

ದಿಸ್ಪುರ್: ಪೊಲೀಸ್ ಅಧಿಕಾರಿಗೆ 15 ಲಕ್ಷ ರೂ. ಲಂಚ ನೀಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ಪೊಲೀಸರು ಮಾರಿಗಾಂವ್ ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇಂದ್ರ ಅಸ್ಸಾಂ ಜಿಲ್ಲೆಯ ಮೊಯಿರಾಬಾರಿ ಏರಿಯಾ ನಿವಾಸಿ ಮನ್ನಾಸ್ ಅಲಿ ಎಂದು ಗುರುತಿಸಲಾಗಿದೆ. ಪೊಲೀಸ್ ಕಚೇರಿಯಲ್ಲೇ 15 ಲಕ್ಷ ರೂ. ಲಂಚ ನೀಡುವಾಗ ಮಾರಿಗಾಂವ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಂದ ಸಿಂಗ್ ಬಾರ್ಕೋಲ ರೆಡ್ ಹ್ಯಾಂಡ್ ಆಗಿ ಹಿಡಿದು ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಂದ ಸಿಂಗ್ ಬಾರ್ಕೋಲ, ಮೊಯಿರಾಬಾರಿ ಏರಿಯಾದಲ್ಲಿ ಅಕ್ರಮವಾಗಿ ಬೆಲ್ಲದ ಪಾಕ ತಯಾರಿಸುತ್ತಿದ್ದ ಐದು ಕಾರ್ಖಾನೆಗಳ ಮೇಲೆ ಪೊಲೀಸರು ಆಗಸ್ಟ್ 8ರಂದು ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಮಾಹಿತಿ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಐದು ಅಕ್ರಮ ಕಾರ್ಖಾನೆಗಳ ಮಾಲೀಕ ಪರಾರಿಯಾಗಿದ್ದಾರೆ. ಪ್ರಕರಣವನ್ನು ಹೇಗಾದರೂ ನಿರ್ವಹಣೆ ಮಾಡುವಂತೆ ನನಗೆ ಲಕ್ಷಾಂತರ ರೂಪಾಯಿ ಲಂಚ ನೀಡಲು ಯತ್ನಿಸಿದರು. ಇಂದು ವ್ಯಕ್ತಿಯೊಬ್ಬ ಬ್ಯಾಗ್ನಲ್ಲಿ ರಹಸ್ಯವಾಗಿ 15 ಲಕ್ಷ ರೂ.ನೊಂದಿಗೆ ನನ್ನ ಕಚೇರಿಗೆ ಆಗಮಿಸಿದ. ತಕ್ಷಣ ಆರೋಪಿಯನ್ನು ಹಿಡಿದುಕೊಳ್ಳುವಂತೆ ಸಹೋದ್ಯೋಗಿಗಳಿಗೆ ಹೇಳಿದೆ. ಆತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಂದು ಬಾರ್ಕೋಲ ಹೇಳಿದ್ದಾರೆ.
ಸದ್ಯ ಆರೋಪಿಯಿಂದ ಪೊಲೀಸರು 15 ಲಕ್ಷ ರೂ. ವಶಕ್ಕೆ ಪಡೆದಿದ್ದು, ಆತನ ವಿರುದ್ಧ ವಿವಿಧ ಪ್ರಕರಣಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. (ಏಜೆನ್ಸೀಸ್)