ಗುರುಸೇವೆಯಿಂದ ಪರಮ ಪದವಿಯ ಪ್ರಾಪ್ತಿ

Dattatreya Jayanthi
Published on
Rajguru Dwarakanath
ರಾಜಗುರು ಬಿ.ಎಸ್.ದ್ವಾರಕಾನಾಥ

ಯಶ್ಯಾಸ್ತ್ರ ವಿಜ್ಞಾನಮಯೀಂ ತೃತೀಯಾಂ ಧತ್ತೇದೃಶಂ ದರ್ಶಿತ ನೀಲಕಂಠಃ

ಲೋಕೇ ಸಮಸ್ತಾಸ್ತಿಕ ವಂದ್ಯಮೂರ್ತಿಃಜೀಯಾದ್ಗುರುಶ್ಶಂಕರ ಭಾರತೀಂದ್ರಃ

ಅಲ್ಪ ಮಾನವರಾಗಿ ಜನಿಸಿದ ಪ್ರತಿಯೊಬ್ಬರು ವಿಶ್ವಮಾನವತ್ವದ ಪರಮ ಪದವಿಯನ್ನು ತಲುಪಲು ಗುರುಸೇವೆಯೊಂದೇ ಮಾರ್ಗ. ಗುರುವಿನ ಸ್ವರೂಪ, ಮಹಿಮೆ, ಸ್ಥಾನವನ್ನು ವೇದ ಶಾಸ್ತ್ರಾದಿ ಪುರಾಣಗಳೆಲ್ಲವೂ ವಿಶದವಾಗಿ ವಿವರಿಸಿವೆ. ಬ್ರಹ್ಮವೈವರ್ತ ಪುರಾಣದಲ್ಲಿ ಗುರುವಿನ ಸೇವೆಯಿಂದ ಪಡೆಯಬಹುದಾದ ಫಲಗಳನ್ನು ವಿವರಿಸಲಾಗಿದೆ. ಅಂತಹ ಗುರುವಿನ ಆದಿ ಸ್ವರೂಪವಾದ ಶ್ರೀಗುರು ದತ್ತಾತ್ರೇಯ ಜಯಂತಿ ಇಂದು. ಶ್ರೀದತ್ತ ಗುರುವಿನ ಅವತಾರ, ಸ್ವರೂಪ, ಇತ್ಯಾದಿ ಎಲ್ಲ ಅಂಶಗಳು ಶ್ರೀಗುರು ಚರಿತ್ರೆ ಗ್ರಂಥದಲ್ಲಿ ವಿವರವಾಗಿ ದೊರೆಯುತ್ತವೆ.

ಚೈತ್ರ ಶುದ್ಧ ಪಾಡ್ಯದಿಂದ ಪಾಲ್ಗುಣ ಮಾಸದ ಅಂತ್ಯದವರೆಗೂ ಪ್ರತಿ ಪೌರ್ಣಿಮೆಯ ಕುರಿತು ಗುರು ಚರಿತ್ರೆಯಲ್ಲಿ ವಿವರಿಸಲಾಗಿದೆ. ಗುರುಗಳ ಸೇವನೆಯಿಂದ ಸೇವಾತತ್ಪರವೂ ಅನೇಕ ವಿಧವಾದ ಇಷ್ಟಾರ್ಥ ಸಾಧಿಸುವುದಲ್ಲದೆ ಇಹಕ್ಕೂ, ಪರಕ್ಕೂ ಸಾಧನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶುದ್ಧಾಕಾಶದಲ್ಲಿ ಯಾರು ಗುರುಸ್ವರೂಪರು ಎಂಬುದಕ್ಕೆ ಸ್ವತಃ ಬ್ರಹ್ಮದೇವನು ಗು ಎಂದರೆ ಸಿದ್ಧ ಎಂದು, ರೇಫ ಎಂದರೆ ಪಾಪದಾಹಕವೆಂದು, ಉ ಕಾರವು ವಿಷ್ಣು ಅವ್ಯಕ್ತ ಎಂಬುದಾಗಿ ಅಥೈಸಿದ್ದು, ಈ ಪ್ರಕಾರ ನಿಶ್ಚಿತವಾಗಿ ಗುರು ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ತ್ರಿಮೂರ್ತಿ ಸ್ವರೂಪವೇ ಆಗಿದ್ದಾನೆ. ಮನುಷ್ಯನಿಗೆ ನಾಲ್ಕು ರೀತಿಯ ಮುಕ್ತಿಗಳಿದ್ದು, ಅವುಗಳನ್ನು ನೀಡುವಾತನೇ ಗುರು. ಗುರು ಪಿತಾಃ, ಗುರು ದೇವಾಃ, ಗುರು ಪರಶಿವಾಯ ಎಂಬ ಉಕ್ತಿಯನುಸಾರ ನಮ್ಮ ಜನ್ಮದಾತರು ಒಂದರ್ಥದಲ್ಲಿ ಗುರುಗಳೆಂದು ಶ್ರದ್ಧೆಯಿಂದ ಸೇವಿಸಬೇಕು.

‘ಮಾರ್ಗ ಮಾಸಂ ಸರ್ವ ಶ್ರೇಯಂ’ ಎಂದು ಹೇಳಿರುವಂತೆ, ಈ ಮಾರ್ಗಶಿರ ಮಾಸದ ಚತುರ್ದಶಿ ಹಾಗೂ ಪೌರ್ಣಿಮೆಯನ್ನು ದತ್ತ ದೇವರ ಜಯಂತಿ, ದತ್ತ ಪೌರ್ಣಿಮೆ ಎಂದು ಕರೆಯಲಾಗುತ್ತದೆ. ಕನ್ನಡ ನಾಡಿನ ಜನರ ಪುಣ್ಯದ ಸಾಕ್ಷಿಯಾಗಿರುವ ಶ್ರೀಕ್ಷೇತ್ರ ಗಾಣಗಾಪುರದಲ್ಲಿ (ಕಲಬುರಗಿ ಜಿಲ್ಲೆ) ಶ್ರೀದತ್ತ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ತ್ರಿಮೂರ್ತಿ ಸ್ವರೂಪ ಶ್ರೀದತ್ತಾತ್ರೇಯ: ಅತ್ರಿ ಮುನಿಯ ಪತ್ನಿ ಅನುಸೂಯ ದೇವಿಯ ಪರೀಕ್ಷೆಗಾಗಿ ಬಂದ ತ್ರಿಮೂರ್ತಿಗಳು ಆಕೆಯ ಪಾತಿವ್ರತ್ಯದ ಪ್ರಭಾವದಿಂದ ಸ್ವತಃ ಹಸುಗೂಸುಗಳಾಗುತ್ತಾರೆ. ಮುಂದೆ ಬ್ರಹ್ಮನು ಚಂದ್ರನ ಅಂಶವಾಗಿ ದರ್ಶನ ನೀಡುವುದಾಗಿಯೂ, ಶಿವನು ದೂರ್ವಾಸನಾಗಿ ತಪಸ್ಸಿಗೆ ಹೋಗುವುದಾಗಿಯೂ ಮೂವರ ಅಂಶಿಭೂತವಾಗಿ ನಾರಾಯಣನೇ ಅನುಸೂಯ ನಂದನನಾಗಿ ಲೀಲೆ ಮಾಡಿದ ಕತೆ ಸರ್ವವೇದ್ಯವಾಗಿದೆ. ಅಂತಹ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯರು ಮುಂದೆ ಶ್ರೀಪಾದವಲ್ಲಭರಾಗಿ 2ನೇ ಅವತಾರವನ್ನು ಪೂರ್ಣಗೊಳಿಸಿ ಮೂರನೇ ಅವತಾರದಲ್ಲಿ ನರಸಿಂಹ ಸರಸ್ವತಿಗಳಾಗಿ ಶ್ರೀಕ್ಷೇತ್ರ ಗಾಣಗಾಪುರದಲ್ಲಿ ನಿರ್ಗಣ ಪಾದುಕೆಗಳ ರೂಪದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ. ಮಾನವರ ಉದ್ಧಾರಕ್ಕಾಗಿ ಕಲಿಯುಗದ ಕೈಲಾಸ, ವರ್ತಮಾನದ ವೈಕುಂಠವೆಂದು ಪ್ರಸಿದ್ಧವಾಗಿರುವ ಗಾಣಗಾಪುರದಲ್ಲಿ ನೆಲೆಸಿ ವ್ಯಕ್ತಾವ್ಯಕ್ತ ಸ್ವರೂಪದಿಂದ ಇಂದಿಗೂ ತಮ್ಮ ಲೀಲೆಯನ್ನು ತೋರಿಸುತ್ತಿದ್ದಾರೆ.

ಕರ್ನಾಟಕದ ಕಾಶಿ ಗಾಣಗಾಪುರ: ಸುದೀರ್ಘ ಹಿನ್ನೆಲೆಯುಳ್ಳ ಪುಣ್ಯತರವಾದ ಗಾಣಗಾಪುರವು ಕರ್ನಾಟಕದ ಕಾಶಿಯಾಗಿ ಶೋಭಿಸುತ್ತಿದೆ. ಕಲ್ಯಾಣ ಕರ್ನಾಟಕದ ಪ್ರಧಾನಕೇಂದ್ರವಾಗಿರುವ ಕಲಬುರಗಿಯಿಂದ 35 ಕಿ.ಮೀ. ದೂರದಲ್ಲಿ ದೇವಲಗಾಣಗಾಪುರ ಕ್ಷೇತ್ರವು ರಾರಾಜಿಸುತ್ತಿದ್ದು, ದತ್ತ ಎಂದರೆ ಕೊಡುವವನು ಎಂದರ್ಥ. ಭಕ್ತರಿಂದ ನಿಷ್ಕಲ್ಮಶ ಭಕ್ತಿಯೊಂದನ್ನು ಮಾತ್ರ ಸ್ವೀಕರಿಸುವ ದತ್ತ ಮಹಾರಾಜರು ಬೇಡಿದ ಭಕ್ತರಿಗೆ ಭರಪೂರ ವರಗಳನ್ನು ದಯಪಾಲಿಸುವ ಕರುಣಾಸಾಗರರಾಗಿದ್ದಾರೆ.

ಅಸೇತು ಹಿಮಾಚಲ ಪರ್ಯಂತರವಾದ ಭರತಖಂಡದಲ್ಲಿ ಅಸಂಖ್ಯಾತ ದೇವ-ದೇವತೆಗಳ ಕ್ಷೇತ್ರಗಳಿದ್ದು, ಶ್ರೀದತ್ತಾತ್ರೇಯರು ಅವತಾರ ಮಾಡಿ ನೆಲೆಸಿರುವ ಏಕಮಾತ್ರ ಕ್ಷೇತ್ರ ಗಾಣಗಾಪುರವಾಗಿದೆ. ಇಂತಹ ದತ್ತಕ್ಷೇತ್ರದಲ್ಲಿ ದತ್ತ ಜಯಂತಿಯನ್ನು ‘ದತ್ತ ನವರಾತ್ರಿ’ ಎಂದೇ ಕರೆಯಲ್ಪಡುವ ಉತ್ಸವವಾಗಿ ಆಚರಿಸಲಾಗುತ್ತದೆ. ದತ್ತೋತ್ಸವದ ಹೆಸರಲ್ಲಿ ಮಾರ್ಗಶಿರ ಅಷ್ಟಮಿಯಂದು ಆರಂಭವಾಗಿ ಮಾರ್ಗಶಿರ ಪೌರ್ಣಿಮೆಯಂದು ಸುಸಂಪನ್ನಗೊಳ್ಳುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ಅಷ್ಟತೀರ್ಥದಲ್ಲಿ ಮಿಂದು, ಏಕದಿನ, ಸಪ್ತಾಹ ಪಾರಾಯಣವನ್ನು ಮಾಡಿ, ಕಲ್ಲೇಶ್ವರನನ್ನು ಪೂಜಿಸಿ, ಸುಪ್ರಭಾತ ಕಾಲಕ್ಕೆ ಸಂಗಮದಲ್ಲಿ ಸಗುಣರೂಪವನ್ನು, ಮಧ್ಯಾಹ್ನಕ್ಕೆ ನಿರ್ಗಣ ರೂಪವನ್ನು ದರ್ಶನ ಮಾಡಿ ಪಾವನರಾಗುತ್ತಾರೆ.

ಮುಕ್ತಿಮಾರ್ಗ ಸಾರುವ ಗುರುಚರಿತ್ರೆ: 53 ಅಧ್ಯಾಯಗಳಿರುವ ಶ್ರೀಗುರು ಚರಿತ್ರೆಯು ಮನುಷ್ಯನ ಅಭ್ಯುದಯ, ಆರೋಗ್ಯ, ನೆಮ್ಮದಿ, ಇಷ್ಟಾರ್ಥ ಈಡೇರಿಸಿಕೊಳ್ಳುವ ಬಗೆಯನ್ನು ವಿವರಿಸಿದೆ. ಹೃದಯಭಾಗದಲ್ಲಿ ಗುರುವಿನ ಕೃಪೆ ಪಡೆಯುವ ಬಗೆಯನ್ನು ಸ್ವತಃ ಗುರುಗಳೇ ವಿವರಿಸಿದ್ದಾರೆ. ಗುರುವನ್ನು ತ್ಯಜಿಸಿದ ಓರ್ವ ಮುನಿ ಮುಕ್ತಿಗಾಗಿ ಬೇಡಿಕೊಂಡಾಗ, ಗುರುವನ್ನು ತ್ಯಜಿಸಿದವನಿಗೆ ಮುಕ್ತಿ ಹೇಗೆ ಸಾಧ್ಯ? ಹಾಗೂ ಗುರುವಿಲ್ಲದೆ ಮುನಿಯಾಗುವುದಾದರೂ ಹೇಗೆ ಎಂಬುದನ್ನು ದೌಮ್ಯಮುನಿಗಳ ಶಿಷ್ಯರಾದ ಅರುಣ, ಬೈದ ಹಾಗೂ ಉಪಮನ್ಯುವಿನ ಗುರುಸೇವೆಯಿಂದ ಪಡೆದ ಫಲದ ಉದಾಹರಣೆಯೊಂದಿಗೆ ಮನವರಿಕೆ ಮಾಡಿಕೊಡುತ್ತಾರೆ. ಗುರುವು ಸಂತೃಪ್ತನಾದರೆ ಸರ್ವವಿದ್ಯೆಗಳನ್ನು ಸಂಪಾದಿಸಬಹುದು. 16ನೇ ಅಧ್ಯಾಯದಲ್ಲಿ ಇದನ್ನು ವಿವರವಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಗುರುಕೃಪೆ ಅತ್ಯವಶ್ಯಕ. ದೇವಾನುದೇವತೆಗಳು ಮುನಿದರೆ ಗುರುವು ಸಂತೈಸಬಲ್ಲ. ಆದರೆ ಗುರುವೇ ಮುನಿದರೆ ಹುಲುಮಾನವರನ್ನು ಕಾಪಾಡುವವರು ಯಾರು? ಅಷ್ಟತೀರ್ಥದಲ್ಲಿ ಮಿಂದು, ಪಾರಾಯಣವನ್ನು ಮಾಡಿ, ಹೆಜ್ಜೆ ನಮಸ್ಕಾರವರ್ನ°ಸಿದರೆ ಸಾಕು ಗುರುವಿನ ಅನುಗ್ರಹವನ್ನು ಪಡೆದು ಸುಖಕ್ಕೆ, ಆತ್ಮರಕ್ಷಣೆಗೆ ದಾರಿಯನ್ನು ಕಂಡುಕೊಳ್ಳಬಹುದು. ಇದನ್ನು ತೋರುವ ಮಹಾಗ್ರಂಥವೇ ಶ್ರೀಗುರು ಚರಿತ್ರೆ.

ಬಡ ಭಾಸ್ಕರನಿಗೆ ಪಾದುಕೆ ಪ್ರದಾನ: ಸರ್ವವನ್ನೂ ಬಲ್ಲ ಗುರುವು ಲೋಕದ ಭೌತಿಕ ದೃಷ್ಟಿಯಲ್ಲಿ ಕಣ್ಮರೆಯಾಗಿದ್ದರೂ, ಸ್ವತಃ ತಾವೇ ಹೇಳಿರುವಂತೆ ನಿರ್ಗಣ ಪಾದುಕೆಯ ರೂಪದಲ್ಲಿ ನೆಲೆಸಿದ್ದಾರೆ. ತಮ್ಮ ಲೀಲೆಗಳನ್ನೆಲ್ಲ ಮುಗಿಸಿ ಅಂತಿಮವಾಗಿ ಶ್ರೀಶೈಲದಲ್ಲಿ ಕಣ್ಮರೆಯಾದ ಮಹಾರಾಜರು ತಮ್ಮ ನೆಚ್ಚಿನ ಶಿಷ್ಯರಾದ ಸಾಖರೆ, ಸಾಯಂದೇವ, ನರಹರಿ, ನಂದಿನಾಮ ಎಂಬುವವರಿಗೆ ಹೂವಿನ ಪ್ರಸಾದನವನ್ನು ನೀಡಿದರು.

ಭಕ್ತಿಯಿಂದ ಅನ್ನದಾನ ಮಾಡಬೇಕೆಂದು ಕ್ಷೇತ್ರಕ್ಕೆ ಬಂದ ಬಡ ಬ್ರಾಹ್ಮಣ ಭಾಸ್ಕರ ಭಟ್ಟನಿಗೆ ಎಲ್ಲರೂ ಗೇಲಿ ಮಾಡಿದರೂ, ಆತನ ನಿರ್ಮಲ ಭಕ್ತಿಗೆ ಒಲಿದ ಗುರುಗಳು ತಮ್ಮ ಲೀಲೆಯಿಂದ ಆತನು ತಂದಿದ್ದ ಅಲ್ಪ ಪಡಿ ಪದಾರ್ಥದಲ್ಲಿ ನಾಲ್ಕು ಸಾವಿರ ಜನರಿಗೆ ಬ್ರಾಹ್ಮಣ ಭೋಜನ ಮಾಡಿಸುತ್ತಾರೆ. ಮಾತ್ರವಲ್ಲ ತಮ್ಮ ಲೀಲೆ ಅಂತ್ಯಗೊಳಿಸುವ ಮುನ್ನ ನಿರ್ಗಣ ಪಾದುಕೆಗಳನ್ನು ಭಾಸ್ಕರ ಭಟ್ಟನಿಗೆ ನೀಡಿ, ನಿನ್ನ ವಂಶಪರಂಪರೆಯಾಗಿ ಪಾದುಕೆಗಳನ್ನು ಪೂಜೆ ಮಾಡಿಕೊಂಡು ಬರುವಂತೆ ಆಜ್ಞಾಪಿಸುತ್ತಾರೆ. ಅಂದು ಗುರುಗಳು ನೀಡಿದ ಪಾದುಕೆಗಳಿಗೆ ಇಂದಿಗೂ ಗಾಣಗಾಪುರದಲ್ಲಿ ಕಾಕಡಾರತಿ, ಅಭಿಷೇಕ, ನೈವೇದ್ಯಗಳಿಂದ ತ್ರಿಕಾಲದಲ್ಲಿ ಭಾಸ್ಕರ ಭಟ್ಟರ ವಂಶಸ್ಥರಿಂದ ಸರದಿಯಂತೆ ಪೂಜೆ ನಡೆಯುತ್ತಿದೆ.

ಗುರುಗಳಿಗೆ ಆಡಂಬರದ ಅವಶ್ಯಕತೆ ಇಲ್ಲ. ತಪಸ್ಸಿಗೆ ಅನುಗ್ರಹಿಸುವರೇ ಹೊರತು ವೈಭವ ಬಯಸುವುದಿಲ್ಲ. ಸರ್ವಸಂಘ ಪರಿತ್ಯಾಗಿಯಾಗಿ ಗಾಣಗಾಪುರದಲ್ಲಿ ನೆಲೆಸಿದ್ದಾರೆ. ರಾಜ್ಯ, ರಾಷ್ಟ್ರದಲ್ಲಿ ಕಾಲಕಾಲಕ್ಕೆ ಮಳೆ-ಬೆಳೆಯಾಗಿ, ಸಕಲ ಪ್ರಜೆಗಳು ರೋಗ ಭಯ, ಮರಣ ಭಯ ಬಿಟ್ಟು ಕ್ಷೇಮದಿಂದ ಇರಬೇಕಾದರೆ ದತ್ತನನ್ನು ಭಜಿಸಿ, ಪೂಜಿಸಿ, ಸಂದರ್ಶಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net