ದೆಹಲಿ ಮುಂದಿನ ಸಿಎಂ ಅತಿಶಿ: ಕೇಜ್ರಿವಾಲ್ ಪ್ರಸ್ತಾಪಕ್ಕೆ ಎಎಪಿ ಶಾಸಕರ ಸರ್ವಾನುಮತ

ವಿಜಯವಾಣಿ - 2024-09-17T120516.138
Published on

ನವದೆಹಲಿ: ಭಾನುವಾರ (ಸೆ.15) ಮುಂದಿನ 48 ಗಂಟೆಗಳೊಳಗೆ ತಮ್ಮ ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಘೋಷಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದೇ ತಡ ಮುಂದಿನ ದೆಹಲಿ ಸಿಎಂ ಯಾರು ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ತಮ್ಮ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿದರೆ ಮುಂದೆ ಅವರ ಪಕ್ಷದಿಂದ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಕೌತುಕದ ಪ್ರಶ್ನೆಗೆ ಇದೀಗ ಕಡೆಗೂ ಉತ್ತರ ಲಭಿಸಿದ್ದು, ನೂತನ ದೆಹಲಿ ಮುಖ್ಯಮಂತ್ರಿಗಳಾಗಿ ಸಚಿವೆ ಅತಿಶಿ ಅಧಿಕಾರ ಸ್ವೀಕರಿಸಿದ್ದಾರೆ.

ಇಂದು ಬೆಳಗ್ಗೆ 11:30ಕ್ಕೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವೆ ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದ ಕೇಜ್ರಿವಾಲ್, ಸಚಿವೆಯನ್ನೇ ದೆಹಲಿಯ ನೂತನ ಮುಖ್ಯಮಂತ್ರಿಗಳನ್ನಾಗಿ ಮಾಡೋಣ ಎಂದು ಶಾಸಕರ ಒಪ್ಪಿಗೆ ಕೇಳಿದರು. ಇದಕ್ಕೆ ಅಮ್​ ಆದ್ಮಿ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದರು. ಇದು ವಿಶೇಷ. ಮೂಲ ಮಾಹಿತಿಗಳ ಪ್ರಕಾರ, ಇಲ್ಲಿ ಉಪಮುಖ್ಯಮಂತ್ರಿ ಇರುವುದಿಲ್ಲ. ಇದೇ ಸೆಪ್ಟೆಂಬರ್ 26 ಮತ್ತು 27ರಂದು ನಡೆಯಲಿರುವ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಅತಿಶಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.

ನವದೆಹಲಿಯಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಮಹಾರಾಷ್ಟ್ರ ಚುನಾವಣೆಯ ಜತೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಸಬೇಕೆಂದು ಅರವಿಂದ್​ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. “ನಾನು ಜನರ ಬಳಿಗೆ ಹೋಗುತ್ತೇನೆ. ಮರುಚುನಾವಣೆ ನಂತರವೇ ಉನ್ನತ ಕಚೇರಿಗೆ ವಾಪಾಸ್ ಬರುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ” ಹೇಳಿದ್ದಾರೆ.

ಹೊಸ ಅಬಕಾರಿ ನೀತಿ ಕೇಸ್​ನಲ್ಲಿ ಆರು ತಿಂಗಳ ಕಾಲ ಜೈಲುವಾಸ ಅನುಭವಿಸಿದ ಕೇಜ್ರಿವಾಲ್​, ಇದೇ ಸೆ.13ರಂದು ನ್ಯಾಯಾಲಯ ನೀಡಿದ ಷರತ್ತುಬದ್ಧ ಜಾಮೀನಿನ ಆಧಾರದ ಮೇರೆಗೆ ಜೈಲಿನಿಂದ ಹೊರಬಂದರು. ರಿಲೀಸ್ ಆದ ತಕ್ಷಣವೇ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ನನ್ನ ಮೇಲೆ ಬಂದಿರುವ ಆರೋಪಗಳು ಸುಳ್ಳು. ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ಬೇಕಿದೆ” ಎಂಬುದನ್ನು ಒತ್ತಿ ಹೇಳಿದರು. ಈ ಹೇಳಿಕೆಯ ಬೆನ್ನಲ್ಲೇ ತಮ್ಮ ಕುರ್ಚಿ ಬಿಟ್ಟುಕೊಟ್ಟ ಕೇಜ್ರಿವಾಲ್​, ಆ ಸ್ಥಾನಕ್ಕೆ ಇದೀಗ ಅತಿಶಿ ಅವರನ್ನು ಕೂರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net