ಭಕ್ತರೆಡೆಗೆ ಬರುವ ಭಗವಂತನ ಲೀಲೆ; ಇಂದು ಪುರಿ ಜಗನ್ನಾಥ ರಥೋತ್ಸವ

Puri
Published on

ಜಗತ್ ಪ್ರಸಿದ್ಧ ಪುರಿ ಜಗನ್ನಾಥನ ರಥಯಾತ್ರೆಯನ್ನು ಈ ವರ್ಷವೂ ಕರೊನಾ ಕಾರಣದಿಂದ ಕೇವಲ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಭಕ್ತರ ಪಾಲ್ಗೊಳ್ಳುವಿಕೆಗೆ ಅವಕಾಶವಿಲ್ಲವಾದರೂ, ಧಾರ್ವಿುಕ ಆಚರಣೆಗೆ ಚ್ಯುತಿ ಬರದಂತೆ ಕೆಲವೇ ಜನರ ಸಮ್ಮುಖದಲ್ಲಿ ಇಂದು (ಸೋಮವಾರ) ರಥೋತ್ಸವ ನಡೆಯಲಿದ್ದು, ಜು.20ರಂದು ಸಂಪನ್ನಗೊಳ್ಳಲಿದೆ. ಪ್ರತಿ ವರ್ಷ ಹೊಸ ರಥಗಳ ನಿರ್ವಣ, 12 ವರ್ಷಕ್ಕೊಮ್ಮೆ ಹೊಸ ಮೂರ್ತಿಗಳ ನಿರ್ವಣ, ಅದಕ್ಕಾಗಿ ಮರ-ಕಟ್ಟಿಗೆಗಳ ಹುಡುಕಾಟ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಕ್ಷೇತ್ರ ಭಕ್ತರ ಪಾಲಿಗೆ ಸದಾ ಪೂಜನೀಯ. ಪುರಿಯಲ್ಲಿ ಮಾತ್ರವಲ್ಲದೆ ಒಡಿಶಾದ ಸಣ್ಣ ಸಣ್ಣ ಗ್ರಾಮಗಳಲ್ಲೂ ಜಗನ್ನಾಥನ ದೇವಸ್ಥಾನಗಳಿದ್ದು, ಅಲ್ಲೂ ರಥೋತ್ಸವ ನಡೆಸಲಾಗುತ್ತದೆ.

ವರ್ಷದ ಎಲ್ಲ ದಿನಗಳಲ್ಲಿ ಭಕ್ತರು ಜಗನ್ನಾಥನನ್ನು ಕಾಣಲು ಮಂದಿರಕ್ಕೆ ಬಂದರೆ ರಥೋತ್ಸವದ ಸಂದರ್ಭದಲ್ಲಿ ಆ ಕಾನ್ಹಾ ತನ್ನ ಭಕ್ತರೆಡೆಗೆ ಬರುತ್ತಾನೆ. ‘ಸಬ್ ಮನಿಸಾ ಮೋರ ಪರಜಾ’ (ಎಲ್ಲ ಮನುಷ್ಯರು ನನ್ನ ಪ್ರಜೆಗಳು) ಎಂದು ಹೇಳಿ ಅವರ ಹೃದಯಸಿಂಹಾಸನದಲ್ಲಿ ವಿರಾಜಮಾನನಾಗುತ್ತಾನೆ. ಶಾಸ್ತ್ರಗಳು ಕೂಡ ಇಲ್ಲಿನ ರಥಯಾತ್ರೆಯ ವರ್ಣನೆಯನ್ನು ಮಾಡಿದ್ದು, ಮಹತ್ವವನ್ನೂ ವಿವರಿಸಿವೆ. ರಥಯಾತ್ರೆಯಲ್ಲಿ ಯಾರು ಜಗನ್ನಾಥನ ನಾಮಸ್ಮರಣೆ ಮಾಡುತ್ತ ಗುಂಡಿಚಾ ನಗರದವರೆಗೆ ಸಾಗುತ್ತಾರೋ ಅವರು ಮೋಕ್ಷ ಪಡೆಯುತ್ತಾರೆ ಎಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ಗುಂಡಿಚಾ ಮಂಟಪದಲ್ಲಿ ವಿರಾಜಮಾನರಾಗುವ ಜಗನ್ನಾಥ, ಬಲಭದ್ರ, ಸುಭದ್ರಾ ಮೂರ್ತಿಗಳ ದರ್ಶನ ಮಾತ್ರದಿಂದಲೂ ಮೋಕ್ಷ ಪ್ರಾಪ್ತವಾಗುತ್ತದೆ ಎನ್ನಲಾಗಿದೆ. ಪಾಂಡವರು ತಮ್ಮ ಅಜ್ಞಾತವಾಸದ ವೇಳೆ ಜಗನ್ನಾಥನನ್ನು ಪೂಜಿಸಲು ಪುರಿಗೆ ಬಂದಿದ್ದರು ಎಂಬ ಉಲ್ಲೇಖವೂ ಇದೆ. ಇದೇ ನೆನಪಿಗಾಗಿ ಕ್ಷೇತ್ರದಲ್ಲಿ ಪಾಂಡವರ ಮಂದಿರ ನಿರ್ವಿುಸಲಾಗಿದೆ. ಪ್ರತಿವರ್ಷ ಆಷಾಢ ಶುಕ್ಲ ದ್ವಿತೀಯಾದಿಂದ ಆಷಾಢ ಶುಕ್ಲ ದಶಮಿಯವರೆಗೆ ರಥೋತ್ಸವ ನಡೆಯುತ್ತದೆ. ಮುಂದೆ ಬಲಭದ್ರ (ತಲಧ್ವಜ ರಥ) ಹಿಂದೆ ಜಗನ್ನಾಥ (ನಂದಿಘೊಷ ರಥ)ನ ರಕ್ಷಣೆಯಲ್ಲಿ ಮಧ್ಯದಲ್ಲಿ ಸುಭದ್ರಾ (ದರ್ಪದಲನ ರಥ) ರಥಯಾತ್ರೆ ಸಾಗುತ್ತದೆ. ರಥಯಾತ್ರೆಯ ಮರುದಿನ ಜಗನ್ನಾಥ ಗುಂಡಿಚಾ ಮಂದಿರ ತಲುಪುತ್ತಾನೆ. ಮುಂದಿನ 9 ದಿನಗಳ ಕಾಲ ಈ ಮಂದಿರದಲ್ಲಿ ನಡೆಯುವ ಜಗನ್ನಾಥ ದರ್ಶನವನ್ನು ‘ಆಡಪ್ ದರ್ಶನ್’ ಎನ್ನುತ್ತಾರೆ.

ನಾಲ್ಕು ಧಾಮಗಳಲ್ಲಿ ಒಂದು: ಪುರಿ ವೈಷ್ಣವರ ನಾಲ್ಕು ಧಾಮಗಳಲ್ಲಿ ಒಂದು. ಜಗನ್ನಾಥನು ಬದ್ರಿನಾಥದಲ್ಲಿ ಸ್ನಾನ ಮಾಡಿ, ದ್ವಾರಕಾದಲ್ಲಿ ವಸ್ತ್ರ ಹಾಕಿಕೊಳ್ಳುತ್ತಾನೆ. ಪುರಿಯಲ್ಲಿ ಆಹಾರ ಸೇವಿಸಿ ರಾಮೇಶ್ವರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಹೀಗೆ ಈ ನಾಲ್ಕುಧಾಮಗಳ ಪೈಕಿ ಪುರಿಯಲ್ಲಿ ಸಾಕ್ಷಾತ್ ಭಗವಂತ ಆಹಾರ ಸ್ವೀಕರಿಸುವುದರಿಂದ ಈ ಕ್ಷೇತ್ರಕ್ಕೆ ಭಾರಿ ಮಹತ್ವ ಬಂದಿದ್ದು, ಪ್ರಸಾದಕ್ಕೂ ತನ್ನದೇ ಆದ ಪ್ರಾಮುಖ್ಯತೆಯಿದೆ. ಇಂದಿಗೂ ಪುರಿಯ ಪ್ರಸಾದಗೃಹದಲ್ಲಿ ದಿನನಿತ್ಯ ಸಾವಿರಾರು ಜನರು ಭೋಜನ ಸ್ವೀಕರಿಸುತ್ತಾರೆ. ಪುರಿಯನ್ನು ಪುರುಷೋತ್ತಮ ಕ್ಷೇತ್ರ, ನೀಲಗಿರಿ, ನೀಲಾಂಚಲ, ಉತ್ಕಲದೇಶವೆಂದು ಕರೆಯಲಾಗುತ್ತದೆ.

ಮಂದಿರದ ವೈಶಿಷ್ಟ್ಯಗಳು

  • ಮಂದಿರದ ಶಿಖರಕ್ಕೆ ಅಳವಡಿಸಲಾಗಿರುವ ಧ್ವಜ (ಧರ್ಮಧ್ವಜ)ವು ಯಾವಾಗಲೂ ವಾಯುವಿನ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತದೆ.
  • ಪುರಿಯ ಯಾವುದೇ ದಿಕ್ಕಿನಿಂದ ನೋಡಿದರೂ ಸುದರ್ಶನ ಚಕ್ರ ನೇರ ಎದುರುಗಡೆ ಇರುವಂತೆಯೇ ಕಾಣುತ್ತದೆ ಅಂದರೆ ಅದರ ಇತರೆ ಪಾರ್ಶ್ವಗಳು ಗೋಚರಿಸುವುದಿಲ್ಲ.
  • ಎಲ್ಲೆಡೆ ಹಗಲಿನಲ್ಲಿ ಗಾಳಿಯು ಸಮುದ್ರದಿಂದ ಭೂಮಿಯತ್ತ ಹಾಗೂ ಸಂಜೆ ವೇಳೆ ಭೂಮಿಯಿಂದ ಸಮುದ್ರದತ್ತ ಚಲಿಸುತ್ತದೆ. ಆದರೆ ಪುರಿಯಲ್ಲಿ ಇದಕ್ಕೆ ತದ್ವಿರುದ್ಧವಾಗಿ ಗಾಳಿ ಚಲಿಸುತ್ತದೆ.
  • ಮಂದಿರದ ಮೇಲೆ ಪಕ್ಷಿ ಹಾಗೂ ವಿಮಾನಗಳು ಹಾರಾಡುವುದಿಲ್ಲ.
  • ಮುಖ್ಯ ಗೋಪುರದ ನೆರಳು ದಿನದ ಯಾವ ಹೊತ್ತಿನಲ್ಲೂ ಕಾಣಲು ಸಿಗುವುದಿಲ್ಲ.
  • ಪಾಕಶಾಲೆಯಲ್ಲಿ ಪ್ರಸಾದ-ಅಡುಗೆ ತಯಾರಿಕೆಗೂ ವಿಶಿಷ್ಟ ಕ್ರಮವಿದೆ. ಇದಕ್ಕಾಗಿ ಏಳು ದೊಡ್ಡ ಪಾತ್ರೆಗಳನ್ನು ಅನುಕ್ರಮವಾಗಿ ಜೋಡಿಸಲಾಗಿದೆ. ಮೊದಲು ದೊಡ್ಡ ಪಾತ್ರೆ ಬಳಿಕ ಅನುಕ್ರಮವಾಗಿ ಜೋಡಿಸಿಟ್ಟ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಲಾಗುತ್ತದೆ.
  • ಪುರಿ ಮಂದಿರದ ಪಾಕಶಾಲೆ ದೇಶದ ದೊಡ್ಡ ಪಾಕಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 500 ಪೂರ್ಣಕಾಲಿಕ ಅಡಿಗೆಯವರು, 300 ಜನ ಸಹಾಯಕರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ.
  • ಮಂದಿರದ ವಿಸ್ತೀರ್ಣ 4 ಲಕ್ಷ ಚದರ ಮೀಟರ್ ಆಗಿದ್ದು, ಎತ್ತರ 214 ಅಡಿಗಳಷ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net