

ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಮೇ 27ರಂದು ಕಾಶಿಯ ಜ್ಞಾನವಾಪಿ ಮಸೀದಿ ಕುರಿತ ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಪ್ರವಾದಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ದೂರಲಾಗಿದೆ. ಬಳಿಕ ಬಿಜೆಪಿಯ ನವೀನ್ ಜಿಂದಾಲ್ ಮಾಡಿದ ಟ್ವೀಟ್ಗೂ ಭಾರಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮೇ 28ರಂದು ಮುಂಬೈನಲ್ಲಿ ಮತ್ತು ಮರುದಿನ ಥಾಣೆಯಲ್ಲಿ ಎಫ್ಐಆರ್ಗಳು ದಾಖಲಾಗಿವೆ. ಈ ಮಧ್ಯೆ, ನೂಪುರ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಯಿತು.
ಕೊಲ್ಲಿ ರಾಷ್ಟ್ರಗಳು ಮತ್ತು ಇಸ್ಲಾಮಿಕ್ ಸಹಕಾರ ಒಕ್ಕೂಟ ಅನಪೇಕ್ಷಿತ ಮತ್ತು ಸಂಕುಚಿತ ಮನೋ ಭಾವದಿಂದ ಮಾಡಿರುವ ಟೀಕೆಗಳನ್ನು ಭಾರತ ತಿರಸ್ಕರಿಸಿದೆ. ಕೆಲವು ವ್ಯಕ್ತಿಗಳು ಮಾಡಿರುವ ಆಕ್ಷೇಪಗಳು ವೈಯಕ್ತಿಕವೇ ಹೊರತು ಅದು ಸರ್ಕಾರದ ಅನಿಸಿಕೆ ಅಲ್ಲ ಮತ್ತು ಸರ್ಕಾರ ಅದನ್ನು ಬೆಂಬಲಿಸುವುದೂ ಇಲ್ಲ. ವಿವಾದಾತ್ಮಕ ಹೇಳಿಕೆ ನೀಡಿದವರ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆೆ.
ದೇಶವನ್ನು ಆಂತರಿಕವಾಗಿ ಒಡೆಯುವುದು, ಜಾಗತಿಕ ಮಟ್ಟದಲ್ಲಿ ಭಾರತವನ್ನು ದುರ್ಬಲಗೊಳಿಸುವುದು ಬಿಜೆಪಿಯ ಚಾಳಿ. ಅದರ ಇಂಥ ಬೇಜವಾಬ್ದಾರಿ ನಡೆನುಡಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಅವಮಾನ ಎದುರಿಸುವಂತಾಗಿದೆ. ಧರ್ವಂಧತೆ ನಮ್ಮನ್ನು ಪ್ರತ್ಯೇಕಿಸುವುದಲ್ಲದೆ ಜಾಗತಿಕವಾಗಿ ಗೌರವ ಹಾಳು ಮಾಡುತ್ತಿರುವುದು ನಾಚಿಕೆಗೇಡು. | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ ಸರ್ಕಾರ ಎಲ್ಲ ಧರ್ಮಗಳ ಬಗ್ಗೆ ಸಮಾನ ಗೌರವ ಹೊಂದಿದೆ. ಯಾವುದೇ ಧರ್ಮವನ್ನು ಅಥವಾ ಧರ್ಮ ಗುರುವನ್ನು ಅವಹೇಳನ ಮಾಡುವಂಥ ಉದ್ದೇಶ ಸರ್ಕಾರಕ್ಕಿಲ್ಲ ಮತ್ತು ಇಂಥ ಕೃತ್ಯವನ್ನು ಉತ್ತೇಜಿಸುವುದೂ ಇಲ್ಲ. | ಅರಿಂದಮ್ ಬಾಗ್ಚಿ ವಿದೇಶಾಂಗ ವಕ್ತಾರ
ಪ್ರವಾದಿ ಬಗ್ಗೆ ಬಿಜೆಪಿ ವಕ್ತಾರೆ ಮಾಡಿದ್ದಾರೆನ್ನಲಾದ ಟೀಕೆಯನ್ನು ಕೊಲ್ಲಿ ರಾಷ್ಟ್ರಗಳು ಖಂಡಿಸಿವೆ. ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿವೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕತಾರ್ ಪ್ರವಾಸದಲ್ಲಿರುವಾಗಲೇ ಈ ಬೆಳವಣಿಗೆಗಳು ನಡೆದಿರುವುದು ಭಾರತವನ್ನು ಮುಜುಗರಕ್ಕೀಡು ಮಾಡಿದೆ. ವೆಂಕಯ್ಯ ನಾಯ್ಡು ಗೌರವಾರ್ಥ ಏರ್ಪಡಿಸಲಾಗಿದ್ದ ಔತಣಕೂಟ ರದ್ದುಗೊಳಿಸಲಾಗಿದೆ. ಭಾರತದ ಸರಕನ್ನು ಕೊಲ್ಲಿ ರಾಷ್ಟ್ರಗಳು ಬಹಿಷ್ಕರಿಸಬೇಕು ಎಂಬ ಅಭಿಯಾನ ಕೂಡ ಮಧ್ಯಪ್ರಾಚ್ಯದ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಕುವೈತ್ ಸೂಪರ್ ಮಾರ್ಕೆಟ್ವೊಂದರಲ್ಲಿ ಭಾರತೀಯ ಉತ್ಪನ್ನಗಳನ್ನು ತೆಗೆಯಲಾಗಿದೆ. ಭಾರತದಲ್ಲಿ ಇಸ್ಲಾಂ ಧರ್ಮದ ನಿಂದನೆ, ದ್ವೇಷ ಹೆಚ್ಚಾಗಿದೆ. ಮುಸ್ಲಿಮರ ವಿರುದ್ಧ ವ್ಯವಸ್ಥಿತ ಪಿತೂರಿಗಳು ನಡೆಯುತ್ತಿವೆ. ಹಗೆ ಪ್ರಚೋದನೆ, ತಪು್ಪಸಂದೇಶಗಳ ರವಾನಿಸಿ ಜನರನ್ನು ದಾರಿತಪ್ಪಿಸುವ ಕಾರ್ಯ ನಡೆಯುತ್ತಿದೆ ಎಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ಇಸ್ಲಾಮಿಕ್ ಸಹಕಾರ ಒಕ್ಕೂಟ (ಒಐಸಿ) ಕೇಂದ್ರ ಕಚೇರಿ ಹೇಳಿದೆ. ಭಾರತಕ್ಕೆ ಅಧಿಕ ಪ್ರಮಾಣದಲ್ಲಿ ತೈಲ ಪೂರೈಸುವ ಸೌದಿ ಅರೇಬಿಯಾ ಕೂಡ ಪ್ರವಾದಿ ವಿರುದ್ಧ ಹೇಳಿಕೆ ತೀವ್ರ ವಾಗಿ ಖಂಡಿಸಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದ ತಾಲಿ ಬಾನ್ ಆಡಳಿತ ಕೂಡ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದೆ.
ಕಾನ್ಪುರದಲ್ಲಿ ಘರ್ಷಣೆ: ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಆಕ್ರೋಶಗೊಂಡ ಒಂದು ಸಮುದಾಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಮೂರು ದಿನ ಹಿಂದೆ ಪ್ರತಿಭಟನೆ ನಡೆಸಿತು. ಈ ವೇಳೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಯಿತು. ವ್ಯಾಪಕ ಕಲ್ಲು ತೂರಾಟ ನಡೆಯಿತು. 40ಕ್ಕೂ ಹೆಚ್ಚು ಜನರು ಗಾಯಗೊಂಡರು. 800 ಜನರ ವಿರುದ್ಧ ಪ್ರಕರಣದಾಖಲಾಗಿದ್ದು, 38 ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಹಯಾತ್ ಜಾಫರ್ ಹಶ್ಮಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಇಂಡಿಯಾಗಳ ಸಂಪರ್ಕ ಇದ್ದು, ಈ ಕುರಿತು ಕೆಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಶ್ಮಿ ವಿರುದ್ಧ ತನಿಖೆಗೆ ಎಸ್ಐಟಿ ರಚಿಸಲಾಗಿದೆ.
ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅಮಾನತು ಮತ್ತು ದೆಹಲಿಯ ಮುಖಂಡ ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆಯನ್ನು ಬಿಜೆಪಿ ತನ್ನ ಆಂತರಿಕ ಸಂವಿಧಾನದ ನಿಯಮಗಳ ಅನ್ವಯ ಕೈಗೊಂಡಿದೆ. ‘ಪಕ್ಷದ ನೀತಿ, ಸಿದ್ಧಾಂತಕ್ಕೆ ವಿರುದ್ಧವಾದ ಹೇಳಿಕೆ ನೀಡಿ ನಿಯಮ 10(ಎ) ಉಲ್ಲಂಘಿಸಿರುವುದರಿಂದ ನಿಮ್ಮ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ. ಇದು ಪೂರ್ಣಗೊಳ್ಳುವವರೆಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಪಕ್ಷದಲ್ಲಿ ಹೊಂದಿರುವ ಎಲ್ಲ ಜವಾಬ್ದಾರಿಗಳಿಂದ ನಿಮ್ಮನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬಿಡುಗಡೆ ಮಾಡಲಾಗಿದೆ’ ಎಂದು ಬಿಜೆಪಿ ನೂಪುರ್ ಶರ್ವಗೆ ರವಾನಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿಯ ದೆಹಲಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಪ್ರವಾದಿಗಳನ್ನು ಟೀಕಿಸುವಂತಹ ಟ್ವೀಟ್ ಮಾಡಿದ್ದರು. ಇದು ವಿವಾದ ಪಡೆದುಕೊಳ್ಳುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದರು. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. 1980ರಲ್ಲಿ ಬಿಜೆಪಿ ಸ್ಥಾಪನೆಗೊಂಡಾಗಲೇ ಆಂತರಿಕ ಸಂವಿಧಾನ ರಚಿಸಲಾಗಿದೆ. ಇದರಲ್ಲಿ 34 ಅನುಚ್ಛೇದಗಳಿವೆ. ಇದರಲ್ಲಿ 25ನೇ ಅನುಚ್ಛೇದವು ಶಿಸ್ತುಕ್ರಮಕ್ಕೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ 10ನೇ ನಿಯಮವು ಶಿಸ್ತುಕ್ರಮ ಉಲ್ಲಂಘನೆಗೆ ಏನು ಶಿಕ್ಷೆ ಎಂಬುದನ್ನು ವಿವೇಚಿಸಿದೆ.
ದೆಹಲಿ ವಿವಿ ವಿದ್ಯಾರ್ಥಿನಿಯಾಗಿದ್ದಾಗಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಸಂಪರ್ಕಕ್ಕೆ ಬಂದ ನೂಪುರ್ ಶರ್ಮಾ (37), 2008ರಲ್ಲಿ ಅದರ ಅಧ್ಯಕ್ಷೆಯಾಗಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲವು ಕಾಲ ವಕೀಲಿಕೆ ಮಾಡಿದರು. 30ನೇ ವಯಸ್ಸಿನಲ್ಲಿ ಬಿಜೆಪಿ ಸೇರಿದ ಅವರು, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ರನ್ನು 2015ರ ಚುನಾವಣೆಯಲ್ಲಿ ಎದುರಿಸಿದ್ದರು. ತಮ್ಮ ವಾಕ್ಪುಟುತ್ವದಿಂದ ರಾಷ್ಟ ನಾಯಕರ ಗಮನಸೆಳೆದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಈ ಮಧ್ಯೆ, ತಮಗೆ ಬೆದರಿಕೆಗಳು ಬರುತ್ತಿದೆ ಎಂದು ನೂಪುರ್ ಪೊಲೀಸರಿಗೆ ದೂರು ನೀಡಿದ್ದಾರೆ. ‘ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ಟಿವಿ ಕಾರ್ಯಕ್ರಮದ ಹೇಳಿಕೆಯನ್ನು ಹಿಂಪಡೆದಿದ್ದೇನೆ. ನನ್ನ ಕುಟುಂಬದ ಸುರಕ್ಷತೆ ಬಗ್ಗೆ ಚಿಂತೆಯಾಗಿದೆ’ ಎಂದಿರುವ ಅವರು, ತಮ್ಮ ವಿಳಾಸವನ್ನು ಬಹಿರಂಗ ಪಡಿಸದಂತೆ ಮಾಧ್ಯಮಗಳಿಗೆ ಮನವಿಯನ್ನೂ ಮಾಡಿದ್ದಾರೆ.