ಬಾಳಿ ಬದುಕಬೇಕಿದ್ದ ತುಮಕೂರಿನ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ! ಇವರ ಕಣ್ಣೀರ ಕಥೆ ಹೇಳತೀರದು…

death
Published on

ತುಮಕೂರು(ಹುಳಿಯಾರು): ಬಾಳಿ ಬದುಕಬೇಕಿದ್ದ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ ಕಂಡ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಬರಕನಹಾಲ್​ತಾಂಡಾ ಬಳಿ ಸಂಭವಿಸಿದೆ.

ರಂಜಿತಾ (24), ಬಿಂದು(21), ಚಂದನಾ (18) ಮೃತ ಸಹೋದರಿಯರು. ನೋಡೋಕೆ ಮುದ್ದಾಗಿದ್ದ ಈ ಹೆಣ್ಣುಮಕ್ಕಳ ಬಾಳಲ್ಲಿ ದುರ್ವಿಧಿ ಆಟವಾಡಿಬಿಟ್ಟಿದೆ. ನಗುಮುಖದ ಸಹೋದರಿಯರು ಬಾಲ್ಯದಿಂದಲೂ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೇಗೋ ಅಜ್ಜಿ ಆಸರೆಯಲ್ಲಿ ಬಾಲ್ಯಾವಸ್ಥೆ ಕಳೆದ ಈ ಮಕ್ಕಳ ಜೀವನ ಒಂದು ಹಂತಕ್ಕೆ ಬರುತ್ತಿದೆ ಎನ್ನುವಷ್ಟರಲ್ಲೇ ಎಲ್ಲವೂ ಅಯೋಮಯವಾಗಿದೆ. ಇವರ ಕಣ್ಣೀರ ಕಥೆ ಹೇಳತೀರದು...

ರಂಜಿತಾ, ಬಿಂದು ಮತ್ತು ಚಂದನಾ ಅವರು ಸಣ್ಣ ವಯಸ್ಸಲ್ಲೇ ತಂದೆ-ತಾಯಿಯನ್ನ ಕಳೆದುಕೊಂಡರು. 10 ವರ್ಷದ ಹಿಂದೆಯೇ ತಂದೆ-ತಾಯಿ ನಿಧನರಾದ ಹಿನ್ನೆಲೆ ಮೂವರು ಮಕ್ಕಳನ್ನೂ ಅಜ್ಜಿ ಸಾಕಿ ಸಲುಹಿದರು. ರಂಜಿತಾ ಮತ್ತು ಬಿಂದು ಇಬ್ಬರೂ ಕೆ.ಬಿ.ಕ್ರಾಸ್​ನ ಗಾರ್ಮೆಂಟ್ಸ್​ವೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಚಂದನಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ಹೇಗೋ ಬದುಕಿನ ಬಂಡಿ ಸಾಗುತ್ತಿತ್ತು. ಈ ಮಕ್ಕಳಿಗೆ ಆಸರೆಯಾಗಿದ್ದ ಅಜ್ಜಿ 3 ತಿಂಗಳ ಹಿಂದೆ ಕೊನೆಯುಸಿರೆಳೆದರು.

ಮೊದಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಕಂಗೆಟ್ಟಿದ್ದ ಈ ಮಕ್ಕಳಿಗೆ ಅಜ್ಜಿಯ ಸಾವು ಭಾರೀ ಆಘಾತ ನೀಡಿತ್ತು. ಅನಾಥ, ಒಂಟಿ ಭಾವನೆ ಕಾಡುತ್ತಿತ್ತು. ಈ ನೋವಲ್ಲೇ ಮೂವರು ಬಾಲದೇವರಹಟ್ಟಿಯಿಂದ ಬರಕನಹಾಲ್​ ತಾಂಡಾಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ಒಂಟಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ದುರಂತ ಅಂತ್ಯ ಕಂಡಿದ್ದಾರೆ. ವಾರದ ಹಿಂದೆಯೇ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ದಾರಿಹೋಕರು ಇಂದು(ಗುರುವಾರ) ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಂಟಿ ಮನೆಯ ಹೆಂಚು ತೆಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಸಹೋದರಿಯರ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ.

ತಿಪಟೂರಿನ ಎಎಸ್​ಪಿ ಸಿದ್ಧಾರ್ಥ ಗೋಯಲ್​, ಚಿಕ್ಕನಾಯಕನಹಳ್ಳಿ ಪಿಎಸ್​ಐ ನಿರ್ಮಲಾ, ಹುಳಿಯಾರು ಪಿಎಸ್​ಐ ಮೂರ್ತಿ ನೇತೃತ್ವದ ತಂಡ ಸ್ಥಳ ಪರಿಶೀಲಿಸಿದೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net