

ಬೆಂಗಳೂರು: ವಿಶಾಖಪಟ್ಟಣದಲ್ಲಿ ತಯಾರಾಗುವ ಮಾದಕ ದ್ರವ್ಯ ರಾಜ್ಯ ರಾಜಧಾನಿಯ ಕಾಳಸಂತೆಗೆ ಕಾಲಿಟ್ಟಿದ್ದು, ಈ ಜಾಲವನ್ನು ಬೇಧಿಸಿರುವ ಸುದ್ದುಗುಂಟೆಪಾಳ್ಯ ಪೊಲೀಸರು ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಈ ಮಾದಕ ದ್ರವ್ಯದ ಬೆಲೆ ಒಂದು ಗ್ರಾಂಗೆ 3ರಿಂದ 5 ಸಾವಿರ ರೂಪಾಯಿ! ಡ್ರಗ್ಸ್, ಅಫೀಮು, ಗಾಂಜಾ, ಕೊಕೈನ್ ಗಿಂತ ಹೆಚ್ಚು ನಶೆಯಲೇರಿಸುವ ಮಾದಕದ್ರವ್ಯವೇ 'ಹ್ಯಾಶಿಷ್ ಆಯಿಲ್'. ವಿಶಾಖಪಟ್ಟಣದಲ್ಲಿ ತಯಾರಾಗುವ ಈ ಮಾದಕದ್ರವ್ಯಕ್ಕೆ ಬೆಂಗಳೂರಿಗೆ ಬಹುಬೇಡಿಕೆಯಿದ್ದು, ಈ ಡ್ರಗ್ಸ್ ಬೆಡ್ಲರ್ಗಳಿಗೆ ಐಟಿಬಿಟಿ ಉದ್ಯೋಗಿಗಳೇ ಟಾರ್ಗೆಟ್ ಎಂಬ ಆತಂಕಕಾರಿ ವಿಚಾರವೂ ಬಯಲಾಗಿದೆ.
ಆಶ್ಯಿಶ್ ಆಯಿಲ್ನ್ನು ಬಸ್ನಲ್ಲೇ ಸರಬರಾಜು ಮಾಡುತ್ತಿದ್ದ ಸುರಕತ್ತಿ ಪ್ರಭಾಕರ್ ಮತ್ತು ಕೊರಳ ಕಾಮರಾಜ್ ಎಂಬುವವರನ್ನು ಸುದ್ದುಗುಂಟೆ ಪೊಲೀಸರು
ಬಂಧಿಸಿದ್ದು, ಅವರ ಬಳಿಯಿದ್ದ 950 ಗ್ರಾಂ ಹ್ಯಾಶಿಷ್ ಆಯಿಲ್, 3 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.
ರಾಜ್ಯ ರಾಜಧಾನಿಯಲ್ಲಿ ಡ್ರಗ್ಸ್ ಜಾಲ ಸಕ್ರಿಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಜನಾಂಗವನ್ನೇ ಟಾರ್ಗೆಟ್ ಮಾಡುವ ಗಾಂಜಾ, ಹ್ಯಾಶಿಷ್ ಆಯಿಲ್ವ್ಯಾಪಾರಿಗಳು ಫೋನ್ ಮೂಲಕವೇ ವ್ಯವಹಾರ ಕುದುರಿಸುತ್ತಾರೆ. ಫೋನ್ನಲ್ಲೇ ಗ್ರಾಹಕರನ್ನು ಸಂಪರ್ಕಿಸಿ ಗಾಂಜಾ, ಹ್ಯಾಶಿಷ್ ಆಯಿಲ್ ಸಪ್ಲೈ ಮಾಡುತ್ತಾರೆ.