

ಅಸ್ಸಾಂ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಪೊಲೀಸರು, ಸರ್ಕಾರಗಳು ಹೇಳುತ್ತಲೇ ಇದ್ದರೂ ಎಷ್ಟೋ ಮಂದಿ ಅದರ ಪಾಲನೆ ಮಾಡುತ್ತಲೇ ಇಲ್ಲ.
ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹೊಸದೊಂದು ಉಪಾಯ ಕಂಡುಹಿಡಿದಿದೆ. ಅದೇನೆಂದರೆ ಛತ್ರಿ ವಿತರಣೆ.
ಕರೊನಾ ಹಬ್ಬುವುದನ್ನು ತಪ್ಪಿಸಲು ಸಾಮಾಜಿಕ ಅಂತರದ ಮಹತ್ವ ತಿಳಿಸುತ್ತಿರುವ ಅಸ್ಸಾಂ ರೈಫಲ್ಸ್ ಈಶಾನ್ಯ ರಾಜ್ಯವಾದ ಮಿಝೋರಾಂನಲ್ಲಿ ನಡೆಸುತ್ತಿರುವ ವಿಶೇಷವಾದ ಅಭಿಯಾನ ಇದಾಗಿದೆ.
ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ಅಡಿಯಲ್ಲಿ ಬರುವ ಅಸ್ಸಾಂ ರೈಫಲ್ಸ್, ಮಿಝೋರಾಂನ ಐಝಾಲ್ ಜಿಲ್ಲೆಯ ಕೆಲ ಊರುಗಳಲ್ಲಿ ಮಾನ್ಸೂನ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಛತ್ರಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ.
ಇದು ಮಳೆಗಾಲಕ್ಕೂ ಆಯಿತು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೂ ಸಾಧ್ಯ ಎನ್ನುತ್ತಿದೆ ಸರ್ಕಾರ, ಇಲ್ಲಿಯ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಿ ಹೇಳುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಮಳೆಗಾಲ ಆಗಿರುವ ಕಾರಣ, ಛತ್ರಿ ನೀಡಲಾಗಿದೆ. ಅದರೆ ಮಳೆ ಇಲ್ಲದಿದ್ದರೂ ಈ ಛತ್ರಿಗಳನ್ನು ಕಡ್ಡಾಯವಾಗಿ ಬಳಸುವಂತೆ ಹೇಳಲಾಗಿದೆ.
ಆಸ್ಸಾಂ ರೈಫಲ್ಸ್‌ನ ಈ ಕ್ರಮಕ್ಕೆ ಗ್ರಾಮಸ್ಥರುಗಳಿಂದ ಅತ್ಯುತ್ತಮ ಪ್ರತಿಕ್ರಿಯೆಗಳು ಬಂದಿದೆ. ಛತ್ರಿಗಳನ್ನು ಸದಾ ಹಿಡಿದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನಿಂತಾನೇ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ, ಈ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗತೊಡಗಿವೆ. (ಏಜೆನ್ಸೀಸ್)