

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯ ಅಂಜಿ ರಸ್ತೆಯಲ್ಲಿ ಮಣ್ಣುಮುಕ್ಕ ಹಾವನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುರುವಾರ ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಅಬ್ಬಗೆರೆ ಗ್ರಾಮದ ಬಸವರಾಜು(36) ಹಾಗೂ ರಾಯಚೂರು ಜಿಲ್ಲೆಯ ಅಂಕುಶದೊಡ್ಡಿ ಗ್ರಾಮದ ಎ.ಹನುಮಂತ(38) ಬಂಧಿತ ಆರೋಪಿಗಳು.
ಇಂದು ಬೆಳಗ್ಗೆ 10 ಸುಮಾರಿನಲ್ಲಿ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲು ಜಾಗೇರಿ ರಸ್ತೆಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಅರಣ್ಯ ಸಂಚಾರಿದಳದ ಪಿಎಸ್ಐ ವಿಜಯ ರಾಜ್ ತಂಡ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದೆ. ಬಂಧಿತರಿಂದ 1 ಬೈಕ್, 2 ಮೊಬೈಲ್, 1320 ರೂ. ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮಣ್ಣುಮುಕ್ಕ ಹಾವನ್ನು 2 ತಲೆ ಹಾವೆಂದು ನಂಬಿಸಿ ಮಾರಾಟಕ್ಕೆ ಯತ್ನಿಸಿದ್ದರು.
ಈ ಸಂಬಂಧ ಕೊಳ್ಳೇಗಾಲ ಅರಣ್ಯ ಸಂಚಾರಿದಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.