ನಾರಾಯಣಗುರು ತೋರಿದ ಒಳಗಿನ ಸತ್ಯ; ಇಂದು ಜಯಂತಿ

Narayana Guru Jayanthi
Published on
ನಾರಾಯಣ ಗುರುಗಳು ಕೃಷಿ ಮೂಲದ, ವೈದ್ಯ ಮೂಲದ ಪಂಡಿತ ಪರಂಪರೆಯ ತಾಯಿಬೇರಿನಿಂದ ಚಿಗುರಿದವರು. ಅವರ ಪ್ರಕೃತಿ ಸತ್ವ ಮತ್ತು ವೈದ್ಯ ಸತ್ವ ಇಂದು ನಮಗೆ ದಾರಿದೀಪವಾಗಬೇಕಾಗಿದೆ. ಪ್ರಕೃತಿಯೇ ನಮ್ಮ ನಿಜ ಬದುಕು ಎಂದು ಹೇಳಿದ ನಾರಾಯಣ ಗುರುಗಳ ಮಾತುಗಳು ಇಂದಿಗೆ ಅಮೃತ ಸದೃಶವಾಗುತ್ತವೆ.
| ಡಾ. ಗಣೇಶ್ ಅಮೀನ್ ಸಂಕಮಾರ್ 
ಇಂದಿಗೆ 95 ವರ್ಷಗಳ ಹಿಂದೆ, 1928ರ ಸೆ. 20ರಂದು ಕೇರಳದ ವರ್ಕಲದ ಶಿವಗಿರಿಯಲ್ಲಿ ಒಂದು ಸೊಡರು ಆರುತ್ತ ಬೆಳಗಿತು. ಒಂದೂವರೆ ಶತಮಾನದ ಗತ ಇತಿಹಾಸವನ್ನೊಮ್ಮೆ ತಿರುಗಿ ನೋಡಿದರೆ ನಮ್ಮ ಸಮಾಜವನ್ನು ಕೊಂದು ಹಸಿ ತಿಂದು ಪಶು ಬುದ್ಧಿ ತೋರಿಸುತ್ತಿದ್ದ ಮೇಲು-ಕೀಳು ಜಾತಿ ಭೇದದ ರಕ್ಕಸಬುದ್ಧಿಯನ್ನು ಮುಟ್ಟದೆ ಗುದ್ದಿ, ದೇವರು ಧರ್ಮದ ಬೆಳಕು ಕಾಣದೆ ಕತ್ತಲೆಯಲ್ಲಿದ್ದ ಜನರಿಗೆ ‘ನಿಮಗೂ ಒಂದು ದೇವರು ಬೇಕು, ಧರ್ಮ ಬೇಕು, ನೀವೂ ಮನುಷ್ಯರಂತೆ ಬದುಕಬೇಕು’ ಎಂದು ಮೌನ ಕ್ರಾಂತಿ ಮಾಡುವುದರ ಮೂಲಕ ಹೋರಾಡಿ ಅವರ ಬದುಕಿಗೆ ನಿಜ ಜೀವ ಕೊಟ್ಟ ನಾರಾಯಣ ಗುರುಗಳು ಕಾಯದಿಂದ ದೂರವಾಗಿ ಮಾಯ ಸೇರಿದ ದಿನ.

ಆದಿ ಮತ್ತು ಸಮಾಧಿ: ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಹುಟ್ಟುಹಬ್ಬದ ಸಂದರ್ಭ ಅವರ ಸಮಾಧಿಯ ದಿನವನ್ನು ಯಾಕೆ ನೆನಪು ಮಾಡಿದೆ ಎಂದರೆ ಆದಿ ಮತ್ತು ಸಮಾಧಿಗೆ ಹತ್ತಿರದ ಸಂಬಂಧವಿದೆ. ಹುಟ್ಟು ಮತ್ತು ಸಾವು ಒಂದೇ ನಾಣ್ಯದ ಎರಡು ಮುಖಗಳು. ಸಮಾಜದಲ್ಲಿ ನಿಜವಾದ ಸಂತನ ಸತ್ವದ ಬದುಕು ಸಾರ್ಥಕ ಆಗುವುದು ಅದು ಕಾಲಗರ್ಭದಲ್ಲಿ ಸೇರಿ ಹೋದ ಮೇಲೆ. ಈ ಮಾತಿಗೆ ನಾರಾಯಣ ಗುರುಗಳೇ ಸಾಕ್ಷಿ. ‘ಕೊಲುವವನೇ ಮಾದಿಗ ಹೊಲಸ ತಿಂಬವನೆ ಹೊಲೆಯ’ ಎಂಬ ಶರಣರ ವಚನದಂತೆ ಜಾತಿ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ, ಬದುಕಿನ ನೀತಿಯಿಂದ ಬರುತ್ತದೆ. ಸಂಸ್ಕಾರವೇ ಸಂಸ್ಕೃತಿಯಾಗಿ ಪರಿವರ್ತನೆ ಆಗುವಂತೆ ಆಚಾರ ವಿಚಾರ, ಜ್ಞಾನದ ಕಣ್ಣಿನ ಒಳಗಡೆ ನಿಜ ಜಾತಿ ಅಡಗಿದೆ ಎಂಬುದನ್ನು ನಾರಾಯಣ ಗುರುಗಳು ತಮ್ಮ ಬದುಕು ಬರಹ ಸಾಧನೆಗಳ ಮೂಲಕ ಲೋಕಕ್ಕೆ ತೋರಿಸಿಕೊಟ್ಟರು.

ಶಿಲೆಯೊಳಗಿನ ಶಿವ: 19ನೇ ಶತಮಾನದ ಸಂದರ್ಭ ಮನುಷ್ಯ ಧರ್ಮವನ್ನು ಹುಡುಕುತ್ತ ಮನುಷ್ಯರನ್ನು ಮನುಷ್ಯರಂತೆ ಬದುಕಲು ಬಿಡುವ ಧರ್ಮವೇ ನಿಜವಾದ ಧರ್ಮ, ಎಲ್ಲ ಧರ್ಮಗಳ ಸಾರ ದಯೆ, ಕರುಣೆ, ಕ್ಷಮೆ ಮತ್ತು ಮೈತ್ರಿ ಇವೆಲ್ಲದರ ಸಂಗಮ. ಈ ಸಂಗಮ ಶಕ್ತಿ ಮನುಷ್ಯ ಹೃದಯದಲ್ಲಿದೆ. ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ. ದೇವರಿಗಾಗಿ ಧರ್ಮಕ್ಕಾಗಿ ಹೋರಾಟ ಅಗತ್ಯವಿಲ್ಲ. ನಮ್ಮ ಶಿವನನ್ನು ನಾವು ಪೂಜಿಸುವ ಎಂದು ನದಿಯ ಕಲ್ಲನ್ನು ತಂದು ಕಣ್ಣೀರಿನ ಅಭಿಷೇಕದ ಮೂಲಕ ಅರವೀಪುರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದವರು ನಾರಾಯಣ ಗುರುಗಳು. ಅಲ್ಲಿಂದ ಧಾರ್ವಿುಕ ಸ್ವಾತಂತ್ರ್ಯನ್ನು ನೀಡಿದರು. ನಾರಾಯಣ ಗುರುಗಳ ಬದುಕು, ತತ್ವ ಚಿಂತನೆಗಳು ಸೂರ್ಯನ ಬೆಳಕಿನಂತೆ. ಅದಕ್ಕೆ ಜಾತಿ ಮತ ಧರ್ಮ ವರ್ಣದ ಗೋಡೆಗಳಿಲ್ಲ. ಭೂಮಿಗೆ ಬಂದ ಮನುಷ್ಯನ ವ್ಯಕ್ತಿತ್ವ ಗಟ್ಟಿಯಾಗುವುದು, ಪರಿಪೂರ್ಣವಾಗುವುದು ಶ್ರೀಮಂತಿಕೆಯಿಂದಲ್ಲ. ಅಹಂಕಾರ ಅಧಿಕಾರ ಪರಂಪರೆಯ ಅಸ್ತಿತ್ವದಿಂದಲೂ ಅಲ್ಲ. ನೈತಿಕತೆಯಿಂದ ಕೂಡಿದ ಸ್ವಚ್ಛ ಚರಿತ್ರೆಯೇ ನಿಜವಾದ ್ರ್ರಶೀಮಂತಿಕೆ ಎಂಬ ಲೋಕ ಸತ್ಯವನ್ನು ‘ವಿದ್ಯಾವಂತರಾಗಿ ವಿದ್ಯೆಯಿಂದ ಸ್ವತಂತ್ರರಾಗಿ’ ಎಂಬ ಸರಳ ವಾಕ್ಯದ ಮೂಲಕ ತಿಳಿ ಹೇಳಿದ್ದಾರೆ.

ಅಸತ್ಯ ದರ್ಶನ: ಅದ್ವೈತ ತತ್ವವನ್ನು ಪ್ರತಿಪಾದಿಸುವ ಗುರುಗಳು ಅಸತ್ಯ ದರ್ಶನ ಎಂಬ ಸಂಸ್ಕೃತ ಕೃತಿಯಲ್ಲಿ ‘ಈ ಲೋಕದಲ್ಲಿ ಸತ್ಯ ಎಂಬುದು ಒಂದೇ. ಎರಡಿಲ್ಲ. ಪಂಚೇಂದ್ರಿಯಗಳ ಬಲೆಯಲ್ಲಿ ಸಿಲುಕಿ ಮನುಷ್ಯಜೀವಕ್ಕೆ ಅಸತ್ಯವು ಸತ್ಯದಂತೆ ಕಾಣುತ್ತದೆ. ಗುಡ್ಡದ ಸಾಮಾನ್ಯ ಕಲ್ಲೊಂದು ಶಿಲ್ಪಿಯ ಹೃದಯದ ಮೂಲೆಯಲ್ಲಿ ದೇವರ ಕಲೆಯ ಬಲೆಯಲ್ಲಿ ಒಂದೊಂದು ಹೊಡೆತಕ್ಕೆ ವಿವಿಧ ದೇವರ ಮೂರ್ತಿಗಳಾಗುತ್ತವೆ. ದೇವರು ಎನ್ನುವುದು ಶಿಲ್ಪಿಯೊಳಗಿನ ಆತ್ಮದಲ್ಲಿರುವ ರೂಪ. ಒಬ್ಬನೇ ದೇವರು’ ಎಂಬ ಸತ್ಯವನ್ನು ಹೃದಯಕ್ಕೆ ಮುಟ್ಟುವಂತೆ ಹೇಳಿದ್ದಾರೆ. ನಾರಾಯಣ ಗುರುಗಳು ಕೃಷಿ ಮೂಲದ, ವೈದ್ಯ ಮೂಲದ ಪಂಡಿತ ಪರಂಪರೆಯ ತಾಯಿಬೇರಿನಿಂದ ಚಿಗುರಿದವರು. ಶ್ರಾವಣ ಮಾಸದ ಓಣಂ ಹಬ್ಬದ ದಿನ ಶತಭಿಷ ನಕ್ಷತ್ರದಲ್ಲಿ ಕೇರಳದ ತಿರುವನಂತಪುರದ ಚೆಂಬಿಳಂತಿ ಎಂಬ ಗ್ರಾಮದಲ್ಲಿ ಈಳವ ಜನಾಂಗಕ್ಕೆ ಸೇರಿದ ಮಾದನ್ ಅಶಾನ್ ಮತ್ತು ಕುಟ್ಟಿ ಅಮ್ಮಾಳ್ ಎಂಬ ದಂಪತಿಗೆ ಮಗನಾಗಿ ಹುಟ್ಟಿದ ನಾಣು, 2500 ವರ್ಷಗಳ ಹಿಂದೆ ಹುಟ್ಟಿದ ಸಿದ್ದಾರ್ಥ ಲೋಕದ ಕಣ್ಣೀರ ಸ್ನಾನದಿಂದ ಮಡಿಯಾಗಿ ಬುದ್ಧನಾದಂತೆ ಬಡವರ ದುಃಖ ಅವಮಾನಗಳನ್ನು ಅನುಭವಿಸಿ ನಾರಾಯಣ ಗುರುವೆನಿಸಿದರು. ನಾರಾಯಣ ಗುರುಗಳ ಪ್ರಕೃತಿ ಸತ್ವ ಮತ್ತು ವೈದ್ಯ ಸತ್ವ ಇಂದು ನಮಗೆ ದಾರಿದೀಪವಾಗಬೇಕಾಗಿದೆ. ಪ್ರಕೃತಿಯೇ ನಮ್ಮ ನಿಜ ಬದುಕು ಎಂದು ಹೇಳಿದ ನಾರಾಯಣ ಗುರುಗಳ ಮಾತುಗಳು ಇಂದಿಗೆ ಅಮೃತ ಸದೃಶವಾಗುತ್ತವೆ.

ಪವಾಡವಲ್ಲ ಪರಿಶ್ರಮ: ಎಂತಹ ಜ್ಞಾನಿಯಾಗಲಿ, ವಿಜ್ಞಾನಿಯಾಗಲಿ, ಸಂತನಾಗಲಿ, ಸಂಸಾರಿಯಾಗಲಿ ಪಂಚಭೂತಗಳ ತತ್ವವನ್ನು ಮೀರಿ ಬದುಕಲು ಸಾಧ್ಯವಿಲ್ಲ. ಸಂಸ್ಕೃತ ಮಲಯಾಳ ತಮಿಳು ಭಾಷೆಗಳಲ್ಲಿ 79 ಕೃತಿಗಳನ್ನು ರಚಿಸಿದ ನಾರಾಯಣ ಗುರುಗಳು ಎಲ್ಲ ಕಡೆಯಲ್ಲಿ ಹೇಳಿರುವುದು ಹಸಿವು, ಬಡತನ, ಸ್ವಾಭಿಮಾನ ಮತ್ತು ಸಮಾನತೆಯ ಬಗ್ಗೆ. ಅವರ ಬದುಕು ಪವಾಡವಲ್ಲ, ಅದು ಪರಿಶ್ರಮ. ಅವರು ಸ್ವಾಮಿ ಎಂದುಕೊಂಡು ಪೀಠದಲ್ಲಿ ಕೂರಲಿಲ್ಲ, ತಲೆಯ ಮೇಲೆ ಕಿರೀಟ ಇಡಲಿಲ್ಲ. ಸಮಾಜದಲ್ಲಿ ತಲೆಯೆತ್ತಿ ನಡೆಯಲಾರದವನಿಗೆ ಸಾಮಾಜಿಕ ನ್ಯಾಯ ಕೊಡುವುದೇ ನನಗೆ ಪೀಠ, ಅವರ ಬದುಕಿನಲ್ಲಿ ನಗುವನ್ನು ಕಾಣುವುದೇ ನನಗೆ ಕಿರೀಟ ಎಂದು ಕನ್ನಡಿಯಲ್ಲಿ ನಿಮ್ಮ ನಿಮ್ಮ ಮುಖ ನೋಡಿಕೊಳ್ಳಿ ಎಂದರು. ನಾವು ದೇವರನ್ನು ಕಾಣಬೇಕಾದದ್ದು ಮೂರ್ತಿಯಲ್ಲಿ ಅಲ್ಲ, ದೇವಸ್ಥಾನಗಳಲ್ಲಿ ಅಲ್ಲ, ಮಠ-ಮಂದಿರಗಳಲ್ಲಿ ಅಲ್ಲ, ಭಜನೆ ಬಲಿ ಮೆರವಣಿಗೆಗಳಲ್ಲಿ ಅಲ್ಲ. ನಮ್ಮ ಒಳಗಿನ ಗುಡಿಯನ್ನು ಅರಿತುಕೊಳ್ಳುವುದರಲ್ಲಿ. ನಮ್ಮ ವಿದ್ಯೆ ನಮ್ಮ ಸಂಘಟನೆ ನಮ್ಮ ಉದ್ಧಾರಕ್ಕೆ, ಸಮಾಜದ ಒಳಿತಿಗೆ. ಇನ್ನೊಬ್ಬರಿಗೆ ನೋವು ಕೊಡುವುದಕ್ಕಲ್ಲ.

ಹೃದಯ ದೇಗುಲಕ್ಕೆ ಬ್ರಹ್ಮಕಲಶ: ಶಾಲೆಗಳು ವಿದ್ಯಾಮಂದಿರಗಳಾಗಬೇಕು. ಜ್ಞಾನಕ್ಕೆ ಜಾತಿ ಇಲ್ಲ, ವಿದ್ಯೆಯಿಂದ ಮಾತ್ರ ಉದ್ಧಾರ, ಸಮಾನತೆ ಸಾಧ್ಯ ಎಂದರು ನಾರಾಯಣ ಗುರುಗಳು. 1916ರಲ್ಲಿ ರಮಣ ಮಹರ್ಷಿಗಳು, 1922ರಲ್ಲಿ ರವೀಂದ್ರನಾಥ ಠಾಗೋರ್, 1925ರಲ್ಲಿ ಮಹಾತ್ಮ ಗಾಂಧಿಯವರಂಥ ಲೋಕ ಚಿಂತಕರು ಗುರುಗಳನ್ನು ಕಂಡು ಅವರ ತತ್ವಗಳನ್ನು ಮನಗಾಣಿಸಿಕೊಂಡರು. ಅಂಬೇಡ್ಕರ್​ರಂಥ ಮೇಧಾವಿಗಳು ಅವರ ಸಂದೇಶಗಳ ತತ್ವವನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡರು. ವಿವೇಕಾನಂದರಂಥ ಯೋಗಿಗಳು ನಾರಾಯಣ ಗುರುಗಳ ಸೇವೆಗೆ ತಲೆದೂಗಿ ಅವರನ್ನು ಲೋಕ ಗುರು ಎಂದು ಕರೆದರು. ಇಂದು ಜಗತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ರೋಗಗ್ರಸ್ತವಾಗಿರುವ ಸಂದರ್ಭ ನಾರಾಯಣ ಗುರುಗಳ ಜನ್ಮದಿನದ ನೆನಪು ಮಾತ್ರ ನಮಗೆ ಸಾಲದು, ಭಜನೆ, ಪೂಜೆ ಆಡಂಬರಗಳು ಮಾತ್ರ ಸಾಲದು. ಅವರ ಸಂದೇಶಗಳನ್ನು, ಜೀವನ ದರ್ಶನವನ್ನು ಮುಂದಿನ ಜನಾಂಗಕ್ಕೆ ಸಾರುವ ಕೆಲಸವಾಗಬೇಕು. ಅವರು ಹೇಳಿದ ಮನುಷ್ಯ ಧರ್ಮ ಬೇಕು, ನಮ್ಮ ವೈಭವಕ್ಕೆ, ಉತ್ಸವಕ್ಕೆ, ಮನಸ್ಸು ಮನಸ್ಸುಗಳನ್ನು ಮುರಿದು ಕಟ್ಟುವ ದೇವಸ್ಥಾನಗಳು ಮಠ ಮಂದಿರಗಳು ನಮಗೆ ಬೇಡ. ಸರ್ವಧರ್ಮದ ಜನರನ್ನು ಒಂದು ಮಾಡುವ ಬ್ರಹ್ಮ ಜ್ಞಾನ ಬೇಕಾಗಿದೆ. ಬನ್ನಿ ನಾರಾಯಣ ಗುರುಗಳು ಹೇಳಿದ ಕನ್ನಡಿಯಲ್ಲಿ ನೋಡೋಣ, ನಮ್ಮ ನಮ್ಮ ಹೃದಯ ದೇಗುಲಗಳಿಗೆ ಬ್ರಹ್ಮಕಲಶ ಮಾಡಿಕೊಳ್ಳೋಣ.

(ಲೇಖಕರು: ನಿರ್ದೇಶಕರು, ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾಲಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net