'ನಮ್ಮ - ನಿಮ್ಮ' ಪ್ರೊಫೆಸರ್ ನಿಸಾರ್ ಅಹಮದ್

Nisar Ahmed 14 May 290
Published on
| ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್, ಯು.ಕೆ.

ನಿಸಾರ್ ಅಹಮದ್, ಇಂಗ್ಲೆಂಡಿನ ಚೆಶೈರಿನಲ್ಲಿ ನಡೆದ ಯು.ಕೆ. ಕನ್ನಡ ಬಳಗದ ರಜತಮಹೋತ್ಸವ ಸಮಾರಂಭಕ್ಕೆ 2008 ರಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿ ಸಮ್ಮೇಳನದಲ್ಲಿ ನಾನು, ಜಯಂತ್ ಕಾಯ್ಕಿಣಿ ಮತ್ತು ಇತರ ಕವಿಗಳು ಭಾಗವಹಿಸಿದ್ದೆವು. ಮೂರು ದಿನಗಳ ಕಾರ್ಯಕ್ರಮದಲ್ಲಿ ನಿಸಾರ್ ಅವರು ತಮ್ಮ ಅನನ್ಯವಾದ ಹಾಸ್ಯ ಪ್ರಜ್ಞೆಯಿಂದ ನಮ್ಮನ್ನೆಲ್ಲಾ ನಕ್ಕು ನಗಿಸಿದರು. ತಮ್ಮ ಕನ್ನಡ ಭಾಷೆಯ ಮೇಲಿರುವ ಪ್ರೀತಿ ಅಭಿಮಾನಗಳಿಂದ ನಮ್ಮಲ್ಲಿನ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಅನಿವಾಸಿ ಕನ್ನಡಿಗರಿಗೆ ನಿಸಾರ್ ಕೂಡಲೇ ಹತ್ತಿರವಾಗಿ ಬಿಟ್ಟು "ನಮ್ಮ" ನಿಸಾರ್ ಅಹಮದ್ ಆದರು. ಕಾಲಗಳು ಕಳೆದಂತೆ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಬದಲಾದಂತೆ ನಿಸಾರ್ ಅಹಮದ್ ನಮ್ಮಲ್ಲಿನ ಕೆಲವರಿಗೆ ನಮ್ಮವರಾಗದೆ ದೂರ ಉಳಿಯುವ ಶೋಚನೀಯ ಪರಿಸ್ಥಿತಿ ಮೆಲ್ಲಗೆ ಆವರಿಸಿದ್ದು ದುರದೃಷ್ಟಕರ ಎನ್ನ ಬಹುದು.

ಮುಸ್ಲಿಂ ಕುಟುಂಬವೆಂಬ “ಪರಕೀಯತೆ”ಯಲ್ಲಿ ಹುಟ್ಟಿ ಬೆಳೆಯುತ್ತಾ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ತಮ್ಮದಾಗಿಸಿಕೊಂಡು ಒಬ್ಬ ಕವಿಯಾಗಿ ಬೆಳೆಯಬೇಕಾದರೆ ಸಮಾಜದಲ್ಲಿ ತಾನು ಮೊದಲು ಅಂಗೀಕೃತವಾಗ ಬೇಕೆಂಬ ಅನಿವಾರ್ಯ ಒತ್ತಡ ನಿಸಾರ್ ಅವರಿಗೆ ಇದ್ದರಬಹುದು. ಈ ಒತ್ತಡ ಸಮಾಜದ ಮುಖ್ಯವಾಹಿನಿಯಲ್ಲಿರುವವರಿಗೆ ಸುಲಭವಾಗಿ ನಿಲುಕುವ ವಿಚಾರವಲ್ಲ. ಬಹುಶ ಈ ಕಾರಣಕ್ಕಾಗಿ ಶುರುವಿನಲ್ಲಿ ನಿಸಾರ್ ಅವರು ಹಲವಾರು ನಾಡಭಕ್ತಿಗೀತೆಗಳಂತೆ ತೋರುವ 'ಜೋಗದ ಸಿರಿ ಬೆಳಕಿನಲ್ಲಿ , 'ತಾಯಿ ಭೂಮಿ ತಾಯಿ', ಎಲ್ಲಿ ರಮ್ಯಾ ತಾಣ ಅಲ್ಲಿ ನಿನಗೆ ವಂದನ' ಈ ರೀತಿಯ ಕವನಗಳನ್ನು ಬರೆದು ನಾಡಿನ ಹಿರಿಮೆ-ಗರಿಮೆಯನ್ನು ಕುವೆಂಪು ನಂತರದ ಸಮಯದಲ್ಲಿ ಕನ್ನಡಕ್ಕೆ ತಂದುಕೊಟ್ಟಿರಬಹುದು. ಇದು ನನ್ನ ಊಹೆಯಲ್ಲಿನ ಒಂದು ಸಾಧ್ಯತೆ ಅಷ್ಟೇ . ಇದಕ್ಕೆ ಬೇರೆ ಪ್ರೇರಣೆಗಳು ಕೂಡ ಇರಬಹುದು. ಒಂದು ವಿಚಾರವನ್ನು ಇಲ್ಲಿ ನಾನು ಪ್ರಸ್ತಾಪ ಮಾಡುವುದು ಉಚಿತ; ಒಂದು ಸಂದರ್ಶನದಲ್ಲಿ ನಿಸಾರ್ ಅವರು 'ನಾನು ಶುರಿವಿನಲ್ಲಿ ಹೆಸರಿಗಾಗಿ ಮತ್ತು ಜನರ ಪ್ರೀತಿಯನ್ನುಗಳಿಸುವ ಉದ್ದೇಶದಿಂದ ಕವಿತೆಗಳನ್ನು ಬರೆದಿದ್ದು ಮುಂದಕ್ಕೆ ನಾನು ಸಮಾಜಕ್ಕೆ ಮತ್ತು ಸಾಹಿತ್ಯಕ್ಕೆ ಕೊಡುಗೆ ನೀಡುವ ಸಲುವಾಗಿ ಬರೆಯಲು ಮೊದಲುಗೊಂಡೆ’ ಎಂದು ಹೇಳಿದ್ದಾರೆ.

ನಿಸಾರ್ ಅವರ ಇನ್ನೊಂದು ಜನಪ್ರಿಯ ಗೀತೆ " ಬೆಣ್ಣೆ ಕದ್ದ ನಮ್ಮ ಕೃಷ್ಣ, ಬೆಣ್ಣೆ ಕದ್ದನಮ್ಮ' ಎಂಬ ಸಾಲುಗಳನ್ನು ನೋಡಿದಾಗ ಈಗಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ರೀತಿಯ ಸಾಲುಗಳನ್ನು ಹಿಂದೂ ಧರ್ಮದ ಹೊರಗೆ ಇರುವ ಒಬ್ಬ ಕವಿ ಬಹುಶ ಬರೆಯಲು ಮುಜುಗುರ ಪಡಬಹುದು. ಈ ಕವಿತೆಯಲ್ಲಿನ "ನಮ್ಮ ಕೃಷ್ಣ" ಎಂಬ ಅಭಿವ್ಯಕ್ತಿ ನಿಸಾರ್ ನಮ್ಮೊಡನಿದ್ದು ನಮ್ಮಂತೆಯೇ ಆದವರು ಎಂಬುದಕ್ಕೆ ಸಾಕ್ಷಿ ಎನ್ನಬಹುದು. ಈಗ ಆ ಒಂದು ಅನಿಸಿಕೆಗಳಿಲ್ಲ. ಕಳೆದ ಕೆಲವು ವರ್ಷಗಳಿಂದ ಎದ್ದಿರುವ ಧರ್ಮವೆಂಬ ಗೋಡೆ ನಮ್ಮ ನಿಮ್ಮನ್ನು ವಿಭಜಿಸಿದೆ. ಕೆಲವು ಪ್ರಜ್ಞಾವಂತರು ಈ ‘ನಾವು-ನೀವು’ ವಿಚಾರವನ್ನು ಇಲ್ಲಿ ನಾನೇಕೆ ಪ್ರಸ್ತಾಪ ಮಾಡುತ್ತಿದ್ದೇನೆ ಎಂದು ಪ್ರಶ್ನಿಸಬಹುದು ಅದಕ್ಕೆ ಸಮಂಜಸವಾದ ಉತ್ತರ ಅವರವರೇ ಕಂಡುಕೊಳ್ಳಬೇಕು.

ನಿಸಾರ್ ಅವರು ಒಂದು ಸಂದರ್ಶನದಲ್ಲಿ 'ಧರ್ಮ ಎಲ್ಲರಿಗೂ ಒಂದು ವೈಯುಕ್ತಿಕವಾದ ವಿಚಾರವಾಗಿರಬೇಕು. ಒಬ್ಬ ಕವಿ, ಲೇಖಕನ ಚಿಂತನೆಗಳನ್ನು, ಬರವಣಿಗೆಯನ್ನು ಅವನ ಧರ್ಮದ ಹಿನ್ನೆಲೆಯಲ್ಲಿ ಇಟ್ಟು ವಿಶ್ಲೇಷಿಸಬಾರದು. ಅವನು ಅದರಿಂದ ಮುಕ್ತವಾಗಿರಬೇಕು. ಎಲ್ಲ ಧರ್ಮಗಳಲ್ಲಿ ಧರ್ಮವನ್ನು ಕಾಪಾಡುವುದಕ್ಕೆ ಕೆಲವು ಸ್ವಯಂ ಪ್ರೇರಿತ, ಸ್ವಯಂ ಸೇವಕ "ಧಾರ್ಮಿಕ ಪೋಲೀಸರು" ಹುಟ್ಟಿಕೊಂಡಿದ್ದಾರೆ. ಅದರ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರಲ್ಲೂ ನಮ್ಮೊಳಗೇ ಇರುವ ನೈತಿಕ ಜವಾಬ್ದಾರಿ ನಮಗೆ ಮಾರ್ಗದರ್ಶನ ನೀಡಬೇಕು. ಎಲ್ಲರೂ ಧರ್ಮಗಳ ಸಾರವನ್ನು ಅರಿತು ಸಮನ್ವಯದೆಡೆಗೆ ಶ್ರಮಿಸಬೇಕು. ಅದನ್ನು ಬಿಟ್ಟು ಧರ್ಮದ ತಿರುಳನ್ನು ತಿರಿಚಿ ವ್ಯಾಖ್ಯಾನಿಸಬಾರದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಿಂದೂ ಮುಸ್ಲಿಂ ನಡುವಿನ ಸಾಮಾಜಿಕ ಸಂಬಂಧವನ್ನು ಗಮನಿಸಿದಾಗ ನಿಸಾರ್ ಹೇಳುವಂತೆ ಕಲೆ ಮತ್ತು ಧರ್ಮ ಇವೆರಡೂ ಬೇರೆ ಬೇರೆಯಾಗಿದ್ದವು. ಹಿಂದೆ ಬಿಸ್ಮಿಲ್ಲಾ ಖಾನ್ ಅವರು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಹನಾಯಿ ನುಡಿಸಲು ಅವರಿಗೆ ಆಹ್ವಾನವಿತ್ತು. ಬಾಲಿವುಡ್ಡಿನ ಶಾರುಕ್ ಖಾನ್, ನಾಸಿರುದ್ದೀನ್ ಷಾ, ಇರ್ಫಾನ್ ಖಾನ್ ಇವರೆಲ್ಲ ಭಾರತದ ಸೆಕ್ಕ್ಯುಲರ್ ದೃಷ್ಟ್ಟಿಯಿಂದ ನಮ್ಮವರೇ ಆದರೂ ಕೆಲವರು ಅವರನ್ನು ಇಂದಿನ ‘ಹಿಂದೂ ರಾಷ್ಟ್ರೀಯತೆ’ ಎಂಬ ಧಾರ್ಮಿಕ ಅಳತೆಗೋಲಿನಲ್ಲಿ ಅಳೆದು ಪರಕೀಯರಾಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಸಾರ್ ಅವರ ಅರ್ಥಪೂರ್ಣ ಹಾಗು ನೋವಿನ ಎಳೆ ಇರುವ ಕವನವನ್ನು ನಾನು ಓದುಗರ ಗಮನಕ್ಕೆ ತಂದಿದ್ದೇನೆ. ಆ ಕವನದ ಆಯ್ದ ಸಾಲುಗಳು ಹೀಗಿವೆ;

“ನಿಮ್ಮೊಡನಿದ್ದು ನಿಮ್ಮಂತಾಗದೆ ಜಗ್ಗಿದ ಕಡೆಬಾಗದೇ

ನಾನು ನಾನೇ ಆಗಿ ಈ ನೆಲದಲ್ಲೇ ಬೇರೊತ್ತಿದ್ದರೂ ಬೀಗಿ

ಪರಕೀಯನಾಗಿ ತಲೆ ಎತ್ತುವುದಿದೆ ನೋಡಿ ಅದು ಬಲು ಕಷ್ಟ

ಒಳಗೊಳಗೇ ಬೇರು ಕುಯ್ದು ಲೋಕದೆದುರುಲಿ ನೀರ ಹುಯ್ದು

ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ

ನಟಿಸಿ ಚಕಾರವೆತ್ತದೆ, ನಿಮ್ಮೊಡನೆ ಕಾಫೀ ಹೀರಿ

ಪೇಪರೋದಿ ಹರಟೆ ಹರಟಿ ಬಾಳು ತಳ್ಳುವುದಿದೆ ನೋಡಿ

ಅದು ಬಹಳ ಕಷ್ಟದ ಕೆಲಸ”

ನಾನು ಕಳೆದ ಎರಡು ದಶಕಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ ಅನಿವಾಸಿ ಭಾರತೀಯನಾಗಿದ್ದೇನೆ. ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ನನ್ನದಾಗಿಸಿಕೊಂಡಿದ್ದೇನೆ. ಇಲ್ಲಿನ ಪೌರತ್ವವನ್ನು ಸ್ವೀಕರಿಸಿದ್ದೇನೆ. ಇಂಗ್ಲಿಷಿನಲ್ಲಿ ಪದ್ಯಗಳನ್ನು ಪ್ರಕಟಿಸಿದ್ದೇನೆ. ಇಷ್ಟೆಲ್ಲಾ ಇದ್ದರೂ ನನ್ನಲ್ಲಿ ಒಂದು ಪರಕೀಯತೆಯ ಭಾವನೆಗಳಿವೆ. ಅದನ್ನು ನಿರ್ದಿಷ್ಟವಾಗಿ ಗುರುತಿಸಲು ಹೆಣಗುತ್ತಿದ್ದೇನೆ. ನಿಸಾರ್ ಅವರ ಈ ಮೇಲಿನ ಕವಿತೆಯನ್ನು ನನ್ನ ಅನಿವಾಸಿ ಬದುಕಿನ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಓದಿದ್ದೇನೆ. ಬದುಕಿನ ಕೆಲವು ಅನಿವಾರ್ಯ ಸಂಗತಿಗಳೊಂದಿಗೆ ಹೊಂದಿಕೊಂಡು ಬದುಕಲು ಕಲಿತ್ತಿದ್ದೇನೆ.

ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿ ಮತ್ತು ಲೈಂಗಿಕ ಪ್ರವೃತಿ ಹೀಗೆ ಅನೇಕ ಅಂಶಗಳು ನಮ್ಮಲಿ ಪರಕೀಯ ಎಂಬ ಭಾವನೆಗಳು ಉದ್ಭವಿಸಲು ಕಾರಣವಾಗಬಹುದು. ನಮ್ಮ ನಮ್ಮೊಳಗೇ ಎಲ್ಲ ಸರಿಸಮಾನವಾಗಿದ್ದೂ ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಗೆ ತಾನು ಪರಕೀಯ ಎಂಬ ಭಾವನೆಗಳು ಮೂಡುವುದುಂಟು. ಈ ವಿಚಾರಗಳನ್ನು ಇಟ್ಟುಕೊಂಡು ನಿಸಾರ್ ಅವರ ಮೇಲಿನ ಕವನದಲ್ಲಿನ ಅನಿಸಿಕೆಗಳನ್ನು ಗಮನಿಸಿದಾಗ ಅವರು ಪರಕೀಯರಾಗಿದ್ದರು ಎಂದು ಅವರ ಅಭಿಮಾನಿಗಳಿಗೆ ಅನ್ನಿಸುವುದಿಲ್ಲ. ಕೆಲವು ಮತಾಂಧ ಗುಂಪಿನ ಜಾತಿವಾದಿಗಳ ವರ್ತನೆಯಿಂದ ನಿಸಾರ್ ಅಹಮದ್ ಅವರಿಗಾದ ನೋವಿನ ಹಿನ್ನೆಲೆಯಲ್ಲಿ ಈ ಕವಿತೆ ಮೂಡಿಬಂದಿರಬಹುದು. ನಿಸಾರ್ ಅವರು ಪ್ರಜಾವಾಣಿಯ ಒಂದು ಸಂದರ್ಶನದಲ್ಲಿ "ನನ್ನ ಗುರು ಹಿರಿಯರು, ನನ್ನ ಸ್ನೇಹಿತರು ನನ್ನನ್ನು ಬೇರೆ ಜಾತಿ ಮತಕ್ಕೆ ಸೇರಿದ ಅನ್ಯವ್ಯಕ್ತಿ ಎಂದು ನೋಡಿಲ್ಲ , ಕನ್ನಡಿಗ ಅಂತ ನೋಡಿದ್ದಾರೆ. ಅದು ನಮ್ಮ ಕನ್ನಡಿಗರ ದೊಡ್ಡಗುಣ" ಎಂದು ಹೇಳಿದ್ದಾರೆ. ಇದು ನಮಗೆಲ್ಲಾ ಸಮಾಧಾನಕರವಾದ ವಿಚಾರ. ಕನ್ನಡಿಗರ ಆತ್ಮೀಯ ನಿಸಾರ್ ಅಹಮದ್ ಅವರ ಪುತ್ಥಳಿಯನ್ನು ಅವರ ಕಾವ್ಯಕ್ಕೆ ಸ್ಫೂರ್ತಿ ತಂದ ಲಾಲಬಾಗಿನಲ್ಲಿ ಇಟ್ಟು ಅವರನ್ನು ನೆನೆಯುವಂತಾಗಲಿ. ಅವರ ಅಭಿಮಾನಿಗಳ ಪಾಲಿಗೆ ಅದೇ ನಿತ್ಯೋತ್ಸವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net