ಅವಳಿ ದತ್ತು ಪುತ್ರಿಯರಿಗೆ ಕಿರುಕುಳ; ಸಿಗರೇಟ್​ನಿಂದ ಸುಟ್ಟು ವಿಕೃತಿ ಮೆರೆದ ವೈದ್ಯ ದಂಪತಿ

doctor
Published on

ಅಸ್ಸಾಂ: ಅವಳಿ ದತ್ತು ಪುತ್ರಿಯರನ್ನು ಮನೆಯಲ್ಲಿ ಬಂಧಿಸಿಟ್ಟು, ಕಿರುಕುಳ ನೀಡಿದ ಆರೋಪದಲ್ಲಿ ವೈದ್ಯ ದಂಪತಿಯನ್ನು ಕಳೆದ ಶುಕ್ರವಾರ(ಮೇ.5) ಪೊಲೀಸರು ಬಂಧಿಸಿರುವ ಘಟನೆ ಗುವಾಹಟಿಯಲ್ಲಿ ನಡೆದಿತ್ತು. ವೈದ್ಯರಾದ ಡಾ. ವಲಿಯುಲ್ ಇಸ್ಲಾಂ ಮತ್ತು ಡಾ. ಸಂಗೀತಾ ದತ್ತಾ ಬಂಧಿತರು. ಇದೀಗ ವಿಚಾರಣೆಗೆ ನಂತರ ಕೆಲ ಮಾಹಿತಿಗಳು ಬಹಿರಂಗವಾಗಿದ್ದು, ಏನೂ ಅರಿಯದ ತಮ್ಮ ಮಕ್ಕಳನ್ನು ಸಿಗರೇಟ್​ನಿಂದ ಸುಟ್ಟಿರುವುದು ಬೆಳಕಿಗೆ ಬಂದಿದೆ.

ಸಿಗರೇಟ್​ನಿಂದ ಸುಟ್ಟ ಗಾಯಗಳು

ವೈದ್ಯ ದಂಪತಿಗಳು ತಮ್ಮ ಮಕ್ಕಳನ್ನು ಮನೆಯಲ್ಲಿ ಬಂಧಿಸಿ ಇರಿಸಿದ್ದರು. 3 ವರ್ಷದ ಬಾಲಕಿಯ ದೇಹದಲ್ಲಿ ಸುಟ್ಟ ಗಾಯಗಳಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿರುವುದು ಕಂಡು ಬಂದಿದೆ ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ಹೆಚ್ಚಿನ ತನಿಖೆ

ವೈದ್ಯ ದಂಪತಿಯ ಸಹಾಯಕಿ ಲಕ್ಷ್ಮಿ ನಾಥ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೀಗ ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ. ಪೋಕ್ಸೊ ಕಾಯ್ದೆಯಡಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವಳಿ ಮಕ್ಕಳ ಬಂಧಿಸಿ ಕಿರುಕುಳ ನೀಡಲು ಕಾರಣ ಏನು ಎಂಬ ಬಗ್ಗೆ ಬಂಧಿತರು ಇನ್ನೂ ಮಾಹಿತಿ ನೀಡಿಲ್ಲ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಕಮಿಷನರ್ ದಿಗಂತ ಬರಾಹ್ ಹೇಳಿದ್ದಾರೆ.

ದಂಪತಿ ಮನೆಯ ಟೇರೆಸ್​ನಲ್ಲಿರುವ ಕಂಬವೊಂದಕ್ಕೆ ಮಕ್ಕಳನ್ನು ಕಟ್ಟಿ ಹಾಕಿದ್ದರು. ಇದನ್ನು ಗಮನಿಸಿದ ಮಕ್ಕಳ ಹಕ್ಕುಗಳ ಕಾರ್ಯಕರ್ತ ಮಿಗುಯೆಲ್ ದಾಸ್ ಎಂಬುವರು ಪೊಲೀಸರಿಗೆ ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪರಿಶೀಲಿಸಿದಾಗ ಮಕ್ಕಳನ್ನು ಹಿಂಸಿಸುತ್ತಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net