

ಶಿವಮೊಗ್ಗ: ಬಿ.ಎಚ್.ರಸ್ತೆಯ ದೀಪಕ್ ಪೆಟ್ರೋಲ್ ಬಂಕ್ ಹಿಂಭಾಗ ಗುರುವಾರ ಬೆಳಗ್ಗೆ ಬಜರಂಗದಳದ ನಗರ ಸಹ ಸಂಚಾಲಕ ನಾಗೇಶ್ ಮೇಲೆ ದುಷ್ಕಮಿರ್ಗಳ ಗುಂಪು ಹಲ್ಲೆ ನಡೆಸಿದೆ. ಈ ಘಟನೆ ನಂತರ ಟೆಂಪೋ ಸ್ಟಾಂಡ್, ಕೆ.ಆರ್.ಪುರಂ ಪ್ರದೇಶದಲ್ಲಿ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ಆಟೋ ಮತ್ತು ಬೈಕ್ ಜಖಂಗೊಳಿಸಲಾಗಿದೆ.
ಘಟನೆಯಲ್ಲಿ ಒಟ್ಟು 11 ಜನ ಗಾಯಗೊಂಡಿದ್ದು, ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ನಾಗೇಶ್ಗೆ ಸ್ವಲ್ಪ ಹೆಚ್ಚು ಪೆಟ್ಟು ಬಿದ್ದಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಘಟನೆಯ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ನಿರ್ದೇಶನ ನೀಡಿದರು.
ಈ ಬೆಳವಣಿಗೆಯಿಂದ ಗಾಂಧಿ ಬಜಾರ್ ಮತ್ತು ಚೋರ್ ಬಜಾರ್ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ನಗರದೆಲ್ಲಡೆ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಘಟನೆ ಖಂಡಿಸಿ ಬಜರಂಗದಳದ ಕಾರ್ಯಕರ್ತರು ಮತ್ತು ಹಿಂದೂಪರ ಸಂಟನೆಗಳ ಮುಖಂಡರು ಗಾಂಧಿಬಜಾರ್ನಲ್ಲಿ ಪ್ರತಿಭಟನೆ ನಡೆಸಿದರು.
ತಂಡ ರಚನೆ: ಹಲ್ಲೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗೆ ಸೈಬರ್ ಕ್ರೈಂ, ರೌಡಿ ನಿಗ್ರಹ ದಳ ಇನ್ಸ್ಪೆಕ್ಟರ್ ಗುರುರಾಜ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಎಲ್ಲ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.
ಶಿವಮೊಗ್ಗದ ಗಾಂಧಿ ಬಜಾರ್ ಸೇರಿ ಹಲವೆಡೆ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ. ಪರಿಸ್ಥಿತಿಯನ್ನು ಅವಲೋಕಿಸಿದ್ದು ಜನ ಭಯಪಡುವ ಅಗತ್ಯವಿಲ್ಲ. ಈಗಾಗಲೇ ಪೊಲೀಸ್ ಭದ್ರತೆ ಕಲ್ಪಿಸಿದ್ದು ಪ್ರತಿಯೊಬ್ಬರೂ ಶಾಂತಿ ಕಾಪಾಡುವ ಅಗತ್ಯತೆ ಇದೆ ಎಂದು ದಾವಣಗೆರೆ ಪೂರ್ವ ವಲಯ ಐಜಿ ಎಸ್.ರವಿ ಮನವಿ ಮಾಡಿದ್ದಾರೆ.