ಎಟಿಎಂ ಬೂತ್ ಹ್ಯಾಕ್; 21 ಲಕ್ಷ ರೂ. ಕನ್ನ

atm
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಟಿಎಂ ಬೂತ್ ಹ್ಯಾಕ್ ಮಾಡಿ ಕನ್ನ ಹಾಕುವ ಗ್ಯಾಂಗ್ ಕಾಲಿಟ್ಟಿದೆ.

ಬ್ಯಾಂಕ್‌ನಿಂದ ಎಟಿಎಂಗೆ ಸಂಪರ್ಕ ಕಲ್ಪಿಸಿದ್ದ ಲ್ಯಾನ್ ಕೇಬಲ್ ಅನ್ನು ಕನೆಕ್ಟ್ ಮಾಡಿಕೊಂಡು ಎಟಿಎಂ ಮಷಿನ್ ಹ್ಯಾಕ್ ಮಾಡಿ ಬರೋಬ್ಬರಿ 21.55 ಲಕ್ಷ ರೂ.ಗಳನ್ನು ಸೈಬರ್ ಕಳ್ಳರು ದೋಚಿದ್ದಾರೆ. ಈ ಪ್ರಕರಣ ಪೊಲೀಸರಿಗೆ ಸವಾಲಾಗಿದೆ.

ಚಾಮರಾಜಪೇಟೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಎಟಿಎಂ ಬೂತ್‌ಗೆ ಕನ್ನ ಹಾಕಲಾಗಿದೆ. ಬ್ಯಾಂಕ್ ವ್ಯವಸ್ಥಾಪಕ ಅಹ್ಮದ್ ಸೈಯದ್ ದೂರು ನೀಡಿದ್ದು, ದಕ್ಷಿಣ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

2022ರ ಫೆಬ್ರವರಿ.27ರಿಂದ ಮಾ.6ರ ನಡುವೆ ಅಪರಿಚಿತ ವ್ಯಕ್ತಿಗಳು, ಎಟಿಎಂ ಬೂತ್‌ನ ಲ್ಯಾನ್ ಕೇಬಲ್ ಅನ್ನು ಅವರ ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ. ಆ ಮೂಲಕ ಸೆಂಟ್ರಲ್ ಸ್ವಿಚ್‌ನಿಂದ ಎಟಿಎಂ ಮಷಿನ್  ಮಾಡಿ ಡಿಸ್‌ಕನೆಕ್ಟ್ ಮಾಡಿದ್ದಾರೆ. ಬಳಿಕ ಎರಡು ಎಟಿಎಂ ಕಾರ್ಡ್ ಬಳಸಿಕೊಂಡು ಹಂತಹಂತವಾಗಿ 21.55 ಲಕ್ಷ ರೂ. ವಿತ್ ಡ್ರಾ ಮಾಡಿದ್ದಾರೆ.

ಅಂದರೆ, ಎಟಿಎಂ ಬೂತ್ ಐಡಿ ನಂಬರ್ ಕದ್ದು ಹ್ಯಾಕ್ ಮಾಡಿದ್ದಾರೆ. ಬಳಿಕ ಟ್ಯಾಂಪರ್ ಮಾಡಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿದ್ದಾರೆ. ಆ ಹಣ ಯಾರ ಬ್ಯಾಂಕ್ ಖಾತೆಯಿಂದಲೂ ಉಲ್ಲೇಖವಾಗಿಲ್ಲ. ಬದಲಿಗೆ ಮಷಿನ್‌ನಿಂದ ಹಣ ಡ್ರಾ ಆಗಿರುವುದು ಮಾತ್ರ ತೋರಿಸುತ್ತಿದೆ ಎಂದು ದೂರಿನಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕೃತ್ಯದಲ್ಲಿ ತಾಂತ್ರಿಕವಾಗಿ ನಿಪುಣ ಹೊಂದಿರುವ ಕಳ್ಳರೇ ಕೃತ್ಯ ಎಸಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net