

ತುಮಕೂರು: ಚಾಕು ಹಿಡಿದ ವಿದೇಶಿ ಮಹಿಳೆಯರು ಪೊಲೀಸರ ಮೇಲೇ ಹಲ್ಲೆ ಮಾಡಿ ಹತ್ಯೆ ಮಾಡಲು ಯತ್ನಿಸಿದ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೆಬಲ್ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ತುಮಕೂರಿನ ದಿಬ್ಬೂರಿನಲ್ಲಿರುವ ವಿದೇಶಿ ಪ್ರಜೆಗಳ ನಿರಾಶ್ರಿತ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರಕಲಾ, ಪೊಲೀಸ್ ಕಾನ್ಸ್ಟೆಬಲ್ ತಾಸೀನಾ ಬಾನು, ನಿರಾಶ್ರಿತರ ಕೇಂದ್ರದ ಚಾಲಕ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಗಾಯಗೊಂಡವರು.
ಪಾಸ್ಪೋರ್ಟ್ ಅವಧಿ ಮುಗಿದವರನ್ನು ಇರಿಸುವ ನಿರಾಶ್ರಿತರ ಕೇಂದ್ರದಲ್ಲಿದ್ದ ನಾಲ್ವರು ಉಗಾಂಡ ದೇಶದ ಮಹಿಳೆಯರು ಈ ಕೃತ್ಯವೆಸಗಿದ್ದಾರೆ. ನಿರಾಶ್ರಿತರ ಕೇಂದ್ರಕ್ಕೆ ಗ್ಯಾಸ್ ಸಿಲಿಂಡರ್ ನೀಡಲು ಹೋಗಿದ್ದಾಗ ಇವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಉಗಾಂಡ ಮಹಿಳೆಯರು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಈ ನಿರಾಶ್ರಿತರ ಕೇಂದ್ರದಲ್ಲಿ 30 ವಿದೇಶಿಗರು ಇದ್ದು, ಗ್ಯಾಸ್ ಸಿಲಿಂಡರ್ ನೀಡಲು ಹೋದಾಗ ನಾಲ್ವರು ಮಹಿಳೆಯರು ಇವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಸೇರಿ ನಾಲ್ವರಿಗೂ ಕೈಕಾಲುಗಳಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.