ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

Bakery
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿ ಗೇಟ್ ಸಮೀಪದ ಬೇಕರಿಯೊಂದರ ಹುಡುಗರಿಗೆ ಪುಡಿರೌಡಿಗಳಿಗೆ ಮನಸೋಇಚ್ಛೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದರೂ, ಇನ್ನಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ ಎಂದಿರುವ ಕರಾವಳಿಗರು ಎಲ್ಲ ಆರೋಪಿಗಳನ್ನೂ ವಶಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ.

ಸಿಗರೇಟ್ ಹಣ ಕೇಳಿದಕ್ಕೆ ಅಂಗಡಿ ಹುಡುಗರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ 1.9 ಲಕ್ಷ ರೂ. ಎಗರಿಸಿ, ಪ್ರಾಣಬೆದರಿಕೆ ಹಾಕಿರುವ ಪ್ರಕರಣ ಕುಂದಲಹಳ್ಳಿಗೇಟ್ ಸಮೀಪದ ಕಾಂಡಿಮೆಂಟ್ಸ್‌ವೊಂದರಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕಾರ್ತಿಕ್ (20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್ (20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್ (23) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಇನ್ನಿಬ್ಬರಿದ್ದು ಅವರನ್ನೂ ಬಂಧಿಸಬೇಕು ಎಂದು ಕರಾವಳಿಗರು ಪೊಲೀಸರನ್ನು ಆಗ್ರಹಿಸಿದ್ದಾರೆ. ಬೇಕರಿ ಹುಡುಗರ ಮೇಲೆ ಹಲ್ಲೆ ನಡೆಸಿದ ಎಲ್ಲ ಆರೋಪಿಗಳ ಬಂಧನ ಆಗಲೇ ಬೇಕು. ಹಲ್ಲೆಯ ಹಿಂದೆ ಇನ್ನೊಂದು ಬೇಕರಿ ಮಾಲೀಕ ಮಂಜುನಾಥ ಎಂಬಾತ ಸುಪಾರಿ ಕೊಟ್ಟಿದ್ದಾನೆ. ಮಾತ್ರವಲ್ಲ ಈತ ಪೊಲೀಸರಿಗೆ ಮಾಮೂಲಿ ಕೊಡುತ್ತಿದ್ದ ಎನ್ನಲಾಗಿದೆ. ಮಾತ್ರವಲ್ಲದೆ ಬೇಕರಿಯಲ್ಲಿ ಗಲಾಟೆ ಆದ ತಕ್ಷಣವೇ ಹುಡುಗರು ಹೊಯ್ಸಳ ಪೊಲೀಸರಿಗೆ ದೂರವಾಣಿ ಮೂಲಕ ಘಟನೆಯನ್ನ ವಿವರಿಸಿದ್ದರೂ ನಮ್ಮ ಲಿಮಿಟ್ಸ್ ಅಲ್ಲ ಎಂದಿದ್ದಾರೆ. ಮತ್ತೊಂದೆಡೆ ಆರೋಪಿಗಳನ್ನು ಸ್ಥಳೀಐ ರಾಜಕಾರಣಿಗಳು ರಕ್ಷಿಸುತ್ತಿರುವ ಸುಳಿವು ಸಿಕ್ಕಿದೆ. ಗೃಹ ಸಚಿವರು ನ್ಯಾಯ ಸಿಗದೇ ಹೋದರೆ ನಾವು ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯ. ಇದು ಒಂದು ದಿನದ ಶೋ ಅಲ್ಲ, ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ ಎಂದು ಜೈ ಭಾರ್ಗವ ಬಳಗ ಹಾಗೂ ಇತರ ಕರಾವಳಿಗರು ಆಗ್ರಹಿಸಿದ್ದಾರೆ.

ಇನ್ನೊಂದೆಡೆ ಬೆಂಗಳೂರು ಪೊಲೀಸರ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಈ ಹಲ್ಲೆ ಸಂಬಂಧಿಸಿದ ವಿಡಿಯೋ ದೃಶ್ಯದ ಫೋಟೋ ಪ್ರಕಟಿಸಲಾಗಿದ್ದು, ಅದರಲ್ಲಿ ಆರೋಪಿಗಳ ಮುಖವನ್ನು ಮರೆ ಮಾಚಿರುವುದರ ವಿರುದ್ಧವೂ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net