

ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ನ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಡ್ರೋನ್ ಮೂಲದ ದಾಳಿ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ತಾರಕಕ್ಕೇರಿದೆ. ದಾಳಿಯಲ್ಲಿ ಯಾರಿಗೂ ಹಾನಿ ಆಗಿಲ್ಲ. ಪ್ರಧಾನಿ ನೆತನ್ಯಾಹು ಅವರ ಪತ್ನಿ ಸಹಿತ ಕುಟುಂಬದ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ.
ಲೆಬನಾನ್ ಕಡೆಯಿಂದ ಡ್ರೋನ್ ದಾಳಿ ಆಗುತ್ತಿದ್ದಂತೆ ಇಸ್ರೇಲ್ನ ಹಲವೆಡೆ ಸೈರನ್ಗಳು ಮೊಳಗಿದವು. ಹತ್ತಾರು ಡ್ರೋನ್, ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿತ್ತು. ಮೆಡಿಟರೇನಿಯನ್ ಕರಾವಳಿ ಪಟ್ಟಣವಾದ ಸಿಸೇರಿಯಾದಲ್ಲಿರುವ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ. ಆದರೆ ಈ ವೇಳೆ ಅವರ ಪತ್ನಿ ಅಥವಾ ಯಾವುದೇ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಪ್ರಧಾನಿ ಕಚೇರಿ ಹೇಳಿಕೊಂಡಿದೆ.
ಲೆಬನಾನ್ನಿಂದ ಉತ್ತರ ಇಸ್ರೇಲ್ ಪ್ರದೇಶವನ್ನು ಟಾರ್ಗೆಟ್ ಮಾಡಲಾಗಿತ್ತು. ಶನಿವಾರ ಬೆಳಗ್ಗೆ ಎರಡು ಬಾರಿ ಸುಮಾರು 55 ಸ್ಪೋಟಕಗಳಿಂದ ದಾಳಿ ನಡೆಸಲಾಗಿತ್ತು. ಉತ್ತರ ಇಸ್ರೇಲ್ನಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ಕಾರಿನಲ್ಲಿ ಕುಳಿತಿದ್ದಾಗ ಸ್ಫೋಟ ಸಂಭವಿಸಿ ಸಾವನ್ನಪ್ಪಿದ್ದಾರೆ. ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ನ ಆರೋಗ್ಯ ಇಲಾಖೆ ತಿಳಿಸಿದೆ.
ಗಾಜಾದಲ್ಲಿ 50ಕ್ಕೂ ಹೆಚ್ಚು ಸಾವು: ಇಸ್ರೇಲಿ ಪಡೆಗಳು ಗಾಜಾದ ಉತ್ತರ ಭಾಗದಲ್ಲಿರುವ ಆಸ್ಪತ್ರೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಕಳೆದ 24 ಗಂಟೆಗಳಲ್ಲಿ ಮಕ್ಕಳು ಸೇರಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಇಸ್ರೇಲ್ ಮುಂದಿಟ್ಟಿದ್ದ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿರುವ ಬೆನ್ನಲ್ಲೇ ಗಾಜಾ ಮೇಲೆ ದಾಳಿ ತೀವ್ರಗೊಂಡಿದೆ.
ತಲೆಗೆ ಗುಂಡು, ಬೆರಳು ಕಟ್...: ಮುಖ್ಯಸ್ಥ ಯಾಹ್ಯಾ ಸಿನ್ವರ್ನ ಮರಣೋತ್ತರ ಪರೀಕ್ಷೆಯ ವಿವರಗಳನ್ನು ಇಸ್ರೇಲ್ ಶನಿವಾರ ಹಂಚಿಕೊಂಡಿದೆ. ಸಿನ್ವರ್ ಪ್ಯಾಲೇಸ್ತೀನ್ ಗುಂಪಿನ ಹಮಾಸ್ನ ಪಾಲಿಟ್ಬ್ಯೂರೋ ಮುಖ್ಯಸ್ಥನಾಗಿದ್ದ. ದಕ್ಷಿಣ ಗಾಜಾದಲ್ಲಿ ಈತ ಇರುವ ಬಗ್ಗೆ ಸಿಕ್ಕ ಗುಪ್ತಚರ ಮಾಹಿತಿ ಆಧರಿಸಿ ಕಟ್ಟಡವೊಂದರ ಮೇಲೆ ದಾಳಿ ನಡೆಸಲಾಗಿತ್ತು. ಇಸ್ರೇಲ್ನ ನಂ. 828 ಬ್ರಿಗೇಡ್ ರಾಫಾದ ಟೆಲ್ ಅಲ್-ಸುಲ್ತಾನ್ ಪ್ರದೇಶದಲ್ಲಿನ ಕಟ್ಟಡದಲ್ಲಿ ಸಿನ್ವರ್ನ ದೇಹವನ್ನು ಪತ್ತೆ ಮಾಡಿತ್ತು. ಈತನ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಇಸ್ರೇಲ್ ಸೇನೆ ಮೃತದೇಹವನ್ನು ಪರೀಕ್ಷೆ ನಡೆಸುವ ಮೂಲಕ ಆತನ ಸಾವನ್ನು ದೃಢೀಕರಿಸಿದೆ.
ಸಿನ್ವರ್ ಎರಡು ದಶಕಗಳ ಕಾಲ ಇಸ್ರೇಲಿ ಜೈಲಿನಲ್ಲಿದ್ದ. ನಂತರ ಖೈದಿಗಳ ವಿನಿಮಯ ಒಪ್ಪಂದದ ಪ್ರಕಾರ ಆತನನ್ನು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಆತನ ವೈದ್ಯಕೀಯ ಮಾಹಿತಿ ಇಸ್ರೇಲ್ ಬಳಿ ಇದೆ. ಇದು ಆತನ ಸಾವನ್ನು ದೃಢೀಕರಿಸಲು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲು ಆತನ ಹಲ್ಲುಗಳಿಂದ ಗುರುತಿಸಲು ಪ್ರಯತ್ನಿಸಲಾಯಿತು. ಆದರೆ ಸಾಕಷ್ಟು ಪುರಾವೆ ಸಿಗಲಿಲ್ಲ. ನಂತರ ಎಡಗೈಯ ತೋರು ಬೆರಳನ್ನು ಕತ್ತರಿಸಿ, ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಯಿತು. ಇಬ್ಬರು ಇಸ್ರೇಲಿ ಸೈನಿಕರು ಸಿನ್ವರ್ನ ಎಡಗೈಯ ತೋರು ಬೆರಳನ್ನು ಕತ್ತರಿಸುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಈ ನಡುವೆ, ತಲೆಗೆ ಆದ ಗುಂಡಿನ ಗಾಯದಿಂದ ಸಿನ್ವರ್ ಸಾವನ್ನಪ್ಪಿದ್ದಾನೆ ಎಂದು ಶವಪರೀಕ್ಷೆ ನಡೆಸಿದ ವೈದ್ಯರು ಖಚಿತ ಪಡಿಸಿದ್ದಾರೆ. ಆತನ ಮೈಮೇಲೆ ಟ್ಯಾಂಕ್ ಶೆಲ್ ಸೇರಿ ಹಲವು ಗಾಯಗಳಾಗಿವೆ. ತಲೆಗೆ ಬಿದ್ದ ಗುಂಡಿನಿಂದಾಗಿ ಆತ ಮೃತಪಟ್ಟಿದ್ದಾನೆ. ಮುಖಕ್ಕೂ ಅನೇಕ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಯಾಹ್ಯಾ ಸಿನ್ವರ್ ಕಳೆದ ವರ್ಷ ಅ. 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರ. ಈ ದಾಳಿಯಲ್ಲಿ ಇಸ್ರೇಲ್ನ 1,200ಕ್ಕೂ ಹೆಚ್ಚು ಜನರು ಹತ್ಯೆಗೀಡಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಗಾಜಾದಲ್ಲಿ ಕಳೆದ ಒಂದು ವರ್ಷದ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ 40,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹೊಸ ನಾಯಕ?: ಹಮಾಸ್ ಈಗ ಹೊಸ ನಾಯಕನನ್ನು ಹುಡುಕುತ್ತಿದೆ. ಮೃತ ಸಿನ್ವರ್ ಸಹೋದರ ಮೊಹಮ್ಮದ್ ಸಿನ್ವರ್ಗೆ ಈ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
| ಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ