

ನವದೆಹಲಿ: ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ (ಜೂನ್ 26) ಬಂಧಿಸಿದೆ. ನ್ಯಾಯಾಲಯದಲ್ಲಿ ಎಎಪಿ ಮುಖ್ಯಸ್ಥರನ್ನು ಪರೀಕ್ಷಿಸಲು ಸಿಬಿಐಗೆ ರೋಸ್ ಅವೆನ್ಯೂ ಕೋರ್ಟ್ ಅನುಮತಿ ನೀಡಿದ ಬಳಿಕ ಬಂಧನವಾಗಿದೆ.
ಸಿಬಿಐ ಬಂಧನದ ನಂತರ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿಗೆ ತಡೆ ನೀಡಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೇಜ್ರಿವಾಲ್ ಹಿಂಪಡೆದಿದ್ದಾರೆ.
ಅಕ್ರಮ ಮದ್ಯ ನೀತಿ ಹಗರಣದಿಂದ ಉಂಟಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಕಳೆದ ಮಾರ್ಚ್ 21ರಂದು ಇಡಿ ಬಂಧಿಸಿತು. ಕೇಜ್ರಿವಾಲ್ ಅವರು ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಇದರ ನಡುವೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೇಜ್ರಿವಾಲ್ಗೆ ವಿಚಾರಣಾ ನ್ಯಾಯಾಲಯ ಜಾಮೀನು ಸಹ ನೀಡಿತ್ತು. ಆದರೆ, ಆ ಜಾಮೀನಿಗೆ ತಡೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮನವಿಗೆ ದೆಹಲಿ ಹೈಕೋರ್ಟ್ ಬುಧವಾರ ಸಮ್ಮತಿ ಸೂಚಿಸಿತ್ತು. ಬಳಿಕ ಆಮ್ ಆದ್ಮಿ ಪಕ್ಷ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆಗೂ ಮುನ್ನವೇ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧನ ಮಾಡಿದೆ.
ಕೇಜ್ರಿವಾಲ್ ಅವರನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಸಿಬಿಐ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ಕೋರಿತ್ತು. (ಏಜೆನ್ಸೀಸ್)