"CWKL" ಲೋಗೋ ಅನಾವರಣಗೊಳಿಸಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್

ವಿಜಯವಾಣಿ - 2025-02-24T201203.419
Published on

ಬೆಂಗಳೂರು: ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಈವೆಂಟ್​ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ "ಸೆಲೆಬ್ರಿಟಿ ವುಮೆನ್ಸ್ ಕಬಡ್ಡಿ ಲೀಗ್" ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೆ ಅಡಿಯಿಟ್ಟಿದ್ದಾರೆ. "CWKL" ಹೆಸರಿನಡಿಯ ಕಬಡ್ಡಿ ಟೂರ್ನಿಯ ಲೋಗೋವನ್ನು ಇತ್ತೀಚಿಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅನಾವರಣ ಮಾಡಿದರು. ಈ ವೇಳೆ ಟೂರ್ನಿ ಯಶಸ್ವಿಯಾಗಲೆಂದು ಶುಭಹಾರೈಸಿದರು. ಈ ಟೂರ್ನಿಯ ಬಗ್ಗೆ ಮಾಹಿತಿ‌ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನವರಸನ್ ಹೆಚ್ಚಿನ ಮಾಹಿತಿ ನೀಡಿದರು.

"ಕಬಡ್ಡಿ ನಮ್ಮ ದೇಸಿ ಕ್ರೀಡೆ. ಈ ಕ್ರೀಡೆಯನ್ನು ಮಹಿಳೆಯರು ಆಡುವುದು ಕಡಿಮೆ. ಆ ನಿಟ್ಟಿನಲ್ಲೇ ಈ 'ಸೆಲೆಬ್ರಿಟಿ ವುಮೆನ್ಸ್ ಕಬಡ್ಡಿ ಲೀಗ್' ಆಯೋಜಿಸಿದ್ದೇನೆ.‌ ಲೋಗೋವನ್ನು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ.‌ ಈ ಟೂರ್ನಿಯಲ್ಲಿ 10 ತಂಡಗಳಿರುತ್ತವೆ. ಸುಮಾರು 120ಕ್ಕೂ ಅಧಿಕ ನಟಿಯರು ಪಾಲ್ಗೊಳ್ಳಲಿದ್ದಾರೆ. ಹತ್ತು ತಂಡಗಳಲ್ಲಿ ಈಗಾಗಲೇ ಎಂಟು ತಂಡಗಳಿಗೆ ಮಾಲೀಕರು ದೊರಕಿದ್ದಾರೆ. ಏಪ್ರಿಲ್​ನಲ್ಲಿ ಟೂರ್ನಿ ನಡೆಯಲಿದೆ" ಎಂದು ನವರಸನ್ ಹೇಳಿದರು.

"ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ನಿರ್ಮಾಪಕರು ಈ ಟೂರ್ನಿಗೆ ಆಗಮಿಸಿ ಸ್ಪರ್ಧಿಗಳಿಗೆ ಉತ್ತೇಜನ ನೀಡಲಿದ್ದಾರೆ. ಸಾಯಿ ಗೋಲ್ಡ್ ಪ್ಯಾಲೇಸ್​ನ ಸರವಣ, ನಿರ್ಮಾಪಕರಾದ ಚೇತನ್ ಗೌಡ, ಸುರೇಶ್ ಗೌಡ ಹಾಗೂ ರಮೇಶ್ ರೆಡ್ಡಿ ಮುಂತಾದವರು ನಮ್ಮ ಜತೆಗಿರುವುದು ತುಂಬಾ ಸಂತೋಷವಾಗಿದೆ" ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರವಣ, "ಈ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ನಮ್ಮ ಸಾಯಿಗೋಲ್ಡ್ ಪ್ಯಾಲೆಸ್​ ವತಿಯಿಂದ ಹತ್ತು ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ನೀಡುವುದಾಗಿ" ಹೇಳಿದರು.

ಹತ್ತು ತಂಡಗಳಲ್ಲಿ ಒಂದು ತಂಡದ ಮಾಲೀಕರಾದ "ವಾಮನ" ಚಿತ್ರದ ನಿರ್ಮಾಪಕ‌ ಚೇತನ್ ಗೌಡ ಅವರು ನವರಸನ್ ಅವರಿಗೆ ಹತ್ತು ಲಕ್ಷದ ಚೆಕ್ ನೀಡಿದರು. ಕಬಡ್ಡಿ ಆಟ ಕುರಿತು ಕೋಚರ್ ಶೃದಿಯಾ ರಮಣ್ ಗೌಡ ಹೆಚ್ಚಿನ ಮಾಹಿತಿ ನೀಡಿದರು. ಕನ್ನಡ ನಟಿಯರಾದ ಸಿಂಧೂ ಲೋಕನಾಥ್, ಅಪೂರ್ವ‌ ಹಾಗೂ ಕಾರುಣ್ಯ ರಾಮ್ ಮುಂತಾದ ನಟಿಯರು "CWKS" ಯಶಸ್ವಿಯಾಗಲೆಂದು ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net