ಮನುಷ್ಯರ ಜೀವವನ್ನೂ ಉಳಿಸುವ ಹಾವುಗಳು..!; ಇಂದು ವಿಶ್ವ ಉರಗ ದಿನ

Snake Day
Published on
ಮನುಷ್ಯರು ಮತ್ತು ಹಾವುಗಳ ನಡುವೆ ಪ್ರಾಕೃತಿಕ, ಧಾರ್ವಿುಕ ಹಾಗೂ ವೈಜ್ಞಾನಿಕವಾಗಿ ಅವಿನಾಭಾವ ಸಂಬಂಧವಿದೆ. ಆದರೆ, ಹಾವಿನ ಕುರಿತು ಜನರಲ್ಲಿ ತಪ್ಪು ಕಲ್ಪನೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸಿರುವ ತಜ್ಞರು, ಹಾವುಗಳ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆ ಹಾಗೂ ಹಾವುಗಳ ಸಂರಕ್ಷಣೆಯ ಮೇಲೆ ಬೆಳಕು ಚೆಲ್ಲಿದ್ದಾರೆ.

ಮೈಸೂರು: ಪ್ರಕೃತಿಯ ಸಮತೋಲನದಲ್ಲಿ ಉರಗಗಳ ಕೊಡುಗೆ ಅನನ್ಯ. ಹಾವುಗಳು ಮನುಷ್ಯರ ಜೀವ ಉಳಿವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಉರಗಗಳ ಉಳಿವಿಗೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು. ವಿಶ್ವ ಉರಗ ದಿನದ ಪ್ರಯುಕ್ತ ವಿಜಯವಾಣಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ತಜ್ಞರಿಂದ ವ್ಯಕ್ತವಾದ ಅಭಿಪ್ರಾಯಗಳಿವು. ಮೈಸೂರು ವಿಶ್ವವಿದ್ಯಾಲಯದ ಪ್ರಾಣಿವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎನ್. ಹೆಗಡೆ ಮಾತನಾಡಿ, ಹಾವುಗಳು ಮನುಷ್ಯರಿಗೆ ಕಚ್ಚುತ್ತವೆ ಮತ್ತು ಅದರಿಂದ ಸಾವು ಉಂಟಾಗುತ್ತದೆ ಎಂಬ ಭಯದ ಕಲ್ಪನೆ ಮಾತ್ರ ಹೆಚ್ಚಿನ ಜನರಲ್ಲಿ ಇದೆ. ಆದರೆ, ಹಾವುಗಳು ಮನುಷ್ಯರ ಜೀವ ಉಳಿವಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ ಎಂದು ಹೇಳಿದರು. ಹಾವಿನ ವಿಷದಲ್ಲಿ ಶೇ.99 ಇರುವುದು ಪ್ರೊಟೀನ್ ಅಂಶಗಳು. ಇದರಲ್ಲಿ ವಿವಿಧ ಅಂಶಗಳನ್ನು ಬಳಕೆ ಮಾಡಿಕೊಂಡು ಔಷಧ ತಯಾರಿಸಲಾಗುತ್ತಿದೆ. ಈ ಔಷಧ ಹಲವಾರು ಜನರ ಜೀವವನ್ನು ಪ್ರತಿನಿತ್ಯ ಉಳಿಸುತ್ತಿದೆ ಎಂದು ತಿಳಿಸಿದರು. ಮನುಷ್ಯನ ಡಿಎನ್​ಎ ಕಂಡುಹಿಡಿಯಲು ಹಾವಿನ ವಿಷದ ಅಂಶ ಬಳಕೆ ಮಾಡಲಾಗುತ್ತಿದೆ. ಪಾರ್ಶ್ವವಾಯು, ಹೃದ್ರೋಗ ಸೇರಿ ಹಲವು ಕಾಯಿಲೆಗಳಿಗೆ ಹಾವಿನ ವಿಷದ ಅಂಶವನ್ನು ಬಳಸಿ ಔಷಧ ತಯಾರಿಸಲಾಗುತ್ತದೆ. ಆದರೆ, ಹಾವುಗಳಿಂದ ಮನುಷ್ಯರಿಗೆ ಆಗುತ್ತಿರುವ ಪ್ರಯೋಜನಕ್ಕಿಂತ ಹಾವು ಕಚ್ಚಿದ ಸುದ್ದಿಗಳೇ ಹೆಚ್ಚಾಗಿ ಬಿಂಬಿತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವೇಕೆ ಸಂರಕ್ಷಿಸಬೇಕು?

ಹಾವುಗಳು ಇಲ್ಲದೇ ಹೋದರೆ ಮನುಷ್ಯ ಹಲವಾರು ಸಮಸ್ಯೆಗಳಿಗೆ ಗುರಿಯಾಗುತ್ತಾನೆ. ಜಮೀನುಗಳಲ್ಲಿ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಇಲಿಗಳು ನಾಶ ಮಾಡುತ್ತವೆ. ಒಂದು ವೇಳೆ ಹಾವುಗಳ ಕೊರತೆ ಎದುರಾದರೆ ಆಹಾರ ಪದಾರ್ಥ ಇಲಿಗಳ ಪಾಲಾಗುತ್ತದೆ. ಇಲಿಗಳನ್ನು ಹದ್ದುಗಳೂ ಬೇಟೆಯಾಡುತ್ತವೆ. ಆದರೆ, ಬಿಲದೊಳಗೆ ನುಗ್ಗಿ ಬೇಟೆಯಾಡಲು ಹಾವುಗಳಿಗೆ ಮಾತ್ರ ಸಾಧ್ಯ. ಹಾವುಗಳು ಇಲ್ಲದೇ ಹೋದರೆ ಇಲಿಗಳ ಸಂತತಿ ಹೆಚ್ಚಾಗಿ ಪ್ರಕೃತಿಯಲ್ಲಿ ಏರುಪೇರು ಉಂಟಾಗುತ್ತದೆ. ಹೀಗಾಗಿ ಹಾವುಗಳ ಸಂರಕ್ಷಣೆಯ ಹೊಣೆಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂದು ಉರಗತಜ್ಞ ಸ್ನೇಕ್ ಶ್ಯಾಮ್ ಹೇಳಿದರು. ಹಾವುಗಳು ಹೆಚ್ಚಾಗಿ ಕಾಡಿನಲ್ಲಿ ವಾಸಿಸುವುದಿಲ್ಲ. ಜನವಸತಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶವೇ ಅವುಗಳ ಆವಾಸಸ್ಥಾನ. ಇಲ್ಲಿ ಅವುಗಳಿಗೆ ಬೇಕಾದ ಆಹಾರ, ನೀರು, ವಾಸಯೋಗ್ಯ ವಾತಾವರಣ ದೊರೆಯುತ್ತದೆ. ಹಾವುಗಳ ಕುರಿತು ಜನರಲ್ಲಿ ತಪ್ಪು ತಿಳಿವಳಿಕೆಗಳಿದ್ದು, ಅದನ್ನು ಹೋಗಲಾಡಿಸಲು ಪ್ರಾಥಮಿಕ ಶಿಕ್ಷಣದಲ್ಲಿಯೇ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದರು.

ಹಾವು ಸಂರಕ್ಷಕರ ಬಗ್ಗೆ ಇರಲಿ ಕಾಳಜಿ: ಜನರಲ್ಲಿ ಹಾವುಗಳ ಸಂರಕ್ಷಣೆಯ ಜಾಗೃತಿ ಮೂಡಿಸುವಲ್ಲಿ ಹಾವು ಸಂರಕ್ಷಕರ ಪಾತ್ರ ಪ್ರಮುಖ. ಆದರೆ, ಸಾಕಷ್ಟು ಜನರು ಮನೆಯಲ್ಲಿ ಹಾವು ಸೇರಿಕೊಂಡಿರುವುದಾಗಿ ಕರೆ ಮಾಡುತ್ತಾರೆ. ಕೆಲಸ ಮುಗಿದ ಮೇಲೆ ನಮ್ಮನ್ನು ಅಗೌರವದಿಂದ ನಡೆಸಿಕೊಳ್ಳುತ್ತಾರೆ ಎಂದು ಸ್ನೇಕ್ ಶ್ಯಾಮ್ ಬೇಸರ ವ್ಯಕ್ತಪಡಿಸಿದರು. ನಾವು ಜೀವ ಒತ್ತೆ ಇಟ್ಟು ಹಾವುಗಳ ಸಂರಕ್ಷಣೆ ಮಾಡುತ್ತೇವೆ. ಆದರೆ ಸರ್ಕಾರದಿಂದ ನಮಗೆ ಯಾವುದೇ ನೆರವು ದೊರೆಯುವುದಿಲ್ಲ. ಕೇರಳದ ಉರಗತಜ್ಞ ವಾವಾ ಸುರೇಶ್ ಹಾವು ಕಡಿತಕ್ಕೆ ಒಳಗಾದಾಗ ಇಡೀ ರಾಜ್ಯದ ಜನರು ಅವರ ಬೆಂಬಲಕ್ಕೆ ನಿಂತರು. ಅದೇ ರೀತಿಯ ಬೆಂಬಲ ನಮ್ಮ ಜನತೆಯಿಂದ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಯುಟ್ಯೂಬ್ ನೋಡಿ ಹಾವು ಹಿಡಿಯಬೇಡಿ: ಯುಟ್ಯೂಬ್, ಫೇಸ್​ಬುಕ್ ವಿಡಿಯೋಗಳನ್ನು ನೋಡಿ ಕೆಲವರು ಹಾವು ಸೆರೆಗೆ ಮುಂದಾಗುತ್ತಾರೆ. ಯಾವುದೇ ಕಾರಣಕ್ಕೂ ಇಂತಹ ಪ್ರಯತ್ನಕ್ಕೆ ಕೈಹಾಕಬೇಡಿ. ತರಬೇತಿ ಇಲ್ಲದೆ ಹಾವುಗಳನ್ನು ಹಿಡಿಯಬಾರದು. ಏಕೆಂದರೆ, ಅಂಥವರಿಗೆ ವಿಷಯುಕ್ತ-ವಿಷರಹಿತ ಹಾವುಗಳ ಮಾಹಿತಿ ಇರುವುದಿಲ್ಲ. ಅಂತೆಯೆ, ಅವುಗಳ ಆಕ್ರಮಣಶೀಲ ಗುಣಗಳ ಕುರಿತೂ ಗೊತ್ತಿರುವುದಿಲ್ಲ ಎಂದು ಸ್ನೇಕ್ ಶ್ಯಾಮ್ ಹೇಳಿದರು.

ಉರಗಗಳ ಉಳಿವಿಗೆ ಧರ್ಮದ ಕೊಡುಗೆ!

ಹಾವುಗಳ ಉಳಿವಿನಲ್ಲಿ ಧರ್ಮದ ಕೊಡುಗೆಯೂ ಮಹತ್ತರ ಎಂದು ಆದಿಚುಂಚನಗಿರಿ ಕಾಲಭೈರವೇಶ್ವರ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಕೆ. ಮನೋಹರ ದೀಕ್ಷಿತ್ ಹೇಳಿದರು. ಹಿಂದು ಧರ್ಮದಲ್ಲಿ ಹಾವುಗಳಿಗೆ ಪೂಜ್ಯನೀಯ ಸ್ಥಾನವಿದೆ. ವೇದಗಳಲ್ಲೇ ಹಾವುಗಳ ಮಹತ್ವ ತಿಳಿಸಲಾಗಿದೆ. ಹಾವು ಹತ್ಯೆ ಮಾಡಿದರೆ ದೋಷ ಉಂಟಾಗುತ್ತದೆ ಎಂಬ ಅಂಶ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಭಯ ಹಾಗೂ ಧಾರ್ವಿುಕ ನಂಬಿಕೆಯ ಕಾರಣಗಳಿಂದ ಹಾವುಗಳು ನಮ್ಮ ನಡುವೆ ಇಂದಿಗೂ ಉಳಿದಿವೆ ಎಂದರು.

ಸರ್ಪದೋಷ ನಿವಾರಣೆ: ಸರ್ಪದೋಷ ನಿವಾರಣೆಗೆ ನಾಗಾರಾಧನೆಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮ ಣ್ಯ, ಘಾಟಿ ಸುಬ್ರಹ್ಮಣ್ಯ ಹಾಗೂ ರಾಮನಾಥಪುರ ಸುಬ್ರಹ್ಮಣ್ಯ ದೇವಸ್ಥಾನಗಳು ಪ್ರಮುಖ. ಇದಲ್ಲದೆ, ನಾಗಾರಾಧನೆಯ ವಿವಿಧ ಕ್ಷೇತ್ರಗಳಲ್ಲೂ ಸರ್ಪದೋಷಕ್ಕೆ ಪರಿಹಾರ ಮಾಡಿಕೊಳ್ಳಬಹುದು ಎಂಬ ನಂಬಿಕೆ ಇದೆ ಎಂದು ಹೇಳಿದರು.

ಪುಂಗಿ ಶಬ್ದಕ್ಕೆ ಹಾವು ತಲೆದೂಗುವುದಿಲ್ಲ

ಹಾವಾಡಿಗನ ಪುಂಗಿ ಶಬ್ದಕ್ಕೆ ಹಾವು ತಲೆದೂಗುತ್ತದೆಂದು ಬಹುತೇಕರು ನಂಬಿದ್ದಾರೆ. ಆದರೆ, ವಾಸ್ತವವಾಗಿ ಹಾವಿಗೆ ಹೊರಕಿವಿ ಇಲ್ಲ, ಒಳಕಿವಿ ಮಾತ್ರ ಇದೆ. ಹಾಗಾಗಿ, ಅದಕ್ಕೆ ಪುಂಗಿ ಶಬ್ದ ಕೇಳಿಸುವುದಿಲ್ಲ. ಜೀವಕ್ಕೆ ಅಪಾಯ ಎದುರಾಗುವ ಭೀತಿಯಿಂದ ಹಾವು ತನ್ನ ಎದುರು ಇರುವ ಶತ್ರುವಿನ ಚಲನವಲನಕ್ಕೆ ತಕ್ಕಂತೆ ಚಲಿಸುತ್ತದೆ. ಹಾವಾಡಿಗ ಪುಂಗಿಯನ್ನು ಯಾವ ದಿಕ್ಕಿಗೆ ತಿರುಗಿಸುತ್ತಾನೋ ಅತ್ತ ಹಾವು ತಿರುಗುತ್ತದೆಯಷ್ಟೇ. ಹಾವುಗಳ ಕಣ್ಣಿನ ದೃಷ್ಟಿಯೂ ಮಂದ. ಹಾವುಗಳ ಸಂವೇದನಾ ಅಂಗ ಅದರ ಸೀಳು ನಾಲಿಗೆ ಮಾತ್ರ. ಸೀಳು ನಾಲಿಗೆಯ ಮೂಲಕವೇ ಅದು ತನ್ನ ಸುತ್ತ ಇರುವ ಜೀವಿಗಳ ವಾಸನೆ ಹಾಗೂ ಉಷ್ಣಾಂಶವನ್ನು ಗ್ರಹಿಸಿ ಬೇಟೆಯಾಡುತ್ತವೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಣಿವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎನ್. ಹೆಗಡೆ ಮಾಹಿತಿ ನೀಡಿದರು.

ನಾಗಮಣಿ ಎಂಬುದೆಲ್ಲ ಸುಳ್ಳು: ನಾಗರಹಾವಿನಲ್ಲಿ ನಾಗಮಣಿ ಇರುತ್ತದೆ ಎಂಬ ನಂಬಿಕೆ ಇದೆ. ಆದರೆ, ಇದು ಶುದ್ಧ ಸುಳ್ಳು. ಈ ರೀತಿಯ ಸುಳ್ಳುಗಳನ್ನು ಹೇಳಿ ಜನರನ್ನು ಮೋಸ ಮಾಡಲಾಗುತ್ತಿದೆ. ಆದ್ದರಿಂದ ನಾಗಮಣಿ ಹೆಸರಿನಲ್ಲಿ ಹಾವುಗಳ ಹತ್ಯೆಗೆ ಮುಂದಾಗಬಾರದು ಎಂಬುದು ಡಾ.ಎಸ್.ಎನ್. ಹೆಗಡೆ ಅವರ ಸಲಹೆ.

ಬಹುತೇಕ ಹಾವು ವಿಷಕಾರಿಯಲ್ಲ: ಉರಗಗಳ ಬಗ್ಗೆ ಇರುವಷ್ಟು ತಪ್ಪು ಕಲ್ಪನೆಗಳು ಬೇರೆ ಯಾವುದೇ ಜೀವಿಗಳ ಮೇಲೆ ಇಲ್ಲ. ಮೂರು ಸಾವಿರಕ್ಕೂ ಹೆಚ್ಚು ಪ್ರಭೇದದ ಹಾವುಗಳು ಇವೆ. ಆ ಪೈಕಿ ಶೇ.8 ಹಾವುಗಳು ಮಾತ್ರ ವಿಷಕಾರಿ. ಆದರೆ, ಎಲ್ಲರೂ ಹಾವು ಕಂಡರೆ ಭಯಗೊಂಡು ಅದನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆ. ಜೀವ ಪ್ರಪಂಚದಲ್ಲಿ ಬೇರೆ ಜೀವಿಗಳಂತೆ ಹಾವು ಕೂಡ ಒಂದು. ಆದರೆ, ಹಾವಿನ ಬಗ್ಗೆ ಇರುವಷ್ಟು ಭಯ, ತಪ್ಪು ಕಲ್ಪನೆಗಳು ಬೇರೆ ಜೀವಿಗಳ ಮೇಲೆ ಇಲ್ಲ. ಇದಕ್ಕೆ ಅದರ ಆಕಾರ ಕಾರಣವಾಗಿರಬಹುದು ಎಂದು ಡಾ.ಹೆಗಡೆ ಅಭಿಪ್ರಾಯಪಟ್ಟರು.

ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು?

ಹಾವು ಕಚ್ಚಿದ ತಕ್ಷಣ ಆತಂಕಕ್ಕೆ ಒಳಗಾಗುವರ ಸಂಖ್ಯೆಯೇ ಹೆಚ್ಚು. ಈ ಆತಂಕದಿಂದಲೇ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಹಾವು ಕಚ್ಚಿದ ತಕ್ಷಣ ಸಾವು ಸಂಭವಿಸುವುದಿಲ್ಲ. ಹಾವು ಕಡಿತದಿಂದ ಶೇ.10 ಜನರು ಮಾತ್ರ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ, ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ತಲುಪಿಸಿದರೆ ಜೀವ ಉಳಿಸಬಹುದು ಎಂದು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಂಜನ್ ತಿಳಿಸಿದರು. ಯಾವ ಹಾವು ಕಚ್ಚಿದೆ ಎಂಬುದನ್ನು ತಿಳಿದುಕೊಂಡರೆ ಚಿಕಿತ್ಸೆ ನೀಡಲು ಅನುಕೂಲ. ಹಾವು ಕಡಿತಕ್ಕೆ ಒಳಗಾಗಿ 3 ಗಂಟೆಯ ಒಳಗೆ ಆಸ್ಪತ್ರೆಗೆ ಬಂದರೆ ಜೀವ ಉಳಿಸಬಹುದು. ಇಲ್ಲದಿದ್ದರೆ ರೋಗಿಯ ಸ್ಥಿತಿ ಬಿಗಡಾಯಿಸಿರುತ್ತದೆ. ಹಾಗಾಗಿ, ಆದಷ್ಟು ಬೇಗ ಆಸ್ಪತ್ರೆಗೆ ಸೇರಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು. ಸಾಮಾನ್ಯವಾಗಿ ಹಾವುಗಳು ಕೈ ಅಥವಾ ಕಾಲಿನ ಭಾಗಕ್ಕೆ ಕಚ್ಚುತ್ತವೆ. ಕಚ್ಚಿದ ಭಾಗವನ್ನು ಶುಚಿ ಅಥವಾ ಐಸ್​ಕ್ಯೂಬ್​ನಿಂದ ಮಸಾಜ್ ಮಾಡಬಾರದು. ವಿಷ ಹೊರ ತೆಗೆಯಲೆಂದು ರಕ್ತ ಹೀರುವ ಕೆಲಸವನ್ನು ಮಾಡಲೇಬಾರದು. ಕಚ್ಚಿದ ಭಾಗವನ್ನು ದಾರದಿಂದ ಬಿಗಿಯಾಗಿ ಕಟ್ಟಬಾರದು. ಕಚ್ಚಿದ ಕಾಲು ಅಥವಾ ಕೈ ಮೇಲ್ಭಾಗದಲ್ಲಿ ಒಂದು ಪಟ್ಟಿ (ಸಮತಟ್ಟಾದ ಕೋಲು) ಇಟ್ಟು ಅದರ ಮೇಲೆ ಬಟ್ಟೆ ಅಥವಾ ದಾರದಿಂದ ಸುತ್ತಬೇಕು. ಆದರೆ ಬಿಗಿಯಾಗಿ ಸುತ್ತಬಾರದು. ಕಚ್ಚಿದ ಭಾಗ ಅಲುಗಾಡದಂತೆ ನೋಡಿಕೊಂಡರೆ ಸಾಕು. ಅಲುಗಾಡಿದಷ್ಟು ವಿಷ ಹರಡುವ ತೀವ್ರತೆ ಹೆಚ್ಚಿರುತ್ತದೆ ಎಂದರು. ಹಾವು ಕಡಿತಕ್ಕೆ ಒಳಗಾದಾಗ ನಿರ್ಲಕ್ಷ್ಯ ಮಾಡಬಾರದು. ನಾಟಿ ಔಷಧದ ಮೊರೆ ಹೋಗಬಾರದು ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net