

ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದುಗಳ ವಿರುದ್ಧದ ದೌರ್ಜನ್ಯ ಮುಂದುವರಿದಿದ್ದು ಭಾನುವಾರ ಇನ್ನೂ ಇಬ್ಬರು ಇಸ್ಕಾನ್ ಸ್ವಾಮೀಜಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಬಂಧಿಸಲಾಗಿದ್ದ ಚಿನ್ಮಯ ಕೃಷ್ಣ ದಾಸ್ರಿಗೆ ಆಹಾರ ಕೊಡಲು ಹೋಗಿದ್ದ ಹಿಂದು ಮುಖಂಡರಾದ ರುದ್ರಪ್ರತಿ ಕೇಶವ್ ದಾಸ್ ಮತ್ತು ರಂಗನಾಥ ಶ್ಯಾಮಸುಂದರ ದಾಸ್ರನ್ನು ಪೊಲೀಸರು ಬಂಧಿಸಿದರು.
ಕೃಷ್ಣ ದಾಸ್ ಬಂಧನಕ್ಕೆ ಭಾರತ ತೀವ್ರ ಖಂಡನೆ ದಾಖಲಿಸಿರುವುದಲ್ಲದೆ ಬಾಂಗ್ಲಾದಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗಿರುವುದರ ಹೊರತಾಗಿಯೂ ಅಲ್ಲಿನ ಆಡಳಿತ ಇನ್ನಿಬ್ಬರು ಸ್ವಾಮೀಜಿಗಳನ್ನು ವಶಕ್ಕೆ ಪಡೆದಿರುವುದು ಕಳವಳಕ್ಕೆ ಕಾರಣವಾಗಿದೆ. ಭಾನುವಾರ ಸುರಕ್ಷತಾ ಪ್ರಾರ್ಥನೆಗೆ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನೀಡಿದ್ದ ಕರೆಯ ನಡುವೆಯೇ ಹಿಂದುಗಳ ವಿರುದ್ಧದ ದಬ್ಬಾಳಿಕೆ ಪುನರಾವರ್ತನೆಯಾಗಿದೆ. ಸನ್ಯಾಸಿಗಳ ಬಂಧನಕ್ಕೆ ಬಾಂಗ್ಲಾದಲ್ಲಿ ಆಕ್ರೋಶ ಉಂಟಾಗಿದ್ದು ಭಾರತದಲ್ಲಿ ಅರ್ಚಕರು ಮತ್ತು ರಾಜಕಾರಣಿಗಳು ವಿರೋಧ ದಾಖಲಿಸಿದ್ದಾರೆ.
ಸುರಕ್ಷತೆಗಾಗಿ ಇಸ್ಕಾನ್ ಪ್ರಾರ್ಥನೆ: ಸನ್ಯಾಸಿಗಳನ್ನು ಬಂಧಿಸುತ್ತಿರುವ ಬಾಂಗ್ಲಾ ಕ್ರಮವನ್ನು ಇಸ್ಕಾನ್ನ ಕೋಲ್ಕತ ಉಪಾಧ್ಯಕ್ಷ ಹಾಗೂ ವಕ್ತಾರ ರಾಧಾರಮಣ ದಾಸ್ ಪ್ರಶ್ನಿಸಿದ್ದಾರೆ. ಬಾಂಗ್ಲಾದೇಶಿ ಅಲ್ಪಸಂಖ್ಯಾತರ ಸುರಕ್ಷತೆಗೆ ಭಾನುವಾರ ಪ್ರಾರ್ಥನೆ ನಡೆಸಲು 150ಕ್ಕೂ ಅಧಿಕ ದೇಶಗಳ ಇಸ್ಕಾನ್ ಭಕ್ತರಿಗೆ ಕರೆ ಕೊಡಲಾಗಿತ್ತು. ಪ್ರತಿ ವಾರ ನಡೆಸುವ ಕೀರ್ತನೆಯು ಭಾನುವಾರ ಬಾಂಗ್ಲಾ ಅಲ್ಪಸಂಖ್ಯಾತರ ಸುರಕ್ಷತೆ ಹಾಗೂ ರಕ್ಷಣೆಗೆ ಪ್ರಾರ್ಥನೆಯಾಗಿತ್ತು ಎಂದು ಇಸ್ಕಾನ್ ಆಡಳಿತ ಮಂಡಳಿಯ ಕಮಿಷನರ್ ಗೌರಂಗ ದಾಸ್ ತಿಳಿಸಿದ್ದಾರೆ.
ಬಿಜೆಪಿ ಖಂಡನೆ: ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ, ಕೇಂದ್ರ ಸಚಿವ ಸುಕಂತ ಮಜುಮ್ದಾರ್, ಸ್ವಾಮೀಜಿಗಳ ಬಂಧನವು ‘ನ್ಯಾಯದ ಮೌಲ್ಯಗಳಿಗೆ ವಿರುದ್ಧವಾಗಿದೆ’ ಎಂದು ಖಂಡಿಸಿದ್ದಾರೆ.