ಮೇಕಪ್​ನಿಂದ ಲುಕ್ ಹಾಳಾಯ್ತು ಅಂತ ಬ್ಯೂಟಿಪಾರ್ಲರ್​ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ ವಧು!

Bride
ಸಾಂದರ್ಭಿಕ ಚಿತ್ರ
Published on

ಮಧ್ಯಪ್ರದೇಶ: ಮದುವೆ ಸಂದರ್ಭದಲ್ಲಿ ವಧು ಬ್ಯೂಟಿಪಾರ್ಲರ್​​ನವರ ಮೊರೆ ಹೋಗಿ ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳಲು ಯತ್ನಿಸುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಮೇಕಪ್​ ತನ್ನ ಲುಕ್ಕನ್ನೇ ಹಾಳು ಮಾಡಿತು ಎಂದು ತೀವ್ರ ಬೇಸರಗೊಂಡ ವಧು ಬ್ಯೂಟಿಪಾರ್ಲರ್ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ್ದಾಳೆ.

ಮಧ್ಯಪ್ರದೇಶದ ಜಬಲ್ಪುರದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಬ್ಯೂಟಿಪಾರ್ಲರ್​ನವರು ಮಾಡಿದ್ದ ಮೇಕಪ್ ಸರಿ ಇರಲಿಲ್ಲ. ಇದರಿಂದ ನನ್ನ ಲುಕ್ ಹಾಳಾಗಿತ್ತು. ಈ ಬಗ್ಗೆ ಅವರಲ್ಲಿ ತಿಳಿಸಿದಾಗ ಸಮಸ್ಯೆ ಪರಿಹರಿಸುವ ಬದಲು ಅವರು ನಮಗೇ ಬೆದರಿಕೆ ಹಾಕಿದ್ದರು. ಹೀಗಾಗಿ ಪೊಲೀಸರಿಗೆ ದೂರು ನೀಡಲಾಯಿತು ಎಂದು ವಧು ಹೇಳಿಕೊಂಡಿದ್ದಾಳೆ. ಹೀಗಾಗಿ ಕೊಟ್ವಾಲಿ ಪೊಲೀಸ್ ಠಾಣೆಯವರು ಬ್ಯೂಟಿಪಾರ್ಲರ್​ನವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿ.3ರಂದು ಮದುವೆ ಆಗಲಿದ್ದ ಹಿನ್ನೆಲೆಯಲ್ಲಿ ವಧುವಿನ ಮನೆಯವರು ಜಬಲ್ಪುರದ ಮೊನಿಕಾ ಮೇಕಪ್ ಸ್ಟುಡಿಯೊದ ನಿರ್ದೇಶಕಿ ಮೊನಿಕಾ ಪಾಠಕ್ ಅವರನ್ನು ಸಂಪರ್ಕಿಸಿದ್ದರು. ಈ ಮೇರೆಗೆ ಮೊನಿಕಾ ಮೂರೂವರೆ ಸಾವಿರ ರೂ. ನಿಗದಿ ಮಾಡಿ ಮೇಕಪ್​ಗೆ ಒಪ್ಪಿಕೊಂಡಿದ್ದಳು. ಆದರೆ ಮೇಕಪ್​ಗೆ ನಿಗಿದಯಾದ ದಿನದಂದು ಮೊನಿಕಾ ಬರದೆ ಅವಳ ಸಿಬ್ಬಂದಿ ಬಂದು ಮೇಕಪ್ ಮಾಡಿದ್ದು, ಲುಕ್​ ಕೆಡಿಸಿದ್ದಾರೆ ಎಂದು ವಧು ಆರೋಪಿಸಿದ್ದಳು. ಆಗ ವಧುವಿನ ಕರೆ ಮೇರೆಗೆ ಮೊನಿಕಾ ಆಗಮಿಸಿದ್ದು, ಆಕೆ ಲುಕ್ ಸರಿಮಾಡುವ ಬದಲು ಮತ್ತಷ್ಟು ಕೆಡಿಸಿದ್ದಳು ಎಂದು ವಧು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net