ಸಂಪಾದಕೀಯ | ಪ್ರಾದೇಶಿಕ ಅಸ್ಮಿತೆಗೆ ಮಣೆ: ಕನ್ನಡದಲ್ಲೂ ಸಶಸ್ತ್ರ ಪೊಲೀಸ್ ಪರೀಕ್ಷೆ

Central Reserve Police Force
Published on

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಆರ್​ಪಿಎಫ್) ಕಾನ್​ಸ್ಟೆಬಲ್ (ಸಾಮಾನ್ಯ ಕರ್ತವ್ಯ) ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಗೃಹ ಸಚಿವಾಲಯ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಈವರೆಗೆ ಈ ಪರೀಕ್ಷೆಯನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಹಿಂದಿ ಮತ್ತು ಇಂಗ್ಲಿಷ್ ಜತೆ ಪ್ರಾದೇಶಿಕ ಭಾಷೆಗಳಲ್ಲೂ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಗೃಹ ಸಚಿವಾಲಯ ಹೇಳಿದ್ದರೂ ಇದು ಮುಂದಿನ ವರ್ಷದಿಂದ ಕಾರ್ಯರೂಪಕ್ಕೆ ಬರಲಿದೆ. ತತ್​ಕ್ಷಣದಿಂದ ಜಾರಿಗೆ ಬರುವಂತೆ ಕ್ರಮ ಕೈಗೊಂಡರೆ ಪ್ರಸ್ತುತ ಪರೀಕ್ಷೆ ಎದುರಿಸಲು ಮುಂದಾಗಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಗಮನಹರಿಸಬೇಕಾಗಿದೆ.

ಸಿಆರ್​ಪಿಎಫ್​ನ 1.3 ಲಕ್ಷ ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಕೇಂದ್ರ ಸರ್ಕಾರವು, ಈ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ಮಾತ್ರ ನಡೆಸಲಾಗುವುದು ಎಂದು ತಿಳಿಸಿತ್ತು. ಇದಕ್ಕೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ನೀಡುವ ನಿರ್ಧಾರ ಪ್ರಕಟಿಸಿದೆ. ಕನ್ನಡವೂ ಸೇರಿ ದೇಶದ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುವುದು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಜತೆಗೆ ಸ್ಥಳೀಯರು ಉದ್ಯೋಗ ಪಡೆದುಕೊಳ್ಳಲು ನೆರವಾಗುತ್ತದೆ. ಅಲ್ಲದೆ, ವಿವಿಧ ಭಾಷಾವಾರು ಪ್ರಾಂತ್ಯಗಳಿಂದ ಕೂಡಿರುವ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮಹತ್ವದ ಕಾಣಿಕೆ ನೀಡುತ್ತದೆ.

ಕೇಂದ್ರ ಸರ್ಕಾರದ ವತಿಯಿಂದ ಕೈಗೊಳ್ಳಲಾಗುವ ಹಲವಾರು ನೇಮಕಾತಿ ಪರೀಕ್ಷೆಗಳನ್ನು ಈ ಹಿಂದೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರವೇ ನಡೆಸಲಾಗುತ್ತಿತ್ತು. ಕಾಲಾನಂತರದಲ್ಲಿ ಒತ್ತಾಯಕ್ಕೆ ಮಣಿದು ಕೆಲ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು 11409 ಹುದ್ದೆಗಳ ನೇಮಕಾತಿಗಾಗಿ ನಡೆಸುತ್ತಿರುವ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕಳೆದ ಜನವರಿಯಲ್ಲಿಯಷ್ಟೆ ಅವಕಾಶ ನೀಡಿದೆ. ಇಂತಹ ಪಟ್ಟಿಗೆ ಸಿಆರ್​ಪಿಎಫ್ ನೇಮಕಾತಿ ಪರೀಕ್ಷೆ ಈಗ ಸೇರಿದೆ.

ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಬಯಸುವ ಕನ್ನಡಿಗರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಬರೆಯುವುದು ಕಷ್ಟಕರವಾಗುತ್ತದೆ. ಸಾಕಷ್ಟು ಅಭ್ಯರ್ಥಿಗಳಿಗೆ ಈ ಭಾಷೆಗಳ ಮೇಲೆ ಹಿಡಿತ ಇರುವುದಿಲ್ಲ. ಅಲ್ಲದೆ, ಕಾನ್​ಸ್ಟೇಬಲ್, ಕ್ಲರ್ಕ್ ರೀತಿಯ ಸಿ ದರ್ಜೆಯ ಹುದ್ದೆಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನೇನೂ ನಿಗದಿಪಡಿಸಿರುವುದಿಲ್ಲ. ಹೀಗಾಗಿ, ಸಿ ಮತ್ತು ಡಿ ದರ್ಜೆಯ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸುವುದು ಸಹಜ ನ್ಯಾಯದ ಪ್ರತೀಕವಾಗಿ ಕಂಡುಬರುತ್ತದೆ. ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ 2022ರಲ್ಲಿ ಕೂಡ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎನ್ನುವ ಅಂಶ ಪ್ರಸ್ತಾಪಿಸಿರುವುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net