

ಬೆಂಗಳೂರು: ರೈತರು, ಕನ್ನಡಪರ ಹೋರಾಟಗಾರರ ವಿರುದ್ಧದ ಕ್ರಿಮಿನಲ್ ದಾವೆಗಳನ್ನು ಅಭಿಯೋಜನೆಯಿಂದ ಪಡೆಯುವ ಜತೆಗೆ ಕಾಂಗ್ರೆಸ್ ಮುಖಂಡರು, ಪೊಲೀಸ್ ಠಾಣೆ ಮೇಲೆ ದಾಳಿಯಿಟ್ಟವರ (Attackers) ವಿರುದ್ಧ ಕೇಸ್ಗಳನ್ನು ರಾಜ್ಯ ಸರ್ಕಾರ ಹಿಂಪಡೆದು, ಚರ್ಚೆ ಹುಟ್ಟುಹಾಕಿದೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯು 2008ರಿಂದ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 43 ಕ್ರಿಮಿನಲ್ ದಾವೆಗಳನ್ನು ಅಭಿಯೋಜನೆಯಿಂದ ಕೈ ಬಿಡಲು ತೀರ್ವನಿಸಿದೆ. ಕೈಬಿಟ್ಟ ಪ್ರಕರಣಗಳಲ್ಲಿ ಕೋವಿಡ್ ಲಾಕ್ಡೌನ್, ನಿರ್ಬಂಧ ಕಾಲದ್ದು ಸೇರಿ ರೈತರು, ಕನ್ನಡಪರ ಚಳವಳಿಗಾರರದೇ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ‘ಸಂತೆಯಲ್ಲಿ ಸಮಾರಾಧನೆ’ ರೀತಿ ಕೆಲವು ಗಂಭೀರ ಸ್ವರೂಪದ ಮೊಕದ್ದಮೆಗಳು ಕೈಬಿಟ್ಟ ಪಟ್ಟಿಯಲ್ಲಿ ಸೇರಿರುವುದು ಗಮನಾರ್ಹ.
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೇರ ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿರುವುದು ಇನ್ನೂ ಹಸಿಯಾಗಿದೆ. ಕಾಂಗ್ರೆಸ್ ಮುಖಂಡರ ವಿರುದ್ಧದ ಇದೇ ಮಾದರಿ ದಾವೆಯನ್ನು ಸರ್ಕಾರ ಹಿಂಪಡೆದಿದೆ. ತುಮಕೂರಿನ ಗಾಂಧಿನಗರದ ಸಾರ್ವಜನಿಕ ಸ್ಥಳದಲ್ಲಿ ‘ಪೇ ಎಂಎಲ್ಎ’ ಭಿತ್ತಿಪತ್ರವನ್ನು ಅಂಟಿಸುತ್ತಿದ್ದ ನಾಲ್ವರನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿದ್ದರು. ಚುನಾವಣೆ ಸಮಯದಲ್ಲಿ ಗಲಾಟೆ ಸಾಧ್ಯತೆ ತಡೆಯಲು ಪೊಲೀಸರು ಈ ಕ್ರಮ ಕೈಗೊಂಡರೆ, ತುಮಕೂರಿನ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಹೇಳಿಕೊಂಡ ಶಶಿಹುಲಿಕುಂಟೆ ಫೋನ್ ಮುಖೇನ ಪ್ರತಿಭಟನೆ ಮಾಡಿಸುತ್ತೇನೆಂದು ಬೆದರಿಕೆ ಹಾಕಿದ್ದ. ಇಷ್ಟು ಸಾಲದೆ ಠಾಣೆಗೆ ಧಾವಿಸಿ ವಶಕ್ಕೆ ಪಡೆದ ಹುಡುಗರನ್ನು ಬಿಡದಿದ್ದರೆ ಹಣ, ವಸ್ತು ತೆಗೆದುಕೊಂಡಿದ್ದಾರೆ ಎಂದು ಜನರನ್ನು ಸೇರಿಸಿ ಪ್ರತಿಭಟನೆ ಮಾಡಿಸುತ್ತೇವೆ. 3 ತಿಂಗಳ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಆಗ ನೋಡಿಕೊಳ್ಳುವೆ ಎಂಬ ಬೆದರಿಕೆ ಹಾಕಿದ ಕೇಸ್ ಕೈಬಿಡಲಾಗಿದೆ.
ಠಾಣೆ ಮೇಲೆ ದಾಳಿ ಮಾಡಿದ್ದವರು ನಿರಾಳ: ಇಸ್ಲಾಂ ಧರ್ಮದ ಬಗ್ಗೆ ವಾಟ್ಸ್ಆಪ್ ಸ್ಟೇಟಸ್ನಲ್ಲಿ ಅವಹೇಳನಕಾರಿ ಸಂಗತಿ ಹಂಚಿ ಕೊಂಡಿದ್ದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಉದ್ರಿಕ್ತಗೊಂಡು 100-150 ಜನರ ಗುಂಪು 2022ರ ಏ.16 ರಂದು ಹಳೇ ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿತ್ತು. ಆರೋಪಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಕಲ್ಲು, ಬಡಿಗೆಯಿಂದ ಪೊಲೀಸ್ ಅಧಿಕಾರಿ- ಸಿಬ್ಬಂದಿಗೆ ಹಲ್ಲೆ ಮಾಡಿ ಗಾಯ ಮಾಡಿ, ಠಾಣೆ ಮುಂದೆ ನಿಲ್ಲಿಸಿದ್ದ ಸರ್ಕಾರಿ ಮತ್ತು ಸಾರ್ವಜನಿಕರ ವಾಹನಗಳಿಗೆ ಹಾನಿ ಮಾಡಿದ್ದರು. ಈ ಪ್ರಕರಣ ಇದೀಗ ಕೈಬಿಡಲಾಗಿದೆ.
2023ರಲ್ಲಿ ಸದಾಶಿವ ನಗರದ ರಮೇಶ್ ಜಾರಕಿಹೊಳಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ 20-30 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣ ಕೈಬಿಡಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿಯವರು ಡಿ.ಕೆ.ಶಿವಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಪ್ರತಿಭಟನಾಕಾರರು ಖಂಡಿಸಿದ್ದರು.