

ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ, ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಎರಡೇ ಸಿನಿಮಾ ಆದರೂ ಸೂಪರ್ ಹಿಟ್ ಕಿರಾತಕ ಸಿನಿಮಾದಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದ ಓವಿಯಾ ಇದೀಗ ಅಲ್ಲೂ ಕೂಡ ಅವಕಾಶಗಳು ಇಲ್ಲದೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಸಿನಿಮಾಗಳ ಅವಕಾಶ ಕಡಿಮೆಯಾದ ಬಳಿಕ ಓವಿಯಾ, ತಮಿಳಿನ ವಿಜಯ್ ಚಾನೆಲ್ನಲ್ಲಿ ಪ್ರಸಾರವಾದ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಜನಮನ್ನಣೆ ಗಳಿಸಿದರು. ಬಿಗ್ಬಾಸ್ ಸಹ-ಸ್ಪರ್ಧಿ ಮತ್ತು ನಟ ಆರವ್ ಅವರ ಮೇಲಿನ ಪ್ರೇಮ ವಿಚಾರದಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಆರವ್ ಸಂಬಂಧವನ್ನು ಮುಂದುವರಿಸಲು ಆಸಕ್ತಿ ತೋರಿಸದ ಕಾರಣ ಓವಿಯಾ ತೊಂದರೆ ಕೊಟ್ಟರು. ಇದಲ್ಲದೆ, ಬಿಗ್ ಬಾಸ್ ಒಳಗೆ ಓವಿಯಾ ಆತ್ಮಹತ್ಯೆಗೆ ಯತ್ನಿಸಿದರು ಎಂಬ ಸುದ್ದಿಯು ಹರಿದಾಡಿತ್ತು. ಈ ಸಮಯದಲ್ಲಿ ಓವಿಯಾ ತಮ್ಮ ಅಭಿಮಾನಿಗಳಿಂದ ಉತ್ತಮ ಬೆಂಬಲವನ್ನು ಪಡೆದರು. ಆದರೆ, ಬಿಗ್ಬಾಸ್ ಕಾರ್ಯಕ್ರಮದಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ಹೇಳಿ ಹೊರನಡೆದರು.
ಶೋ ಮುಗಿಸಿದ ಬಳಿಕವೂ ಓವಿಯಾ ಅವರಿಗೆ ಕೆಲ ಸಿನಿಮಾಗಳಲ್ಲಿ ಮತ್ತೆ ಅವಕಾಶಗಳು ಸಿಕ್ಕವು. ಆದರೆ, ಮತ್ತೆ ಅವಕಾಶಗಳು ಕಡಿಮೆಯಾದವು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ವಿಚಾರದಲ್ಲೂ ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಓವಿಯಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಪ್ರೀತಿಯಲ್ಲಿ ಬಿದ್ದು ಅನೇಕರು ಮೋಸ ಹೋಗಿದ್ದಾರೆ. ನಾನು ಕೂಡ ಈ ಮೊದಲು ಅನೇಕ ರಿಲೇಶನ್ಶಿಪ್ನಲ್ಲಿದ್ದೆ. ಆದರೆ, ಅದ್ಯಾವುದೂ ಕೈಗೂಡಲಿಲ್ಲ. ಕೆಲವರು ಹಣದ ವಿಷಯದಲ್ಲಿಯೂ ಮೋಸ ಮಾಡಿದ್ದಾರೆ. ನಾನು ಇನ್ನು ಮುಂದೆ ಲಿವಿಂಗ್ ಟುಗೆದರ್ ನಂಬುವುದಿಲ್ಲ. ಎಲ್ಲರ ನಂಬಿಕೆಯೇ ಸರ್ವಸ್ವವಲ್ಲ. ನಿಮಗೆ ಅನಿಸಿದ್ದನ್ನು ಮಾಡಿ. ವೈಯಕ್ತಿಕ ವಿಚಾರಕ್ಕೆ ನಾವು ಯಾರಿಗೂ ತೊಂದರೆ ಕೊಡಬಾರದು ಎಂದು ಓವಿಯಾ ಹೇಳಿದ್ದಾರೆ. ಸದ್ಯ ಓವಿಯಾ ಅವರು ಮಾತುಗಳು ಇದೀಗ ವೈರಲ್ ಆಗುತ್ತಿವೆ.
ಅಂದಹಾಗೆ ಮಲಯಾಳಂ ನಟಿ ಓವಿಯಾ ಅವರು 2010ರಲ್ಲಿ ಕಲಾವಾಣಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಮದಯನೈ ಕೂಟಂ, ಕಾಲಕಲಾಪು, ಮರೀನಾ, ಮುದರ್ ಕೂಡಂ, ಯಾಮಿರುಕಾ ಪಯಮೆಂ, 90 ಎಂಎಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಸಿನಿಮಾಗಳ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್)