

ಕರೊನಾ ಮತ್ತು ದಿಗ್ಬಂಧನ ಸಂಕಷ್ಟದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದು ಗೊತ್ತಿರುವಂಥದ್ದೇ. ಆಯಾ ವಲಯಗಳಿಗೆ ನೀಡಿರುವ ನೆರವನ್ನು ನಾಲ್ಕು ಕಂತುಗಳಲ್ಲಿ ವಿವರಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಐದನೇ ಮತ್ತು ಕೊನೆಯ ಚರಣದಲ್ಲಿ ಎಂಟು ವಲಯಗಳಿಗೆ ನೆರವನ್ನು ಪ್ರಕಟಿಸಿದರು. ಉದ್ಯೋಗ ಖಾತ್ರಿ ಯೋಜನೆಗೆ ಈ ಹಿಂದೆ ಒದಗಿಸಲಾಗಿದ್ದ 61 ಸಾವಿರ ಕೋಟಿ ರೂ. ಅನುದಾನದ ಜತೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಮಹಾನಗರಗಳಿಂದ ಹಳ್ಳಿಗಳಿಗೆ ಮರಳಿರುವ ಕಾರ್ವಿುಕರಿಗೆ ಅವರ ಊರುಗಳಲ್ಲೇ ಕೆಲಸ ಸಿಗಲು ಇದರಿಂದ ಅನುವಾಗಲಿದೆ. ‘ಪ್ರಧಾನಮಂತ್ರಿ ಇ ವಿದ್ಯಾ’ ಹೆಸರಿನಲ್ಲಿ ಬಹುಆಯಾಮದ ಡಿಜಿಟಲ್ ಮತ್ತು ಆನ್ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಆನ್ಲೈನ್ ಕೋರ್ಸ್ ಆರಂಭಿಸಲು 100 ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಲಾಗಿದೆ. ಸರ್ಕಾರಿ ಉದ್ಯಮಗಳ ಖಾಸಗೀಕರಣಕ್ಕೆ ಒತ್ತು ನೀಡಿರುವ ಜತೆಗೆ ಕಂಪನಿಗಳ ದಿವಾಳಿತನ ಮಿತಿ ಒಂದು ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ರಾಜ್ಯ ಜಿಡಿಪಿಯ ಶೇಕಡ 3ರಿಂದ ಶೇಕಡ 5ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಆರೋಗ್ಯ ಸಿಬ್ಬಂದಿಗೆ 14 ದಿನದ ಕ್ವಾರಂಟೈನ್ ಅಗತ್ಯವಿಲ್ಲ
ಕಳೆದ ಐದೂ ದಿನದ ಘೋಷಣೆಗಳನ್ನು ಅವಲೋಕಿಸಿದರೆ ರೈತರು, ಶ್ರಮಿಕ ವರ್ಗ, ಕಿರು, ಸಣ್ಣ, ಮಧ್ಯಮ ಕೈಗಾರಿಕೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ತೆರಿಗೆ ಸುಧಾರಣೆ ಸೇರಿ ಹಲವು ವಲಯಗಳಿಗೆ ನೆರವಿನ ಅಭಯ ಸಿಕ್ಕಿದೆ.
ಲಾಕ್ಡೌನ್ ಮುಗಿಯುತ್ತಿದ್ದಂತೆ ಕೃಷಿ, ಕೈಗಾರಿಕೆಗಳು ಸೇರಿ ಇತರೆ ರಂಗಗಳು ಮುಂದೇನು ಎಂಬ ಚಿಂತೆಯಲ್ಲಿ ಮುಳುಗುವ ಬದಲು ಸರ್ಕಾರದ ನೆರವುಗಳನ್ನು ಸದುಪಯೋಗ ಮಾಡಿಕೊಂಡು ಹಣಕಾಸು ಚಟುವಟಿಕೆಗಳನ್ನು ಚುರುಕುಗೊಳಿಸಲು ಯತ್ನಿಸಬಹುದಾಗಿದೆ. ಸದ್ಯದ ಪರಿಸ್ಥಿತಿ ಕ್ಲಿಷ್ಟ ಮತ್ತು ಸವಾಲಿನಿಂದ ಕೂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಸರ್ಕಾರದ ಸಕಾಲಿಕ ನೆರವಿನಿಂದ ಬೆಳವಣಿಗೆಯ ಹೊಸಹಾದಿಯನ್ನು ಹುಡುಕಿಕೊಳ್ಳಲು ನೆರವಾಗಲಿದೆ ಎಂಬುದು ಆರ್ಥಿಕ ತಜ್ಞರ ಅಭಿಮತ. ಈವರೆಗೆ, 20 ಕೋಟಿ ಮಹಿಳೆಯರ ಜನಧನ ಖಾತೆಗೆ ನಗದು ವರ್ಗಾವಣೆ ಮಾಡಲಾಗಿದೆ. ಉಜ್ವಲಾ ಯೋಜನೆ ಅಡಿ ಬಡ ಕುಟುಂಬಗಳಿಗೆ 6.81 ಕೋಟಿ ಉಚಿತ ಗ್ಯಾಸ್ ಸಿಲಿಂಡರ್ಗಳ ವಿತರಣೆ ನಡೆದಿದೆ. ಅಲ್ಲದೆ, 8 ಕೋಟಿ ವಲಸೆ ಕಾರ್ವಿುಕರಿಗೆ ಉಚಿತ ಪಡಿತರ ವಿತರಿಸಲಾಗುತ್ತಿರುವುದು ಸಾಧಾರಣ ಕ್ರಮಗಳೇನಲ್ಲ.
ಪ್ರತಿಪಕ್ಷಗಳು ಪ್ಯಾಕೇಜ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ಇನ್ನಷ್ಟು ನೆರವು ಬೇಕಿತ್ತು ಎಂದಿದ್ದಾರೆ. ಇದು ಸಂಕಷ್ಟದ ಹೊತ್ತು. ರಾಜಕಾರಣವನ್ನು, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ. ಹಾಗೆಯೇ, ಕೇಂದ್ರ-ರಾಜ್ಯ ಸರ್ಕಾರಗಳು ಸಮನ್ವಯದಿಂದ ಮುಂದೆ ಸಾಗಬೇಕಿದೆ. ಮತ್ತು ವಿಶೇಷ ಪ್ಯಾಕೇಜಿನ ಘೋಷಣೆಗಳು ಪರಿಣಾಮಕಾರಿಯಾಗಿ ಆಯಾ ವಲಯಕ್ಕೆ, ನೈಜ ಫಲಾನುಭವಿಗಳಿಗೆ ತಲುಪುವಂತೆ ಅನುಷ್ಠಾನಕ್ಕೆ ತರಬೇಕಿದೆ.