ಇದರಿಂದ ನಿಮಗೇನು ಉಪಯೋಗವಿಲ್ಲ ಬಿಟ್ಟಾಕಿ! ಫ್ಯಾನ್ಸ್​ಗೆ ನಟ ನಾಗಚೈತನ್ಯ ತಿಳಿಸಿದ್ದ ಕಿವಿಮಾತಿದು

ವಿಜಯವಾಣಿ - 2024-09-17T114534.123
Published on

ತೆಲಂಗಾಣ: ತೆಲುಗು ಚಿತ್ರರಂಗದ ಸ್ಟಾರ್​ ನಟ ನಾಗಚೈತನ್ಯ ಕಳೆದ ಕೆಲವು ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದು ಕೇವಲ ಒಂದೇ ಒಂದು ವಿಚಾರದಿಂದ. ಅದು ಸೌತ್​ ಬ್ಯೂಟಿ ಸಮಂತಾರಿಗೆ ವಿಚ್ಛೇದನ ಕೊಟ್ಟಿದ್ದಕ್ಕಲ್ಲ. ಬದಲಿಗೆ ಸದ್ದಿಲ್ಲದೇ ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ. ಈ ವಿಷಯ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ನಟನಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಸಖತ್​ ಜೋಡಿಗಳಲ್ಲಿ ಸಮಂತಾ-ನಾಗಚೈತನ್ಯ ಕೂಡ ಒಬ್ಬರು ಎಂದು ಕೊಂಡಾಡುತ್ತಿದ್ದ ಫ್ಯಾನ್ಸ್​, ಸ್ಯಾಮ್​ಗೆ ಡಿವೋರ್ಸ್​ ನೀಡಿ ತಪ್ಪು ಮಾಡಿದ್ದೀರಿ ಎಂದೆಲ್ಲಾ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹೊರಹಾಕಿದ್ದರು. ಸದ್ಯದ ಮಟ್ಟಿಗೆ ಈ ವಿವಾದಗಳು ಗಾಳಿಯಂತೆ ಬೀಸಿ ಹೋಗಿದ್ದು, ಹಳೆಯ ಕುತೂಹಲಕಾರಿ ವಿಷಯವೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಸಮಂತಾರನ್ನು ಪ್ರೀತಿಸಿ, ಮದುವೆಯಾಗಿದ್ದ ನಾಗಚೈತನ್ಯ, ತಮ್ಮ ಎಡಗೈನಲ್ಲಿ ವಿಶೇಷ ಟ್ಯಾಟುವೊಂದನ್ನು ಹಾಕಿಸಿಕೊಂಡಿದ್ದಾರೆ. ತಾವು ಅಭಿನಯಿಸಿದ 'ಲಾಲ್​ ಸಿಂಗ್ ಚಡ್ಡಾ' ಚಿತ್ರದ ಪ್ರಚಾರದ ವೇಳೆ ನಡೆದ ಸಂದರ್ಶನದಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ನಟ, ಆ ಟ್ಯಾಟೂ ಹಿಂದಿರುವ ಕಾರಣವೇನು? ಅದನ್ನೇ ಏಕೆ ಹಾಕಿಸಿಕೊಂಡಿರುವೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಸರಿಯಾಗಿ ವಿವರಿಸಿದರು. "ನನ್ನ ಒಂದಷ್ಟು ಫ್ಯಾನ್ಸ್​ಗಳು ಈ ಟ್ಯಾಟೂ ಅರ್ಥವೇನು ಎಂದು ತಿಳಿಯದೆ, ಸುಮ್ಮನೆ ತಾವುಗಳು ಕೂಡ ಇದೇ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಪೈಕಿ ಕೆಲವರನ್ನು ನಾನು ನೇರವಾಗಿ ಭೇಟಿಯಾಗಿ, ಇದು ನಿಮಗಲ್ಲ. ನನಗೆ ಮಾತ್ರ ಸೀಮಿತವಾದದ್ದು ಎಂದು ಹೇಳಿದ್ದೇನೆ" ಎಂದಿದ್ದಾರೆ.

"ನನ್ನ ಟ್ಯೂಟುವನ್ನು ನೀವು ಫಾಲೋ ಮಾಡಬೇಡಿ. ಇದೇ ರೀತಿ ಕಾಪಿ ಮಾಡಿ, ಹಾಕಿಸಿಕೊಳ್ಳಬೇಡಿ ಎಂದು ನಾನು ಅವರಿಗೆ ಹೇಳಿದ್ದೇನೆ. ಏಕೆಂದರೆ, ಇದು ನನ್ನ ಮತ್ತು ಸಮಂತಾ ನಡುವಿನ ಸಂಬಂಧದ ಸಂಕೇತ. ಇದರಲ್ಲಿ ನಮ್ಮಿಬ್ಬರ ಮದುವೆ ದಿನಾಂಕ ಅಡಗಿದೆ. ನಾವು ವಿವಾಹವಾದ ದಿನವನ್ನು ಟ್ಯಾಟೂವಿನಲ್ಲಿ ಹಾಕಿಸಿಕೊಂಡಿದ್ದೇನೆ. ಇದೊಂದು ಕಾರಣದಿಂದ ನಾನು ನನ್ನ ಅಭಿಮಾನಿಗಳಿಗೆ ಇದೇ ರೀತಿಯಲ್ಲಿ ನೀವು ಹಾಕಿಸಿಕೊಳ್ಳುವುದು ಬೇಡ ಎಂದಿದ್ದೆ" ಎಂದು ನಾಗಚೈತನ್ಯ ಹೇಳಿದ್ದರು.

ಇದೇ ವಿಷಯವನ್ನು ಸಮಂತಾ ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕವು ನಟನಿಗೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅವರು, "ಇಲ್ಲಿಯವರೆಗೂ ಆ ರೀತಿಯ ಯೋಚನೆಗಳು ನನಗೆ ಬಂದಿಲ್ಲ. ಬದಲಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇರಲಿ ತೊಂದರೆಯಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net