮಾಡುತ್ತಿದ್ದ ಎಂಬ ವಿಚಾರ ಕೇಳಿ ನಿಜಕ್ಕೂ ಹೌಹಾರಿದರು.
ಯುವಕ ತನ್ನ ಹೆಸರು ಜಿಮ್ಮಿ ಎಂದು ಹೇಳಿಕೊಂಡಿದ್ದಾರೆ. ಕ್ವೀನ್ಸ್ಲ್ಯಾಂಡ್ನ ಡಾಸನ್ ಹೆದ್ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಅವನಿಗೆ ಹಾವೊಂದು ಕಚ್ಚಿತ್ತು. ಕಾರಿನೊಳಗೆ ಸೇರಿಕೊಂಡಿದ್ದ ಆ ಹಾವು ಜಗತ್ತಿನಲ್ಲಿಯೇ ಅತ್ಯಂತ ಡೆಡ್ಲಿ ಹಾವು ಎಂದು ಕರೆಸಿಕೊಳ್ಳುವ ಬ್ರೌಬ್ ಸ್ನೇಕ್. ಆಸ್ಟ್ರೇಲಿಯಾದಲ್ಲಿ ಈ ಹಾವು ಕಡಿತದಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಅಂಥ ಭಯಾನಕ ಹಾವು ಜಿಮ್ಮಿಗೆ ಗೊತ್ತಿಲ್ಲದಂತೆ ಕಾರಿನೊಳಗೆ ಸೇರಿಕೊಂಡಿತ್ತು. ಆತ ಕುಳಿತುಕೊಳ್ಳುವ ಸೀಟ್ ಅಡಿಯಲ್ಲಿ ಇದ್ದ ಅದು ಕ್ರಮೇಣ ಜಿಮ್ಮಿಯ ಕಾಲನ್ನು ಸುತ್ತಲು ಪ್ರಾರಂಭಿಸಿತ್ತು. ಆವಾಗಲೇ ಹಾವಿನ ಇರುವಿಕೆ ಅವನ ಗಮನಕ್ಕೆ ಬಂದಿದ್ದು. ಜಿಮ್ಮಿ ತಡಮಾಡದೆ, ಸೀಟ್ ಬೆಲ್ಟ್ ಮತ್ತು ಅಲ್ಲಿಯೇ ಇದ್ದ ಚಾಕುವಿನ ಮೂಲಕ ಹಾವಿನ ವಿರುದ್ಧ ಹೋರಾಡಲು ಪ್ರಾರಂಭಿಸಿದ. ಆದರೆ ಅಷ್ಟರಲ್ಲಾಗಲೇ ಹಾವು ಅವನಿಗೆ ಕಚ್ಚಿತ್ತು. ಇದನ್ನೂ ಓದಿ: ಬಿಎಸ್ಎಫ್ ಯೋಧರಿಗೆ ಕಾಡುತ್ತಿರುವ ಕೊವಿಡ್-19; 1,454 ಸೈನಿಕರಲ್ಲಿ ಸೋಂಕು
ಜಿಮ್ಮಿ ಹಾವನ್ನು ಕೊಂದು, ಅದನ್ನು ರಸ್ತೆ ಮಧ್ಯೆಯೇ ಬಿಸಾಕಿ, ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅತ್ಯಂತ ವೇಗದಲ್ಲಿ ಕಾರು ಓಡಿಸುತ್ತಿದ್ದ.
ಪೊಲೀಸರು ತಡೆದು ನಿಲ್ಲಿಸುತ್ತಿದ್ದಂತೆ ಇದನ್ನೆಲ್ಲ ಆತ ಹೇಳಿದ. ಇನ್ನು ಪೊಲೀಸರೂ ಕೂಡ ಜಿಮ್ಮಿಯ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. (ಏಜೆನ್ಸೀಸ್)