90 ಲಕ್ಷ ನಗದು, 1 ಕೋಟಿಗೂ ಅಧಿಕ ಮೌಲ್ಯದ ಆಭರಣ ಸೀಜ್​... ಹಣದಾಹಿ ಮಹಿಳಾ ಅಧಿಕಾರಿ ಅರೆಸ್ಟ್​! Civil Service Officer

Civil Service Officer
Published on

Civil Service Officer : ಆದಾಯಕ್ಕೂ ಮೀರಿ ಆಸಿ, ಹಣ ಗಳಿಕೆ ಮಾಡಿರುವ ಆರೋಪದ ಮೇಲೆ ಅಸ್ಸಾಂ ಸರ್ಕಾರಿ ಅಧಿಕಾರಿಯೊಬ್ಬರನ್ನು ಪೊಲೀಸರು ಸೋಮವಾರ (ಸೆ.15) ಬಂಧಿಸಿದ್ದಾರೆ.

ಬಂಧಿತ ಅಧಿಕಾರಿಯನ್ನು ನೂಪುರ್​ ಬೋರಾ ಎಂದು ಗುರುತಿಸಲಾಗಿದೆ. ಈಕೆ ಅಸ್ಸಾಂ ನಾಗರಿಕ ಸೇವಾ ಅಧಿಕಾರಿ (ಎಸಿಎಸ್​)ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮುಖ್ಯಮಂತ್ರಿಯವರ ವಿಶೇಷ ಜಾಗೃತ ದಳದ ಅಧಿಕಾರಿಗಳ ತಂಡವು ನೂಪುರ್ ಬೋರಾ ಅವರ ಗುವಾಹಟಿ ನಿವಾಸದ ಮೇಲೆ ದಾಳಿ ನಡೆಸಿ 90 ಲಕ್ಷ ರೂ. ನಗದು ಮತ್ತು 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಅಧಿಕಾರಿಗಳ ಮತ್ತೊಂದು ತಂಡ ಬಾರ್ಪೇಟಾದಲ್ಲಿರುವ ಆಕೆಯ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿ, ಕೆಲವು ದಾಖಲೆಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಅಂದಹಾಗೆ, 2019 ರಲ್ಲಿ ಅಸ್ಸಾಂ ಸಿವಿಲ್ ಸೇವೆಗೆ ಸೇರಿದ ಗೋಲಾಘಾಟ್ ನಿವಾಸಿ ನೂಪುರ್ ಬೋರಾ, ಪ್ರಸ್ತುತ ಕಮ್ರೂಪ್ ಜಿಲ್ಲೆಯ ಗೊರೊಮರಿಯಲ್ಲಿ ವೃತ್ತ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಆಕೆ ವಿವಾದಾತ್ಮಕ ಭೂ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಆಕೆಯ ಮೇಲೆ ನಿಗಾ ಇಡಲಾಗಿತ್ತು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಹೇಳಿದ್ದಾರೆ.

ಈ ಅಧಿಕಾರಿಯನ್ನು ಬಾರ್ಪೇಟಾ ಕಂದಾಯ ವೃತ್ತದಲ್ಲಿ ನಿಯೋಜಿಸಿದಾಗ ಹಣಕ್ಕಾಗಿ ಹಿಂದೂ ಭೂಮಿಯನ್ನು ಅನುಮಾನಾಸ್ಪದ ವ್ಯಕ್ತಿಗಳಿಗೆ ವರ್ಗಾಯಿಸಿದ್ದರು. ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿನ ಕಂದಾಯ ವಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಶರ್ಮ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇನ್ನು ಬಾರ್ಪೇಟಾದ ಕಂದಾಯ ವೃತ್ತ ಕಚೇರಿಯಲ್ಲಿ ಕೆಲಸ ಮಾಡುವ ನೂಪುರ್​ ಬೋರಾ ಅವರ ಸಹಾಯಕ ಲತ್ ಮಂಡಲ್ ಸೂರಜಿತ್ ದೇಕಾ ಅವರ ನಿವಾಸದ ಮೇಲೂ ವಿಶೇಷ ಜಾಗೃತ ದಳ ದಾಳಿ ನಡೆಸಿತು. ಬೋರಾ ಅವರು ಬಾರ್ಪೇಟಾದಲ್ಲಿ ವೃತ್ತ ಅಧಿಕಾರಿಯಾಗಿದ್ದಾಗ ಅವರ ಜೊತೆ ಸೇರಿ ಬಾರ್ಪೇಟಾದಾದ್ಯಂತ ಹಲವಾರು ಭೂ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಆರೋಪ ಅವರ ಮೇಲಿದೆ. ಸದ್ಯ ಈ ವಿಚಾರದಲ್ಲಿ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net