ನವದೆಹಲಿ: ಲೋಕಸಭೆಯ ನೂತನ ಸ್ಪೀಕರ್ ಆಗಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಓ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಯಿತು. ಎನ್ಡಿಎ ಮೈತ್ರಿಕೂಟದಿಂದ ಕಳೆದ ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಇದೀಗ ಮತ್ತೆ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.
ಸ್ಪೀಕರ್ ಆಯ್ಕೆ ಸಂಬಂಧ ಆಡಳಿರಾರೂಢ ಎನ್ಡಿಎ ಮೈತ್ರಿಕೂಟ ಮತ್ತು ಪ್ರತಿಪಕ್ಷ ಮೈತ್ರಿಕೂಟದ ನಾಯಕರ ಮಧ್ಯೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು. ಧ್ವನಿಮತದ ಮೂಲಕ ಓಂ ಬಿರ್ಲಾ ಅವರನ್ನು 18ನೇ ಲೋಕಸಭೆಯ ಸ್ಪೀಕರ್ ಆಗಿ ನೇಮಕ ಮಾಡಲಾಯಿತು. ಪ್ರತಿಪಕ್ಷಗಳು ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ಸ್ಪೀಕರ್ ಹುದ್ದೆಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
BJP MP Om Birla elected as the Speaker of the 18th Lok Sabha. pic.twitter.com/YuMqZA39WH
— ANI (@ANI) June 26, 2024
ಸ್ಪೀಕರ್ ಆಯ್ಕೆಯಾದ ಬಳಿಕ ಓಂ ಬಿರ್ಲಾ ಅವರನ್ನು ಉದ್ದೇಶಿಸಿ, ಗೌರವಾನ್ವಿತ ಸ್ಪೀಕರ್, ನೀವು ಎರಡನೇ ಬಾರಿಗೆ ಈ ಪೀಠವನ್ನು ಆಕ್ರಮಿಸುತ್ತಿರುವುದು ಸದನದ ಅದೃಷ್ಟ. ನಾನು ನಿಮಗೆ ಮತ್ತು ಇಡೀ ಸದನವನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಮೃತ ಕಾಲದ ಸಮಯದಲ್ಲಿ ನೀವು ಎರಡನೇ ಬಾರಿಗೆ ಈ ಹುದ್ದೆಯಲ್ಲಿ ಕುಳಿತುಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ. ನಿಮ್ಮ ಅನುಭವದೊಂದಿಗೆ ಮುಂದಿನ 5 ವರ್ಷಗಳವರೆಗೆ ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ. ಎರಡನೇ ಬಾರಿಗೆ ಸ್ಪೀಕರ್ ಆಗಿರುವುದು ಸ್ವತಃ ದಾಖಲೆಯಾಗಿದೆ. 5 ವರ್ಷಗಳ ನಂತರ ಎರಡನೇ ಅವಧಿಗೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಬಲರಾಮ್ ಜಾಖರ್ ಅವರಿಗೆ ಸಿಕ್ಕಿತು ಮತ್ತು ಇಂದು ನೀವು ಅದೇ ರೀತಿ ಮಾಡುತ್ತಿದ್ದೀರಿ ಎಂದು ಮೋದಿ ಹೇಳಿದರು.
ಸ್ವಾತಂತ್ರ್ಯದ 70 ವರ್ಷಗಳ ಅವಧಿಯಲ್ಲಿ ಆಗದ ಕೆಲಸಗಳು ನಿಮ್ಮ ಅಧ್ಯಕ್ಷತೆಯಲ್ಲಿ ಈ ಸದನದಿಂದ ಸಾಧ್ಯವಾಗಿವೆ. ಪ್ರಜಾಪ್ರಭುತ್ವದ ಸುದೀರ್ಘ ಪಯಣದಲ್ಲಿ ಹಲವಾರು ಮೈಲುಗಲ್ಲುಗಳು ಬರುತ್ತವೆ. ಕೆಲವು ಸಂದರ್ಭಗಳಲ್ಲಿ ನಾವು ಮೈಲುಗಲ್ಲುಗಳನ್ನು ಸ್ಥಾಪಿಸುವ ಅವಕಾಶವನ್ನು ಪಡೆದಿದ್ದೇವೆ. 17ನೇ ಲೋಕಸಭೆಯ ಸಾಧನೆಗಳ ಬಗ್ಗೆ ದೇಶವು ಹೆಮ್ಮೆಪಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದರು.
ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ಡಿಎ ಹಿರಿಯ ನಾಯಕರು ಪ್ರತಿಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸ್ಪೀಕರ್ ಹುದ್ದೆಯ ಅಭ್ಯರ್ಥಿಗೆ ಬೆಂಬಲ ನೀಡಬೇಕು ಮತ್ತು ಅವಿರೋಧ ಆಯ್ಕೆಗೆ ಸಹಕರಿಸಬೇಕು ಎಂದು ಕೋರಿದ್ದರು. ಆದರೆ, ವಿಪಕ್ಷಗಳ ನಾಯಕರು ಡೆಪ್ಯುಟಿ ಸ್ಪೀಕರ್ ಹುದ್ದೆ ತಮಗೆ ನೀಡಬೇಕು ಮತ್ತು ಬೇಷರತ್ ಬೆಂಬಲ ಘೊಷಿಸಬೇಕು ಎಂಬ ಷರತ್ತು ಮುಂದಿಟ್ಟರು ಎನ್ನಲಾಗಿದೆ. ಆದರೆ, ಈ ಷರತ್ತು ಎನ್ಡಿಎ ನಾಯಕತ್ವ ಒಪ್ಪದ್ದರಿಂದಲೇ ವಿಪಕ್ಷಗಳ ಕಡೆಯಿಂದ ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಆಡಳಿತಾರೂಢ ಮತ್ತು ವಿಪಕ್ಷಗಳ ಮಧ್ಯೆ ಒಮ್ಮತ ಮೂಡಿರುವ ಸುಳಿವುಗಳು ಆರಂಭದಲ್ಲಿ ಸಿಕ್ಕಿದ್ದವು. ಆದರೆ, ಡೆಪ್ಯುಟಿ ಸ್ಪೀಕರ್ ಹುದ್ದೆಗೆ ನಮಗೆ ಷರತ್ತುಬದ್ಧ ಬೆಂಬಲ ನೀಡಬೇಕು ಎಂಬ ವಿಪಕ್ಷಗಳ ಬೇಡಿಕೆ ಎನ್ಡಿಎ ಮೈತ್ರಿಕೂಟಕ್ಕೆ ಸಮಾಧಾನ ತರಲಿಲ್ಲ ಎಂದು ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕಾಂಗ್ರೆಸ್ ಸಂಸದ ಸುರೇಶ್, ಸ್ಪೀಕರ್ ಹುದ್ದೆ ಆಡಳಿತ ಪಕ್ಷಕ್ಕೆ ಮತ್ತು ಡೆಪ್ಯೂಟಿ ಸ್ಪೀಕರ್ ವಿರೋಧ ಪಕ್ಷಕ್ಕೆ ಎಂಬ ಸಂಪ್ರದಾಯ ಅನುಸರಿಸಲಾಗುತ್ತದೆ. ಡೆಪ್ಯೂಟಿ ಸ್ಪೀಕರ್ ಹುದ್ದೆ ನಮ್ಮ ಹಕ್ಕು. ಆದರೆ ಅದನ್ನು ನೀಡಲು ಅವರು ಸಿದ್ಧರಿಲ್ಲ. ಬೆಳಗ್ಗೆ 11.50ರವರೆಗೆ ಸರ್ಕಾರದ ಪ್ರತಿಕ್ರಿಯೆಗಾಗಿ ಕಾದಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದರು.
ಸ್ಪೀಕರ್ ಹುದ್ದೆಗೆ ಒಮ್ಮತ ಮೂಡಿಸಲು ಪ್ರತಿಪಕ್ಷಗಳೊಂದಿಗೆ ಸಮಾಲೋಚಿಸುವ ಜವಾಬ್ದಾರಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ನೀಡಲಾಗಿತ್ತು. ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಸ್ಟಾಲಿನ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಮಾತುಕತೆ ಫಲಿಸಲಿಲ್ಲ.
ಯಾರು ಬಿರ್ಲಾ?
ನಾಮಪತ್ರ ಸಲ್ಲಿಕೆ ಮುನ್ನ ಓಂ ಬಿರ್ಲಾ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದರು. ಕಳೆದ ಲೋಕಸಭೆಯ 5 ವರ್ಷಗಳ ಅವಧಿಗೆ ಸ್ಪೀಕರ್ ಹುದ್ದೆಯನ್ನು ಬಿರ್ಲಾ ಯಶಸ್ವಿಯಾಗಿ ನಿಭಾಯಿಸಿದ್ದರು. ರಾಜಸ್ತಾನದ ಕೋಟಾ-ಬುಂಡಿ ಕ್ಷೇತ್ರದ ಸಂಸದರಾಗಿರುವ ಓಂ ಬಿರ್ಲಾ, ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಬಂದಿದ್ದಾರೆ. ಇದಕ್ಕೂ ಮುನ್ನ ರಾಜಸ್ತಾನ ವಿಧಾನಸಭೆಗೆ ಮೂರು ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಲೋಕಸಭೆ ಸ್ಪೀಕರ್ ಆಗುವ ಮೂಲಕ ಈ ಹುದ್ದೆಗೇರಿದ ರಾಜಸ್ತಾನ ಮೂಲದ ಮೊದಲ ರಾಜಕಾರಣಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. 1962ರಲ್ಲಿ ಜನಿಸಿದ ಬಿರ್ಲಾ, ವಿದ್ಯಾರ್ಥಿ ಜೀವನದಲ್ಲೇ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನಂತರ 1991ರಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು. 1997ರಲ್ಲಿ ರಾಷ್ಟೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಸೂರಜ್ ಬಳೆ ತೊಡ್ತಾನೆ, ಸೀರೆ ಉಡ್ತಾನೆ! ಅಮಾವಾಸ್ಯೆ ರಹಸ್ಯ ಬಯಲು ಮಾಡಿದ ಸಂತ್ರಸ್ತ