

ಪಂಡಿತ್ ಡಾ. ಪುಟ್ಟರಾಜ ಕವಿ ಗವಾಯಿ ಅವರು ಉಭಯಗಾಯನ ವಿಶಾರದ, ಸಕಲವಾದ್ಯ ಕಂಠೀರವ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸಾರಂಗಿ, ವೀಣೆ, ಮ್ಯಾಂಡೋಲಿಯನ್, ಪಿಟೀಲು, ಸರೋದ್, ತಬಲಾ, ಹಾರ್ವೇನಿಯಂ, ಸಂತೂರ್, ಸಿತಾರ್ ಮುಂತಾದ ಅನೇಕ ವಾದ್ಯಗಳನ್ನು ಅತ್ಯಂತ ಸುಶ್ರಾವ್ಯವಾಗಿ ಲೀಲಾಜಾಲವಾಗಿ ಅವರು ನುಡಿಸುವುದನ್ನು ಕೇಳುತ್ತಿದ್ದರೆ ಅದೊಂದು ವಿಸ್ಮಯವಾದ ಕ್ಷಣವಾಗುತ್ತಿತ್ತು. ಅಷ್ಟು ಮಾತ್ರವಲ್ಲ, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವ ಪುರಂದರ ದಾಸರ ಸಂದೇಶದಂತೆ ಗುರು ಪಥದಲ್ಲಿ ನಡೆದು, ಅಂಧ-ಅನಾಥ ಮಕ್ಕಳ ಬಾಳಿಗೆ ಮಹಾ ಬೆಳಕಾದವರು.
ಕಣ್ಣಿಲ್ಲದ ವ್ಯಕ್ತಿ ಒಂದು ಬೃಹತ್ ಶಕ್ತಿಯಾಗಿ ಪರಿವರ್ತನೆಗೊಂಡು ಜೀವನ ಪರ್ಯಂತ ಸತ್ಕಾರ್ಯಗಳನ್ನು ಮಾಡಿ, ತಾನೇನು ಮಾಡಿಲ್ಲ ಎಂಬಂತೆ ಸರಳವಾಗಿ ಇದ್ದು ಅದ್ಭುತ ಇತಿಹಾಸ ಸೃಷ್ಟಿಸಲು ಸಾಧ್ಯವಾಗಿದ್ದು ಒಂದು ವಿಸ್ಮಯವೇ ಸರಿ!
ಗವಾಯಿಗಳ ದಿನಚರಿ ತುಂಬ ಅಚ್ಚುಕಟ್ಟಾಗಿತ್ತು. ಬೆಳಗ್ಗೆ 4 ಗಂಟೆಗೆ ಎದ್ದು ನಿತ್ಯ ಕರ್ಮ ಹಾಗೂ ಯೋಗದ ನಂತರ ಬಾವಿ ನೀರಿನ ಮಜ್ಜನದೊಂದಿಗೆ ಮಡಿಯಾಗಿ ಪೂಜಾ ಕೋಣೆ ಸೇರಿದರೆ ಹೊರಗಿನ ಜಗತ್ತನ್ನೇ ಮರೆಯುತ್ತಿದ್ದರು. ನಾಲ್ಕೈದು ಗಂಟೆಗಳವರೆಗೆ ಆರಾಧ್ಯ ದೈವದಲ್ಲಿ ತನ್ಮಯರಾಗಿ ಇಷ್ಟಲಿಂಗ ಅರ್ಚನೆಯನ್ನು ತಪ್ಪದೇ ಮಾಡುತ್ತಿದ್ದರು. ಜೊತೆಗೆ ಆಶ್ರಮದ ಮಕ್ಕಳಿಗೆ ಪಾಠ ಪ್ರವಚನ, ಪುರಾಣ ನಾಟಕಗಳಿಗೆ ಮಾರ್ಗದರ್ಶನ, ಭಕ್ತಾದಿಗಳ ಕುಶಲೋಪರಿ ವಿಚಾರಿಸುವುದು, ಆಶ್ರಮದ ಮಕ್ಕಳ ಆಟ ಊಟ ಉಪಚಾರ ಜೊತೆಗೆ ಸರ್ವ ರೀತಿಯಲ್ಲಿ ಆ ಮಕ್ಕಳ ಕಾಳಜಿಯಲ್ಲಿ ಇವರ ಇಡೀ ದಿನ ಕಳೆಯುತ್ತಿತ್ತು.
ಅಂಧ, ಅನಾಥ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತ ಕಲಿಸುತ್ತಿದ್ದರು. ಅವರಿಗೆ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು, ಸ್ವಾವಲಂಬಿಗಳಾಗಲು, ಆತ್ಮವಿಶ್ವಾಸ ತುಂಬಿ ಮಾರ್ಗದರ್ಶನ ನೀಡುತ್ತಿದ್ದರು. ಅಂಧತ್ವ ಎನ್ನುವ ಭಾವನೆಯನ್ನು ಕಿತ್ತೊಗೆದು ಇಡೀ ಸಮಾಜಕ್ಕೆ ಬೆಳಕಾಗುವ ರೀತಿಯಲ್ಲಿ ಬದುಕನ್ನು ನಡೆಸಲು ಎಲ್ಲ ಮಕ್ಕಳನ್ನು ಸಶಕ್ತಗೊಳಿಸಿದ ಪುಣ್ಯ ಪುಟ್ಟರಾಜ ಗವಾಯಿಗಳಿಗೆ ಹಾಗೂ ಗುದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಸಲ್ಲುತ್ತದೆ.
ಆಶ್ರಮದ ಎಲ್ಲ ಜವಾಬ್ದಾರಿ ಹೊತ್ತು ಗುರುವಿನ ಮಾರ್ಗದರ್ಶನದಂತೆ ಎಲ್ಲಿಯೂ ಚ್ಯುತಿ ಬಾರದಂತೆ ನಿತ್ಯ ಜೋಳಿಗೆ ಹೆಗಲಿಗೇರಿಸಿ ಊರೂರು ಸಂಚಾರ, ನಿರಂತರ ಪ್ರವಾಸ, ಚಟುವಟಿಕೆಗಳು ನಡೆದೇ ಇರುತ್ತಿದ್ದವು. ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದರೂ ತಮ್ಮ ಜವಾಬ್ದಾರಿಯನ್ನು ಎಂದೂ ಮರೆತಿರಲಿಲ್ಲ. ಹಾಗಾಗಿ ಗದುಗಿನ ನಡೆದಾಡುವ ದೇವರಾಗಿ ಈ ನಾಡಿಗೆ ಬೆಳಕನ್ನು ನೀಡಿದ ದಿವ್ಯ ಚೇತನವಾದವರು.
1914 ಮಾರ್ಚ್ 3ರಂದು ರೇವಣಯ್ಯ-ಸಿದ್ದಮ್ಮ ದಂಪತಿಯ ಪುತ್ರನಾಗಿ ಜನಿಸಿದ ಪುಟ್ಟರಾಜ ಗವಾಯಿಗಳ ಮೂಲ ಸ್ಥಳ ಹಾನಗಲ್ ತಾಲೂಕಿನ ಹೊಸಪೇಟೆ. ಇವರು ಜನಿಸಿದ್ದು ಸಿದ್ದಮ್ಮನ ಸೋದರನಾದ ಚಂದ್ರಶೇಖರಯ್ಯ ಆವರ ಊರಾದ ಹಾವೇರಿ ಜಿಲ್ಲೆಯ ಕರ್ಜಗಿ ಸಮೀಪದ ದೇವಗಿರಿಯಲ್ಲಿ. ಬಾಲ್ಯದ ಹೆಸರು ಪುಟ್ಟಯ್ಯ. ಸದಾ ಕ್ರಿಯಾಶೀಲ ಬಾಲಕನಾಗಿದ್ದ ಇವರು ತಂದೆಯನ್ನು ಕಳೆದುಕೊಂಡ ನಂತರ ತಾಯಿ ಹಾಗೂ ಸೋದರಮಾವನ ಆಶ್ರಯದಲ್ಲಿ ಬೆಳೆಯಬೇಕಾಯಿತು. ಪುಟ್ಟಯ್ಯನಿಗೆ ಆರು ತಿಂಗಳು ಆಗುವಷ್ಟರಲ್ಲಿ ಕಣ್ಣುಬೇನೆ ಬಂದು, ನಾಟಿ ವೈದ್ಯರ ಅಚಾತುರ್ಯದಿಂದ ಔಷಧೋಪಚಾರದಲ್ಲಿ ವ್ಯತ್ಯಾಸವಾಗಿ ಕಣ್ಣು ಗುಡ್ಡೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಅಂದಿನಿಂದ ಪುಟ್ಟಯ್ಯನ ಬಾಳು ಅಂಧಕಾರದಲ್ಲಿ ಮುಳುಗಿ ಹೋದಂತಾಯಿತು. ಅಂಧನಾದರೂ ಬಾಲಕ ಪುಟ್ಟಯ್ಯ ಕ್ರಿಯಾಶೀಲತೆಯಲ್ಲಿ ಎಂದಿಗೂ ಮುಂದೆ.
ಇವರ ಸೋದರ ಮಾವ ಚಂದ್ರಶೇಖರಯ್ಯನವರು ಪಂ. ಪಂಚಾಕ್ಷರಿ ಗವಾಯಿಗಳವರ ಶಿಷ್ಯರು. ಬಿಡುವಿನ ವೇಳೆಯಲ್ಲಿ ಹಾರ್ವೇನಿಯಂ ನುಡಿಸುವುದನ್ನು ಕಲಿಸುತ್ತಿದ್ದರು.ಅತಿ ಆಸಕ್ತಿಯಿಂದ ಎಲ್ಲವನ್ನೂ ಗ್ರಹಿಸುತ್ತಿದ್ದ ಪುಟ್ಟಯ್ಯ ಬಹುಬೇಗನೆ ಸರಸ್ವತಿಯ ಆರಾಧಕರಾದರು. ಇವರ ಜ್ಞಾನದಾಹವನ್ನು ಅರಿತ ಸೋದರ ಮಾವ, ಹಾನಗಲ್ ಕುಮಾರ ಸ್ವಾಮಿಗಳ ಶಿಷ್ಯರಾದ ಪಂಚಾಕ್ಷರಿ ಗವಾಯಿಗಳಿಗೆ ಬಾಲಕ ಪುಟ್ಟಯ್ಯನನ್ನು ಪರಿಚಯಿಸಿದರು. ಪ್ರಶ್ನೆಗಳಿಗೆ ಪಟಪಟನೆ ಧೈರ್ಯದಿಂದ ಉತ್ತರಿಸುತ್ತಿದ್ದ ಪುಟ್ಟಯ್ಯನನ್ನು ನೋಡಿ ಗವಾಯಿಗಳು ಈ ಬಾಲಕ ಮುಂದೆ ವಿಶೇಷ ವ್ಯಕ್ತಿಯಾಗುತ್ತಾನೆ ಎಂದು ಅರಿತಿದ್ದರು. ಎಂಟು ವರ್ಷದಲ್ಲಿದ್ದಾಗಲೇ ಸಂಗೀತ ವಿದ್ಯಾರ್ಥಿಯಾಗಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಸರ್ವಕಲೆಗಳ ಪಾರಂಗತರಾಗಿ ಆಶ್ರಮದ ಪೀಠಾಧಿಪತಿ ಸ್ಥಾನ ಅಲಂಕರಿಸಿದರು.
1944ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜರು ಆಶ್ರಮದ ಅಭಿವೃದ್ಧಿ, ಅಂಧ ಅನಾಥರ ಕಾಳಜಿಯಲ್ಲಿಯೇ ಭಗವಂತನನ್ನು ಕಂಡರು. ಹಲವು ಭಾಷೆಗಳನ್ನು ಸುಲಲಿತವಾಗಿ ಕಲಿತವರು. ಅಧ್ಯಯನ ಮಾಡಿದವರು. ಸರ್ವ ವಿದ್ಯೆಯನ್ನು ಗುರು ಪಂಚಾಕ್ಷರಿ ಗವಾಯಿಗಳ ಕೃಪೆಯಿಂದಲೇ ಪಡೆದಿರುವೆ ಎನ್ನುವ ಇವರ ಮಾತುಗಳು ಪುಟ್ಟಯ್ಯನವರ ಉನ್ನತ ವ್ಯಕ್ತಿತ್ವವನ್ನು ತಿಳಿಸುತ್ತಿತ್ತು. ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಭಕ್ತರಾಗಿದ್ದರು.
ಪುಟ್ಟರಾಜರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯ. ಕಾಳಿದಾಸ ಸಮ್ಮಾನ್, ಪದ್ಮಭೂಷಣ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ, ಕನಕ ಪುರಂದರ, ನಾಡೋಜ, ಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ , ಬಸವಶ್ರೀ ಪ್ರಶಸ್ತಿ... ಹೀಗೆ. ಪುಟ್ಟರಾಜರಿಗೆ ಸಂದ ವಿವಿಧ ತುಲಾಭಾರ ಗಿನ್ನೆಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ! ಇಂತಹ ಮಹಾನ್ ಚೇತನ 2010ರ ಸೆ. 17ರಂದು ಲಿಂಗೈಕ್ಯವಾದರೂ ಆ ಮಹಾ ಬೆಳಕಿನ ಕಿರಣಗಳು ಇಂದಿಗೂ ಸಮಾಜಕ್ಕೆ ದಾರಿ ತೋರಿಸುತ್ತಿವೆ.
(ಲೇಖಕರು, ಉಪನ್ಯಾಸಕರು)