

ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಸವಕಳಿಯಾಗುವುದು ಸಾಮಾನ್ಯ ಸಂಗತಿ. ಆದರೆ ಇತ್ತೀಚೆಗೆ ಇದರ ಸಮಸ್ಯೆ ಅತಿಯಾಗಿ ಕಾಡುತ್ತಿರಲು ಕಾರಣ ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನಶೈಲಿ. ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತಿರುವುದು ಮುಖ್ಯ ಕಾರಣಗಳಲ್ಲೊಂದು. ಅತಿಯಾಗಿ ಸಕ್ಕರೆ, ತಂಪು ಪಾನೀಯ, ಜಂಕ್ ಫುಡ್ ಸೇವಿಸುವುದರಿಂದ ಅವುಗಳಲ್ಲಿ ಇರುವ ಪೋಷಕಾಂಶ ವಿರೋಧಿ ಗುಣವು ನಮಗೆ ಉಳಿದ ಆಹಾರಗಳಿಂದ ಸಿಗುವ ಪೋಷಕಾಂಶವೂ ಸಿಗದಂತೆ ನೋಡಿಕೊಳ್ಳುತ್ತವೆ. ಇನ್ನೊಂದು ಮುಖ್ಯ ಕಾರಣ ವ್ಯಾಯಾಮರಹಿತ ಜೀವನ ಶೈಲಿ. ಇಂದಿಗೂ ಎಂಬತ್ತು ತೊಂಬತ್ತು ದಾಟಿದ ಹಿರಿಯರ ಮೊಣಕಾಲು 40 - 50 ವಯಸ್ಸಿನವರ ಮೊಣಕಾಲಿಗಿಂತ ಚೆನ್ನಾಗಿಯೇ ಇರುತ್ತದೆ. ಇದಕ್ಕೆ ಅವರು ನಿತ್ಯವೂ ಕನಿಷ್ಠ ಆರೇಳು ತಾಸು ದೈಹಿಕವಾಗಿ ಶ್ರಮ ಪಡುತ್ತಿದ್ದುದು ಕಾರಣ. ನಾವು ದಿನಕ್ಕೆ 10 ನಿಮಿಷವೂ ಬಿಸಿಲಿಗೆ ಮೈಯೊಡ್ದುವುದನ್ನು ಬಿಟ್ಟಿದ್ದೇವೆ.
ಇದರಿಂದಾಗಿ ದೇಹದಲ್ಲಿ ವಿಟಮಿನ್ ಡಿ ಯ ಕೊರತೆಯಾಗಿ ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ದೇಹ ಹೀರಿಕೊಳ್ಳಲು ಸಾಧ್ಯವಾಗದೇ ಮೂಳೆ ಸವಕಳಿ ಬೇಗ ಆಗುತ್ತಿದೆ. ಅತಿಯಾದ ಬೊಜ್ಜು, ಅತಿಯಾಗಿ ಮೆಟ್ಟಿಲುಗಳನ್ನು ಹತ್ತಿಳಿಯುವುದು, ಮಹಿಳೆಯರಲ್ಲಿ ಮುಟ್ಟು ನಿಂತ ನಂತರ ಆಗುವ ಹಾರ್ವೇನ್ ವ್ಯತ್ಯಾಸ ಇವೆಲ್ಲ ಇನ್ನುಳಿದ ಕಾರಣಗಳು. ಕಾರಣಗಳು ಹಲವಾದರೂ ಸಮಸ್ಯೆ ಪ್ರಾರಂಭವಾಗುವ ಮೊದಲೇ ಕೆಲವು ಕ್ರಮಗಳನ್ನು ವಹಿಸಿದರೆ ಇದನ್ನು ಸುಲಭವಾಗಿ ತಡೆಯಬಹುದು; ಬಂದ ನಂತರವೂ ಬೇಗ ಗುಣಪಡಿಸಿಕೊಳ್ಳಬಹುದು. ಮೊದಲನೆಯದಾಗಿ ನಮ್ಮ ಆಹಾರದಲ್ಲಿ ಸಂಧಿಗಳ ಆರೋಗ್ಯವನ್ನು ಕಾಪಾಡುವಂತಹ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಒಳ್ಳೆಯ ಕೊಬ್ಬು ಅಂದರೆ ಮನೆಯಲ್ಲೇ ತಯಾರಿಸಿದತುಪ್ಪ, ಗಾಣದಲ್ಲಿ ತೆಗೆದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆಯಂಥವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳಾದ ಹಾಲು, ಎಳ್ಳು, ಹಸಿರು ಸೊಪ್ಪು ತರಕಾರಿಗಳು, ನಟ್ಗಳು, ಕೊಬ್ಬರಿಗಳನ್ನು ಪ್ರತಿನಿತ್ಯ ಬಳಸಬೇಕು. ಮಂಡಿನೋವು ಬರದಂತೆ ತಡೆಯಲು ಮತ್ತು ಇರುವ ನೋವು ಹೆಚ್ಚಾಗದಂತೆ ನೋಡಿಕೊಳ್ಳಲು ನಿತ್ಯವೂ ಎಣ್ಣೆಯ ಮಸಾಜ್ ಅನ್ನು ಮಾಡಲೇಬೇಕು. ಆಯುರ್ವೆದದಲ್ಲಿ ನಿತ್ಯವೂ ಎಣ್ಣೆಯ ಮಸಾಜ್ ಮಾಡುವುದರಿಂದ ವಾತರೋಗಗಳು ಬರುವುದಿಲ್ಲ ಎನ್ನಲಾಗಿದೆ.
ಮೂಳೆ ಸವಕಳಿ ಕೂಡ ವಾತರೋಗವೇ. ಹಾಗಾಗಿ ಶುದ್ಧವಾದ ಎಣ್ಣೆಯಿಂದ ಮಸ್ಸಾಜ್ ಮಾಡಿಕೊಂಡು ಶಾಖ ತೆಗೆದುಕೊಳ್ಳಬೇಕು. ಶಾಖಕ್ಕೆ ಬಿಸಿನೀರನ್ನು ಸುರಿಯುವುದು, ಬಿಸಿನೀರಿನ ಪಟ್ಟಿ ಇಡುವುದು, ಉಪ್ಪಿನ ಶಾಖ ಹೀಗೆ ಯಾವುದಾದರೂ ಒಂದು ವಿಧಾನವನ್ನು ಬಳಸಬಹುದು. ಪ್ರಾರಂಭಿಕ ಹಂತದ ಮಂಡಿನೋವಿಗೆ ಅದಕ್ಕೆಂದೇ ಇರುವ ಕೆಲವು ವ್ಯಾಯಾಮಗಳು ತುಂಬಾ ಸಹಕಾರಿ. ಮಂಡಿಯ ಸವಕಳಿ ಜಾಸ್ತಿಯಾದ ನಂತರ ವಾಕಿಂಗ್ ಮಾಡುವುದು ಅಥವಾ ವೈದ್ಯರ ಸಲಹೆ ಇಲ್ಲದೇ ವ್ಯಾಯಾಮ ಮಾಡುವುದರಿಂದ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ. ಔಡಲ ಸೊಪ್ಪು, ಎಕ್ಕೆ ಸೊಪ್ಪು ಮತ್ತು ಲಕ್ಕಿಸೊಪ್ಪುಗಳನ್ನು ತಂದು ಉಗಿಯಲ್ಲಿ ಬೇಯಿಸಿ ಪೇಸ್ಟ್ ತಯಾರಿಸಿ ಬಿಸಿ ಮಾಡಿ ಮಸಾಜ್ ಮಾಡಿದ ಮಂಡಿಗೆ ಹಚ್ಚುವುದರಿಂದ ಮೊಣಕಾಲಿನ ಶಕ್ತಿ ಹೆಚ್ಚುತ್ತದೆ; ನೋವೂ ಕಡಿಮೆಯಾಗುತ್ತದೆ. ಕೆಲವರಿಗೆ ಎಕ್ಕೆ ಸೊಪ್ಪಿನಿಂದ ಅಲರ್ಜಿ ಆಗಬಹುದು; ಅಂತಹ ಲಕ್ಷಣಗಳು ಕಂಡರೆ ಅದನ್ನು ಬಿಟ್ಟು ಉಳಿದೆರಡನ್ನು ಮಾತ್ರ ಬಳಸಬೇಕು. ಒಂದು ಹಂತ ದಾಟಿದ ನಂತರ ಮನೆಮದ್ದುಗಳು, ವ್ಯಾಯಾಮಗಳಿಂದ ಮಂಡಿನೋವು ಕಡಿಮೆಯಾಗಲು ಸಾಧ್ಯವಿಲ್ಲ. ಜಾನುಬಸ್ತಿ, ಪ್ರಕೃತಿ ಚಿಕಿತ್ಸೆ, ಫಿಸಿಯೋಥೆರಪಿ, ಪಂಚಕರ್ಮ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. 10 ರಿಂದ 15 ದಿನದ ಚಿಕಿತ್ಸೆಯನ್ನು ವರ್ಷದಲ್ಲಿ ಎರಡು ಬಾರಿ ತೆಗೆದುಕೊಂಡರೆ ಮಂಡಿಯ ಆರೋಗ್ಯವೃದ್ಧಿ ಆಗಿಯೇ ಆಗುತ್ತದೆ. ಒಟ್ಟಿನಲ್ಲಿ ತಡವಾಗುವ ಮೊದಲೇ ಎಚ್ಚೆತ್ತುಕೊಂಡರೆ ಎಷ್ಟೇ ವಯಸ್ಸಾದರೂ ಮಂಡಿಯನ್ನು ಯೌವನದಿಂದ ಇಟ್ಟುಕೊಳ್ಳಬಹುದು.