ಪ್ರೇಯಸಿಯ ಬರ್ಬರ ಹತ್ಯೆ: ನೇಪಾಳ ದಂಗೆಯಿಂದಾಗಿ 7 ವರ್ಷದ ಬಳಿಕ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಹಂತಕ! Gen Z protests

Gen Z protests
Published on

Gen Z protests : ತನ್ನ ಗೆಳತಿಯನ್ನು ಕೊಲೆಗೈದು ನೆರೆಯ ನೇಪಾಳ ರಾಷ್ಟ್ರಕ್ಕೆ ಪರಾರಿಯಾಗಿ, ಬಚ್ಚಿಟ್ಟುಕೊಂಡಿದ್ದ ಯುವಕನನ್ನು ಬರೋಬ್ಬರಿ ಏಳು ವರ್ಷಗಳ ಬಳಿಕ ಬಂಧಿಸಲಾಗಿದೆ. ನೇಪಾಳದಿಂದ ಮತ್ತೆ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಬಿಹಾರ ಮೂಲದ ಅರುಣ್ ಎಂದು ಗುರುತಿಸಲಾಗಿದೆ. ಈತನನ್ನು ಭಾರತ-ನೇಪಾಳ ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆ, ಅರುಣ್ ಮತ್ತೊಂದು ಮಹಿಳೆಯ ಕೊಲೆ ಪ್ರಕರಣದಲ್ಲಿ ನೇಪಾಳದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ನೇಪಾಳದಲ್ಲಿ ಇತ್ತೀಚೆಗೆ ನಡೆದ ಜೆನ್​-ಝಿ ಗಲಭೆಯ ಸಮಯದಲ್ಲಿ 12,500 ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡರು. ಇದರ ಲಾಭ ಪಡೆದು, ಅರುಣ್ ಕೂಡ ತಪ್ಪಿಸಿಕೊಂಡನು. ನಂತರ, ಭಾರತಕ್ಕೆ ಪಲಾಯನ ಮಾಡುವಾಗ, ಗಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಬಿಹಾರದ ತನ್ನ ಹಳ್ಳಿಗೆ ಹೋಗುತ್ತಿದ್ದಾಗ ಪೊಲೀಸರು ಆತನನ್ನು ತಡೆದು ಬಂಧಿಸಿದ್ದಾರೆ.

2017, ನವೆಂಬರ್ ತಿಂಗಳಲ್ಲಿ ಆರೋಪಿ ಅರುಣ್ ತನ್ನ ಸಹಚರ ಪಿಂಟು ಜೊತೆ ಸೇರಿ ತನ್ನ ಗೆಳತಿಯನ್ನು ಕೊಲೆ ಮಾಡಿದನು. ಇಬ್ಬರು ದೆಹಲಿಯ ನ್ಯೂ ಅಶೋಕ ನಗರದಲ್ಲಿ ಅಕ್ಕಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದರು. ಮದುವೆಗೆ ನಿರಾಕರಿಸಿ ತಮ್ಮ ಮನೆಯವರು ನೋಡಿದ ವರನ ಜೊತೆ ಮದುವೆಯಾಗಲು ಗೆಳತಿ ಮುಂದಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಅರುಣ್​ ಕೊಲೆ ಮಾಡಿದ್ದರು. ಸ್ನೇಹಿತನೊಂದಿಗೆ ಸೇರಿ ಅರುಣ್​ ಎಸಗಿದ ಕ್ರೌರ್ಯಕ್ಕೆ ದೆಹಲಿ ಮೂಲದ ಪಪ್ಪು ಸಿಂಗ್ ಅವರ ಮಗಳು ಬಲಿಯಾದಳು. ಮಗಳು ಕಾಣದಿದ್ದಾಗ ಆಕೆಯ ತಂದೆ ಪಪ್ಪು ಸಿಂಗ್ ನಾಪತ್ತೆ ದೂರು ದಾಖಲಿಸಿದರು. ಬಳಿಕ ಪೊಲೀಸರು ತನಿಖೆ ಆರಂಭ ಮಾಡಿದಾಗ ಆರೋಪಿ ಅರುಣ್​ ಬಾಡಿಗೆ ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಯಿತು.

ಆದರೆ, ಕೊಲೆ ಮಾಡಿದ ಬಳಿಕ ಆರೋಪಿ ಅರುಣ್ ದೇಶದಿಂದ ಪರಾರಿಯಾಗಿದ್ದನು. ಆತನಿಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ, ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಸಹ ಘೋಷಣೆ ಮಾಡಿದ್ದರು. ಆದರೆ, ಅದು ಕೂಡ ಪ್ರಯೋಜನವಾಗಲಿಲ್ಲ.

ನೇಪಾಳಕ್ಕೆ ಪರಾರಿಯಾಗಿದ್ದ ಅರುಣ್​, ಅಲ್ಲಿ ಮತ್ತೊಂದು ಗಂಭೀರ ಅಪರಾಧ ಎಸಗಿದನು. ಪೊಲೀಸರ ಪ್ರಕಾರ, ಅರುಣ್​ನ ಸ್ನೇಹಿತ ಹಾಗೂ ನೇಪಾಳದ ಸ್ಥಳೀಯ ನೌಸಾದ್, ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು ಆದರೆ, ಆಕೆಯ ಕುಟುಂಬವು ಆ ಸಂಬಂಧವನ್ನು ವಿರೋಧಿಸಿತು. ಹೀಗಾಗಿ, ಕುಮಾರ್ ಆ ಮಹಿಳೆಯ ತಾಯಿಯನ್ನು ಕೊಲೆ ಮಾಡಿದನು. ಈ ಅಪರಾಧಕ್ಕಾಗಿ ಆತನಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.​

ಏನಿದು ನೇಪಾಳ ಗಲಾಟೆ?

ಪ್ರಸ್ತುತ, ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆ ದೊಡ್ಡ ಹಿಂಸಾಚಾರಕ್ಕೆ ತಿರುಗಿ, 30ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿರುವುದು ಗೊತ್ತೇ ಇದೆ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿ ಹಚ್ಚಿದ್ದಲ್ಲದೇ, ಮಾಜಿ ಪ್ರಧಾನಿಗಳ ಪತ್ನಿಯ ಸಾವಿಗೆ ಕಾರಣರಾದರು. ಇದರೊಟ್ಟಿಗೆ ಹಣಕಾಸು ಸಚಿವರನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಥಳಿಸಿದ ದೃಶ್ಯಗಳು ಇಡೀ ಜಗತ್ತನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿತು ಎಂಬುದರಲ್ಲಿ ಅನುಮಾನವೇ ಬೇಡ. ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಕ್ಕೆ ಕುಪಿತಗೊಳ್ಳದ ಯುವಜನತೆ, ರಾಜಕಾರಣಿ ಮಕ್ಕಳು ನಡೆಸುತ್ತಿರುವ ಲಕ್ಸುರಿ ಜೀವನಶೈಲಿ ಕಂಡು ಕೆರಳಿದ್ದಾರೆ ಎಂಬುದು ಸ್ಪಷ್ಟ.

ಜೆನ್​-ಝಿ ಪ್ರತಿಭಟನೆಯ ತೀವ್ರತೆಗೆ ಪ್ರಧಾನಿ ಕೆ.ಪಿ. ಶರ್ಮ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸುವ ಮೂಲಕ ಹಿಂದೆ ಸರಿದರು. ಇದು ಸರ್ಕಾರ ಪತನಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದು, 1,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಯುವಜನತೆಯ ಆಕ್ರೋಶದ ಕಿಚ್ಚಿಗೆ ನೇಪಾಳದ ಸರ್ಕಾರಿ ಕಟ್ಟಡಗಳು, ಹಿರಿಯ ರಾಜಕಾರಣಿಗಳ ಖಾಸಗಿ ನಿವಾಸಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿರುವ ಹೋಟೆಲ್‌ಗಳು ಸಹ ಬೆಂಕಿಗೆ ಆಹುತಿಯಾಗಿವೆ. ನೇಪಾಳದ ಸಂಸತ್ತು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಇಂದು, ದೇಶವು ಕಾರ್ಯನಿರ್ವಹಿಸುವ ಸರ್ಕಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಕರ್ಫ್ಯೂ ವಿಧಿಸಲು ಮತ್ತು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸ್ವತಃ ಸೇನೆಯೇ ಮಧ್ಯಪ್ರವೇಶಿಸಿದೆ.

ಒಂದೆಡೆ ದೇಶದಲ್ಲಿ ಸಾಮಾನ್ಯ ನಿವಾಸಿಗಳು ನಿರುದ್ಯೋಗ, ಏರುತ್ತಿರುವ ಹಣದುಬ್ಬರ ಮತ್ತು ತೀವ್ರ ಬಡತನದಿಂದ ಬಳಲುತ್ತಿದ್ದರೆ, ಅತ್ತ ರಾಜಕಾರಣಿ ಮಕ್ಕಳು ಜಾಲತಾಣಗಳಲ್ಲಿ ತಾವು ಅನುಭವಿಸುತ್ತಿರುವ ಐಷಾರಾಮಿ ಜೀವನವನ್ನು ಎಲ್ಲರ ಎದುರು ಪ್ರದರ್ಶಿಸಿರುವುದು ಜೆನ್​ಝಿ ಕೆಂಗಣ್ಣಿಗೆ ಗುರಿಯಾಗಿದೆ. ರಾಜಕೀಯ ನಾಯಕರ ಮಕ್ಕಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ದುಬಾರಿ ಮೌಲ್ಯದ ಕಾರುಗಳು, ಡಿಸೈನರ್ ಹ್ಯಾಂಡ್‌ಬ್ಯಾಗ್‌ಗಳು ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಿರುವುದು ಯುವಜನತೆಯ ಪ್ರತಿಭಟನೆಗೆ ಒಂದು ಬಲವಾದ ಕಾರಣವಾಗಿದೆ.

ಹಿಂಸಾಚಾರದ ಪ್ರತಿಭಟನೆ ಹತೋಟಿಗೆ ಬರದ ಹಿನ್ನೆಲೆ ಪ್ರಧಾನಿ ತಮ್ಮ ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಹಿರಿಯ ಮಂತ್ರಿಗಳು ರಾಜೀನಾಮೆ ಘೋಷಿಸಿ, ಸರ್ಕಾರದಿಂದ ಹೊರನಡೆದಿದ್ದರು. ಈ ಬೆಳವಣಿಗೆಯಿಂದ ಪ್ರಸ್ತುತ ನೇಪಾಳ ಪ್ರಧಾನಿ ಇಲ್ಲದ ದೇಶವಾಗಿ ಸಾಗುತ್ತಿರುವುದು ನಿಜಕ್ಕೂ ದುರಂತವೇ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net