ಕ್ವಾರಂಟೈನ್​ ಕೇಂದ್ರದಲ್ಲಿ ಕಾಮುಕ! ಕಂಡಕಂಡ ಯುವತಿಯರ ಮೇಲೆರಗುತ್ತಾನೆ...

Quarantine Center
Published on

ಬೆಂಗಳೂರು: ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಕಾಮುಕನೊಬ್ಬ ಸಿಕ್ಕಸಿಕ್ಕ ಯುವತಿಯರ ಮೇಲೆರಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಸೌಲಭ್ಯ ಇಲ್ಲದೆ ನರಳಿದ್ದ ಜನರಿಗೀಗ ಕಾಮುಕರ ಭೀತಿಯೂ ಆವರಿಸಿದೆ.

ಎಚ್​.ಎಸ್.ಆರ್. ಲೇಔಟ್​ನ ಸರ್ಕಾರಿ ಹಾಸ್ಟೆಲ್​ನಲ್ಲಿರುವ ಕ್ವಾರಂಟೈನ್​ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಬಾತ್​ರೂಂಗೆ ಹೋಗಿದ್ದ ಯುವತಿಯೊಬ್ಬಳ ಮೇಲೆರಗಿ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಆಕೆಯ ರೂಂಮೇಟ್​ಗೂ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಅದರ ಡಿಟೇಲ್ಸ್ ಇಲ್ಲಿದೆ ನೋಡಿ. ಇದನ್ನೂ ಓದಿರಿ ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

ಇಲ್ಲಿನ ಕ್ವಾರಂಟೈನ್​ ಕೇಂದ್ರದಲ್ಲಿ ಮಹಿಳೆಯರು ಮತ್ತು ಪುರಷರಿಗೆ ಒಂದೇ ಬಾತ್ ರೂಂ ವ್ಯವಸ್ಥೆ ಇದೆ. ಮುಂಬೈನಿಂದ ಬಂದಿದ್ದ ಯುವತಿಯೊಬ್ಬಳು 7 ದಿನದ ಕ್ವಾರಂಟೈನ್​ಗೆ ಒಳಪಟ್ಟಿದ್ದಳು. ಶುಕ್ರವಾರ ಮುಂಜಾನೆ ಯುವತಿ ಬಾತ್​ರೂಂಗೆ ಹೋಗಿದ್ದಳು. ಈ ವೇಳೆ ಅಲ್ಲೇ ಕ್ವಾರಂಟೈನ್​ ಆಗಿದ್ದ ಮುಂಬೈನಿಂದ ಬಂದಿದ್ದ ಜಯಶಂಕರ್​ ಏಕಾಏಕಿ ಬಾತ್ ರೂಂಗೆ ಎಂಟ್ರಿ ಕೊಟ್ಟು ಬಾಗಿಲು ಹಾಕಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ವಿರೋಧಿಸುತ್ತಿದ್ದಂತೆ ಹೊರ ಬಂದಿದ್ದಾನೆ.

ಈ ಕಾಮುಕನ ಅಟ್ಟಹಾಸ ಅಷ್ಟಕ್ಕೆ ನಿಲ್ಲೋದಿಲ್ಲ. ಆ ಯುವತಿ ರೂಂಗೆ ಹೋಗುತ್ತಿದ್ದಂತೆ ಆಕೆಯ ರೂಂಮೇಟ್ಸ್ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ದೂರು ದಾಖಲಾಗಿದೆ. ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ತಾಣವಾಗಬೇಕಿದ್ದ ಕ್ವಾರಂಟೈನ್​ ಕೇಂದ್ರಗಳೇ ಮಾನ-ಪ್ರಾಣಕ್ಕೂ ಅಪಾಯಕಾರಿ ತಾಣ ಅನ್ನಿಸಿಕೊಳ್ಳುತ್ತಿರುವುದು ವಿಪರ್ಯಾಸ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮಹಿಳೆಯರಿಗೆ ಪತ್ಯೇಕವಾಗಿ ಇರಲು ವ್ಯವಸ್ಥೆ ಮಾಡಿಕೊಡುವ ಮೂಲಕ ಕಾಮಾಂಧರಿಗೆ ತಕ್ಕಶಾಸ್ತಿ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net