ಅಸ್ಸಾಂ ಸಿಎಂ ಪತ್ನಿಯಿಂದ ಮಾನಹಾನಿ ಕೇಸ್!​

Assam
Published on

ಗುವಾಹಟಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್​ ಶರ್ಮಾ ಅವರು ಕಾಂಗ್ರೆಸ್​ ಸಂಸದ ಗೌರವ್​ ಗಗೋಯ್​ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 10 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.

ಪೆಡ್​ ಈಸ್ಟ್​ ಎಂಟರ್​ಟೈನ್​ಮೆಂಟ್ಸ್​ ಕಂಪನಿಯು ಪ್ರಧಾನ ಮಂತ್ರಿ ಕಿಸಾನ್​ ಸಂಪದಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ 10 ಕೋಟಿ ರೂಪಾಯಿ ಪಡೆದಿದೆ ಎಂದು ಕಾಂಗ್ರೆಸ್​ ನಾಯಕ ಗಗೋಯ್​ ಆರೋಪಿಸಿದ್ದಾರೆ. ಅವರು ಈ ಆರೋಪ ಸಾಬೀತುಪಡಿಸದಿದ್ದರೆ 10 ಕೋಟಿ ರೂಪಾಯಿ ನೀಡಬೇಕು ಎಂದು ರಿನಿಕಿ ಭುಯಾನ್​ ಶರ್ಮಾ ಹೇಳಿದ್ದಾರೆ.

ಕಾಮರೂಪ ಮೆಟ್ರೋಪಾಲಿಟನ್​ ಸಿವಿಲ್​ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸೆ.26ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆದಿಲ್ಲ. ಸಬ್ಸಿಡಿ ಪಡೆಯಲು ಕೈಗೊಳ್ಳಬೇಕಾದ ಪ್ರಕ್ರಿಯೆ ನಡೆದಿಲ್ಲ. ಗೌರವ್​ ಗೊಗೊಯ್​ ಅವರು ಮಾಡಿರುವ ಮಿಥ್ಯಾರೋಪದಿಂದ ರಿನಿಕಿ ಅವರ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ರಿನಿಕಿ ಭುಯಾನ್​ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ದೇವಜಿತ್​ ಸೈಕಿಯಾ ತಿಳಿಸಿದ್ದಾರೆ.

ನಾಗಾಂವ್​ ಜಿಲ್ಲೆಯ ದರಿಗಾಜಿಯಲ್ಲಿ 30 ಎಕರೆ ಕೃಷಿ ಭೂಮಿ ಕೈಗಾರಿಕಾ ಭೂಮಿಯಾಗಿ ವರ್ಗಾವಣೆಯಾದ ಒಂದು ತಿಂಗಳಲ್ಲೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಟುಂಬಸ್ಥರು ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಇದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಗಾಗಿ ಗುವಾಹಟಿ ಹೈಕೋರ್ಟ್​ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪ್ರಧಾನ ಮಂತ್ರಿ ಕಿಸಾನ್​ ಸಂಪದಾ ಯೋಜನೆ ಮೂಲಕ ತಮ್ಮ ಪತ್ನಿ ಮತ್ತು ಅವರ ಕಂಪನಿಗೆ ಯಾವುದೇ ಹಣ ನೀಡಲಾಗಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net