

ಜಂಗಾಂವ್: ಮಕ್ಕಳು ತಪ್ಪು ಮಾಡಿದರೆ ಹೊಡೆಯುತ್ತಾರೆ. ಹೇಳಿದ ಮಾತು ಕೇಳದಿದ್ದರೆ ಹೊಡೆಯುತ್ತಾರೆ. ಆದರೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರು ತಲೆ ಸ್ನಾನ ಮಾಡಿದರು ಎನ್ನುವ ಕಾರಣಕ್ಕೇ ಕೋಲಿನಿಂದ ಹೊಡೆದಿರುವ ಘಟನೆ ತೆಲಂಗಾಣದ ಜಂಗಾಂವ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ರಘುನಾಥಪಲ್ಲಿ ಮಂಡಲ್ ನಗರದಲ್ಲಿರುವ ಕಸ್ತುರ್ಬಾ ಗಾಂಧಿ ಬಾಲಿಕ ವಿದ್ಯಾಲಯದ ವಿದ್ಯಾರ್ಥಿನಿಯರು ಸೋಮವಾರದಂದು ತಲೆ ಸ್ನಾನ ಮಾಡಿದ್ದಾರೆ. ಅದೇ ಕಾರಣಕ್ಕಾಗಿ ಹಾಸ್ಟೆಲ್ನ ಜವಾಬ್ದಾರಿ ಹೊತ್ತಿರುವ ಸುಮಲತಾ ಹೆಸರಿನ ಶಿಕ್ಷಕಿ 6ರಿಂದ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ 120 ವಿದ್ಯಾರ್ಥಿನಿಯರಿಗೆ ಕೋಲಿನಿಂದ ಹೊಡೆದಿದ್ದಾರೆ. ಇದರಿಂದಾಗಿ ಕೆಲ ವಿದ್ಯಾರ್ಥಿನಿಯರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಈ ರೀತಿ ನಡೆದುಕೊಳ್ಳುವುದಕ್ಕೆ ಕಾರಣವೇನು ಎಂದು ಕೇಳಿದಾಗ ಹಾಸ್ಟೆಲ್ನಲ್ಲಿ ನೀರಿನ ಅಭಾವವಿದ್ದು, ಈ ಸಮಯದಲ್ಲಿ ವಿದ್ಯಾರ್ಥಿನಿಯರು ತಲೆ ಸ್ನಾನ ಮಾಡಿರುವುದಕ್ಕಾಗಿ ಹೊಡೆದಿರುವುದಾಗಿ ಶಿಕ್ಷಕಿ ತಿಳಿಸಿದ್ದಾರೆ.
ಹಾಸ್ಟೆಲ್ನಲ್ಲಿ ನೀರಿನ ಅಭಾವವಿತ್ತು ಎನ್ನುವುದನ್ನು ಆಕೆ ವಿದ್ಯಾರ್ಥಿನಿಯರಿಗೆ ತಿಳಿಸಿಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಸಾಮಾನ್ಯವಾಗಿ ನಾವು ಭಾನುವಾರದಂದು ತಲೆ ಸ್ನಾನ ಮಾಡುತ್ತೇವೆ. ಆದರೆ ಸೋಮವಾರ ರಜೆ ಇದ್ದ ಕಾರಣ ನಾವು ಅಂದು ಮಾಡಿದೆವು. ನೀರಿನ ಅಭಾವವಿದೆ ಎಂದು ಮೊದಲೇ ತಿಳಿಸಿದ್ದರೆ ನಾವು ಹಾಗೆ ಮಾಡುತ್ತಿರಲಿಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿರುವ ಕುರಿತಾಗಿ ಮಕ್ಕಳ ಹಕ್ಕುಗಳ ಸಂಸ್ಥೆಯಾಗಿರುವ ಬಲಾಲ ಹಕ್ಕುಲ ಸಂಘಮ್ (ಬಿಎಚ್ಎಸ್) ದೂರು ನೀಡಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗೆ ತಲುಪಿಸಲಾಗಿದ್ದು, ಶಿಕ್ಷಕಿಯನ್ನು ಅಮಾನತು ಮಾಡುವುದಾಗಿ ಅವರು ತಿಳಿಸಿದ್ದಾರೆ ಎಂದು ಬಿಎಚ್ಎಸ್ ತಿಳಿಸಿದೆ. (ಏಜೆನ್ಸೀಸ್)