| ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ
ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ
ಜನ್ಮಾಂತರಗಳನ್ನು ಪಡೆದರೂ ಸಂಸಾರವು ಪರಮಾರ್ಥವಲ್ಲ ಎಂದು ತೋರಿಸುವುದೇ ಯೋಗವಾಸಿಷ್ಠದ ಉದ್ದೇಶ, ಈ ಮಂಡಪೋಪಾಖ್ಯಾನದ ಉದ್ದೇಶ.
ಶ್ರೀ ವಸಿಷ್ಠರ ಮಾತು ಮುಂದುವರಿದಿದೆ - ‘ಶ್ರೀರಾಮ! ಕುಂತಾಯುಧ ಎಂಬ ಆಯುಧವು ಈ ಯುದ್ಧದಲ್ಲಿ ಎಷ್ಟು ಪ್ರಯೋಗಿಸಲ್ಪಟ್ಟಿದೆಯೆಂದರೆ ಕುಂತಾಯುಧಗಳ ಸಮೂಹಗಳ ಕಾಂತಿಯು ಸ್ವರ್ಗದವರೆಗೂ ವ್ಯಾಪಿಸಿರುವಂತೆ ಕಾಣುತ್ತಿತ್ತು. ಮತ್ತು ವೀರರಿಗೆ ಸ್ವರ್ಗವನ್ನೇರುವುದಕ್ಕೆ ನಿರ್ವಿುಸಿರುವ ಸೋಪಾನಗಳ ಸಾಲಿನಂತೆ ಅವು ಕಾಣುತ್ತಿದ್ದವು.’
‘ಒಬ್ಬ ವೀರ ಭಟ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದಾನೆ. ಅವನ ಕಾಂತೆಯು, ಅವನ ಸುಂದರವಾದ ಮತ್ತು ಬಂಗಾರಮಯವಾದ ಕವಚವನ್ನು ಧರಿಸಿದ ಎದೆಯ ಮೇಲೆಯೇ ಪ್ರಾಣ ಬಿಟ್ಟಳು. ವಿವಿಧ ಕೈ-ಕಾಲುಗಳೇ ಮೊದಲಾದ ಎಲ್ಲ ಅವಯವಗಳೂ ಲಕ್ಷಣವಾಗಿದ್ದವು ಮತ್ತು ಆಭರಣಗಳಿಂದ ಕೂಡಿದ್ದವು. ಅಂತಹ ಶರೀರದ ಮೇಲೆಯೇ ಅವಳು ಪ್ರಾಣಾರ್ಪಣೆ ಮಾಡಿದ್ದು ಮನಸ್ಸನ್ನು ಕರಗಿಸುವಂಥದ್ದು. ಆದರೆ ಈಗ ನೋಡುತ್ತಿದ್ದಂತೆಯೇ ಅವಳು ಪತಿಯನ್ನು ಹುಡುಕುತ್ತಾ ದೇವತಾಸ್ತ್ರೀ ರೂಪವನ್ನು ಧರಿಸಿ ದೇವಲೋಕದಲ್ಲಿದ್ದದ್ದು ಕಂಡುಬರುತ್ತಿದೆ!’
‘ಯುದ್ಧವನ್ನು ನೋಡಿ ಕಳವಳಗೊಂಡ ಒಬ್ಬ ವ್ಯಕ್ತಿ ಹೇಳುತ್ತಿದ್ದಾನೆ : ಅಯ್ಯೋ! ನಮ್ಮ ಸೈನ್ಯವನ್ನೆಲ್ಲ ಗಟ್ಟಿಯಾದ ಮುಷ್ಟಿಗಳುಳ್ಳ ವೈರಿಸೈನಿಕರು ನಾಶಪಡಿಸಿದರು! ದಿವ್ಯವಾದ ಮೇರುಪರ್ವತವನ್ನು ಮಹಾಪ್ರಳಯಕಾಲದ ಅಲೆಗಳು ಹೊಡೆಯುವಂತೆ ವೈರಿಸೈನಿಕರು ನಮ್ಮ ಸೈನಿಕರನ್ನು ಹೊಡೆಯುತ್ತಿದ್ದಾರೆ.’
‘ಒಬ್ಬ ಸೇನಾಪ್ರಮುಖ ತನ್ನವರಿಗೆ ಉದ್ವೇಗದಿಂದ ಹೇಳುತ್ತಿದ್ದಾನೆ: ಎಲೈ ಮೂಢರೇ! ಮುಂದೆ ಹೋಗಿ ಯುದ್ಧ ಮಾಡಿ. ಅರ್ಧ ಸತ್ತಿರುವ (ತೀವ್ರವಾಗಿ ಗಾಯಗೊಂಡಿರುವ) ವ್ಯಕ್ತಿಗಳನ್ನು ಎತ್ತಿಕೊಂಡು ಹೋಗಿ. ಅಧಮರೇ! ಮುಂದೆ ನುಗ್ಗುವ ಭರದಲ್ಲಿ ಕೆಳಗೆ ಬಿದ್ದಿರುವ ನಮ್ಮ ಸೇನೆಯ ವ್ಯಕ್ತಿಗಳನ್ನು ನಿಮ್ಮ ಕಾಲಿನ ತುಳಿತದಿಂದ ಇನ್ನಷ್ಟು ಘಾಸಿಗೊಳಿಸಬೇಡಿ!’
‘ಒಬ್ಬ ದೇವ ಹೇಳು ತ್ತಿದ್ದಾನೆ. ತಮ್ಮ ಕೂದಲಿನ ಗಂಟುಗಳನ್ನು ಕಟ್ಟಿ ಅಲಂಕಾರ ಮಾಡಿಕೊಳ್ಳುತ್ತ ಅತ್ಯಂತ ಕಾತರದಿಂದ ಅಪ್ಸರೆಯರ ಸಮೂಹ ಕಾಯುತ್ತಿರುವ ಹೊತ್ತಿಗೆ ಒಬ್ಬ ವೀರ ಮರಣವನ್ನಪ್ಪಿ, ದಿವ್ಯ ಶರೀರವನ್ನು ಪಡೆದು, ಆ ಅಪ್ಸರೆಯರ ಸಮೀಪಕ್ಕೆ ಹೋಗುತ್ತಿದ್ದಾನೆ, ನೋಡಿ!’
‘ಇದನ್ನು ನೋಡಿದ ಒಬ್ಬ ಅಪ್ಸರೆಯ ಸಖಿ ಹೇಳುತ್ತಿದ್ದಾಳೆ: ಈ ಲೋಕಕ್ಕೆ ದೂರದಿಂದ ಬಂದಿರುವ ವೀರ ಭಟನನ್ನು ಸ್ವರ್ಗದಲ್ಲಿ ಹರಿಯುತ್ತಿರುವ ಗಂಗಾನದಿಯ ತಟದಲ್ಲಿ ಸಂತೋಷಪಡಿಸು. ಅರಳಿದ ಬಂಗಾರದ ಕಮಲದ ಹೂವುಗಳುಳ್ಳ ಗಂಗಾ ತಟದಲ್ಲಿ, ಮರಗಳ ನೆರಳಿನ ಮೂಲಕ, ನದಿಯ ತಂಪು ನೀರಿನಿಂದ ತಂಪಾದ ವಾತಾವರಣದ ಮೂಲಕ ದಣಿದು ಬಂದ ಅವನಿಗೆ ದಣಿವಾರುವಂತೆ ಮಾಡು.’
‘ವಿವಿಧ ಆಯುಧಗಳ ಪ್ರಯೋಗದಿಂದ ತುಂಡರಿಸಲ್ಪಟ್ಟ, ಭಯವನ್ನು ಹುಟ್ಟಿಸುವ, ಎಲುಬಿನ ಚೂರುಗಳು ‘ಕಣ, ಕಣ’ ಶಬ್ದ ಮಾಡುತ್ತಾ ಆಕಾಶದಲ್ಲಿ ವ್ಯಾಪಿಸಿವೆ. ಆಕಾಶದಲ್ಲಿ ರಾತ್ರಿ ಹೊತ್ತು ಹೊಳೆಯುತ್ತಿರುವ ನಕ್ಷತ್ರಗಳು ವ್ಯಾಪಿಸಿರುವಂತೆ ಕಾಣುತ್ತಿದೆ.’
‘ಯುದ್ಧದಲ್ಲಿ ಮೇಲಕ್ಕೆ ಹೋಗುತ್ತಿರುವ ಜೀವಗಳನ್ನು ನೋಡಿದರೆ ಆಕಾಶದಲ್ಲೆಲ್ಲ ಜೀವಗಳು ತುಂಬಿಕೊಂಡಿರುವಂತೆ ಕಾಣುತ್ತದೆ. ಎಂತಹ ಜೀವಗಳು? ಬಾಣಗಳನ್ನು ಧರಿಸಿರುವ ಜೀವಗಳು. (ಬದುಕಿರುವಾಗ ಯುದ್ಧಕ್ಕೋಸ್ಕರ ಬಾಣಗಳನ್ನು ಧರಿಸಿರುವ ಜೀವಗಳು ಮತ್ತು ಬಾಣಗಳು ಮೈಯೊಳಗೆ ಹೊಕ್ಕಿದ್ದರಿಂದ ಮರಣ ಹೊಂದಿದ ಜೀವಗಳು) ಆಕಾಶದಲ್ಲಿ ಬಾಣಧಾರಿಗಳಾದ ಜೀವಗಳೆಂಬ ನೀರಿನಿಂದ ಕೂಡಿದ ಜೀವನದಿಯು ಪ್ರವಹಿಸುತ್ತಿರುವಂತೆ ಮತ್ತು ಆ ನದಿಗೆ ಚಕ್ರಗಳು (ಯುದ್ಧಕ್ಕೋಸ್ಕರ ಏರ್ಪಾಟಾದ ಸೈನಿಕರ ವ್ಯೂಹಗಳು) ಎಂಬ ಸುಳಿಗಳು ಇರುವಂತೆ ಕಾಣುತ್ತಿವೆ. ಈ ಬೃಹತ್ತಾದ ಜೀವನದಿಯಲ್ಲಿ ಪರ್ವತಗಳೂ ನೀರಿನೊಳಗಿನ ಕೆಸರಿನ ಕಣಗಳಂತೆ ಕಾಣುತ್ತಿವೆ.!’