ಬಡವರ ಮಕ್ಕಳು ಹಾಲು ಕುಡಿಯಬಾರದೇ? ದರ ಏರಿಕೆ ಬೆನ್ನಲ್ಲೇ ಸಿಎಂಗೆ ಪ್ರಶ್ನಿಸಿದ ಮಾಜಿ ಸಚಿವ

Untitled design - 2024-06-25T132857.310
Published on

ಬೆಂಗಳೂರು: ಇತ್ತೀಚೆಗಷ್ಟೇ ತೈಲ ಬೆಲೆ ಏರಿಸಿದ್ದ ರಾಜ್ಯ ಸರ್ಕಾರ, ಇದೀಗ ಹಾಲಿನ ದರದಲ್ಲಿಯೂ ಸಹ ಹೆಚ್ಚಳ ಮಾಡಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲಿನ ದರ ಹೆಚ್ಚಿಸಿದ್ದು, ಪ್ರತಿ ಲೀಟರ್‌ ಪ್ಯಾಕೆಟ್​ಗೆ 2.10 ರೂ. ಏರಿಕೆ ಮಾಡಿದೆ. ಇನ್ನು ಹಾಲಿನ ದರದಲ್ಲಿ ಕಂಡುಬಂದ ದಿಢೀರ್​ ಹೆಚ್ಚಳವನ್ನು ಖಂಡಿಸಿದ ಮಾಜಿ ಸಚಿವ, ಬಿಜೆಪಿ ನಾಯಕ ಅಶ್ವಥ್ ನಾರಾಯಣ, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಕಾಂಗ್ರೆಸ್‌ ಸರ್ಕಾರ ನಿತ್ಯ ಬೆಲೆ ಏರಿಕೆ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.

"ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 49 ವರ್ಷ ತುಂಬಿರುವ ಬೆನ್ನಲ್ಲೇ ಹಾಲಿನ ದರವನ್ನು 2 ರೂ.ಗೆ ಏರಿಸಿ, ಬಡವರ ಹೊಟ್ಟೆಗೆ ಬಿಸಿ ನೀರೇ ಗತಿ ಎನ್ನುವ ಪರಿಸ್ಥಿತಿಯನ್ನು ತಂದೊಡ್ಡಿದೆ. ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್‌-ಡೀಸೆಲ್‌ ದರ ಶತಕ ಬಾರಿಸಿದೆ, ವಿದ್ಯುತ್‌ ದರ ಏರಿಕೆ ನಾಡಿನ ಜನತೆಗೆ ಶಾಕ್‌ ನೀಡಿದೆ. ಇದರ ಜತೆ ಬಸ್‌ ಪ್ರಯಾಣದ ದರ ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ" ಎಂದಿದ್ದಾರೆ.

"ಕಳೆದ ವರ್ಷ ಆಗಸ್ಟ್‌ನಲ್ಲಿ ಹಾಲಿನ ದರದಲ್ಲಿ 3 ರೂ. ಏರಿಕೆ ಮಾಡಲಾಗಿತ್ತು. ಅದಾಗಿ ವರ್ಷ ಕಳೆಯುವ ಮುನ್ನವೇ ಇನ್ನೂ 2 ರೂ. ಹೆಚ್ಚಿಸಲಾಗಿದೆ. ಬರಿದಾಗಿರುವ ರಾಜ್ಯದ ಖಜಾನೆಯನ್ನು ತುಂಬಿಸಲು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದು ಖಂಡನೀಯ" ಎಂದು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net