ಸೇನೆ, ರಾಜಕೀಯ ನಾಯಕತ್ವದ ಶಕ್ತಿ; ಕ್ಲಬ್​ ಹೌಸ್ ಸಂವಾದ

army
Published on
|ಪ್ರೇಮಶೇಖರ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು

ಮುಖ್ಯವಾಗಿ, ಸ್ವತಂತ್ರ ಭಾರತ ಗಳಿಸಿದ ನಿರ್ಣಾಯಕ ಗೆಲುವು ಇದು. ಬೇರೆ ಯುದ್ಧಗಳಲ್ಲಿ ಇಂಥ ಗೆಲುವು ದಾಖಲಿಸಲು ಸಾಧ್ಯವಾಗಿರಲಿಲ್ಲ ಮತ್ತು ಶತ್ರುಗಳಿಂದ ಶರಣಾಗತಿಯ ಪತ್ರ ಪಡೆದಿರಲಿಲ್ಲ. 1947-48ರಲ್ಲಿನ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತಕ್ಕೆ ಹಿನ್ನಡೆ, 1965ರಲ್ಲಿ ಚೀನಾದೊಂದಿಗೆ ನಡೆದ ಯುದ್ಧದಲ್ಲಿ ಸೋಲು ಉಂಟಾದ ಬಳಿಕ 1971ರಲ್ಲಿ ಭಾರತದ ಅದ್ಭುತ ಗೆಲುವಿನ ಮೂಲಕ ಬಾಂಗ್ಲಾದೇಶ ಉದಯವಾಯಿತು.

ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ಅಂರ್ತಯುದ್ಧದಲ್ಲಿ ಭಾರತ ಏಕೆ ಪ್ರವೇಶಿಸಿತು ಎಂಬುದಕ್ಕೆ ತುಂಬ ಸ್ಪಷ್ಟ ಉತ್ತರಗಳಿವೆ. 1947ರ ದೇಶವಿಭಜನೆಯಲ್ಲಿ ಭಾರತದ ರಕ್ಷಣಾ ಸ್ಥಿತಿಗೆ ಆದ ಹಾನಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ನಿರ್ಧರಿಸಿತು. ಪಶ್ಚಿಮ ಅಸ್ಸಾಂ ಹೊರತುಪಡಿಸಿ ಈಶಾನ್ಯ ಭಾರತವು ಭಾರತದ ಇತರ ಭೂಭಾಗಕ್ಕೆ ಹೋಲಿಸಿದರೆ ಐತಿಹಾಸಿಕವಾಗಿ, ಜನಾಂಗೀಯವಾಗಿ ಸ್ವಲ್ಪ ಹೊರತಾದದ್ದೇ. ಅವರ ಆಹಾರಪದ್ಧತಿ, ಉಡುಗೆ-ತೊಡುಗೆಗಳು, ಜೀವನವಿಧಾನ ಸ್ವಲ್ಪ ಬೇರೆಯೇ. ಹಾಗಾಗಿ, ಅಲ್ಲಿ ಪ್ರತ್ಯೇಕತೆಯ ದನಿ ಏಳದಂತೆ, ಏಕತೆಯ ಭಾವ ಮೂಡುವಂತೆ ಮಾಡುವುದು ಅಗತ್ಯವಾಗಿತ್ತು.

ನಾಗಾಲ್ಯಾಂಡ್, ಮಿಜೊರಾಂ, ಮಣಿಪುರದಲ್ಲಿ ಆತಂಕದ ವಾತಾವಾರಣ ನಿರ್ವಣವಾದಾಗ 1950ರ ದಶಕದ ಆದಿಭಾಗದಲ್ಲೇ ಭಾರತೀಯ ಸೇನೆ ಅಲ್ಲಿ ಕಾರ್ಯನಿರತವಾಯಿತು. ಅಲ್ಲದೆ, ಚೀನಾದ ಜತೆ ನಮ್ಮ ಸಂಬಂಧಗಳು ಬಿಗಡಾಯಿಸಿದಾಗ ಮ್ಯಾಕ್ ಮೋಹನ್ ಗಡಿಯುದ್ದಕ್ಕೂ ಚೀನಾದ ಅತಿಕ್ರಮಣದ ಅಪಾಯ ಎದುರಿಸುವ ಸ್ಥಿತಿ ಸೃಷ್ಟಿಯಾಯಿತು. ಆ ಸನ್ನಿವೇಶದಲ್ಲಿ ಪೂರ್ವ ಪಾಕಿಸ್ತಾನವನ್ನು ಕಳೆದುಕೊಂಡಿದ್ದರ ಪರಿಣಾಮವಾಗಿ ಇಡೀ ಪೂವೋತ್ತರ ಭಾರತವನ್ನು ನಮ್ಮ ಮುಖ್ಯ ಭೂಭಾಗಕ್ಕೆ ಸೇರಿಸಿದ್ದು ಸಣ್ಣ ಕೊಂಡಿ ಮಾತ್ರ. ಭೌಗೋಳಿಕ ಸನ್ನಿವೇಶಗಳು ಹಾಗಿದ್ದವು. ಅರುಣಾಚಲ ಪ್ರದೇಶದವರು ಸಂಪೂರ್ಣವಾಗಿ ನಮ್ಮವರಾಗಿರಲಿಲ್ಲ. ನಾಗಾಲ್ಯಾಂಡಿನಲ್ಲಿ ಆತಂಕವಾದ ತಲೆಯೆತ್ತಿತ್ತು. ಈ ಭಾಗಗಳೊಂದಿಗೆ ಸಂಪರ್ಕವೇ ಬಹಳ ಕಠಿಣವಾಗಿತ್ತು. ಇದು ದೇಶವಿಭಜನೆಯು ನಮಗೆ ತಂದೊಡ್ಡಿದ ದೊಡ್ಡ ಹಾನಿ. ಇದನ್ನು ಹೇಗಾದರೂ ಮಾಡಿ ಸರಿಪಡಿಸಿಕೊಳ್ಳಬಹುದಾ, ಪೂವೋತ್ತರ ಅಂದರೆ ಈಶಾನ್ಯ ಭಾರತದೊಂದಿಗೆ ವಿಸõತವಾದ ಸಂಪರ್ಕಜಾಲ ಬೆಳೆಸಲು ಸಾಧ್ಯವಿದೆಯೇ ಎಂದು ಕೇಂದ್ರ ಸರ್ಕಾರ, ರಕ್ಷಣಾ ಪಡೆಗಳು ಆಯ್ಕೆಗಳನ್ನು ಶೋಧಿಸುತ್ತಿದ್ದಾಗ ಪಾಕಿಸ್ತಾನದ ಅಂತರ್ಯುದ್ಧ ಒಂದು ಅವಕಾಶವನ್ನು ಒದಗಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net