

ತಿರುವನಂತಪುರಂ: ಫುಟ್ಬಾಲ್ ಸ್ಟಾರ್ ಆಟಗಾರ ಮೆಸ್ಸಿ ಪ್ರತಿನಿಧಿಸುವ ಅರ್ಜೆಂಟೀನಾ ತಂಡ ಈ ಬಾರಿಯ ಫಿಫಾ ವಿಶ್ವಕಪ್ ಗೆದ್ದುಕೊಳ್ಳುತ್ತಿದ್ದಂತೆ ಪ್ರಪಂಚದಾದ್ಯಂತ ಫುಟ್ಬಾಲ್ ಪ್ರೇಮಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಕೇರಳದಲ್ಲೂ ಅಧಿಕ ಸಂಖ್ಯೆಯಲ್ಲಿ ಫುಟ್ಬಾಲ್ ಪ್ರೇಮಿಗಳಿದ್ದಾರೆ. ಹೀಗಾಗಿ ರಾಜ್ಯದ ವಿವಿಧ ಭಾಗಗಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆದಿದೆ. ಈ ವೇಳೆ ಪ್ರಾಣ ಹಾನಿಯಾಗಿರುವಂತಹ ಘಟನೆಯೂ ನಡೆದಿದೆ. ಇದೇ ವೇಳೆ ಕೊಲ್ಲಂನಲ್ಲಿ ಹದಿಹರೆಯದ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಅರ್ಜೆಂಟೀನಾ ಗೆಲುವಿನ ನಂತರ ಕೊಲ್ಲಂನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವದಲ್ಲಿ 17 ವರ್ಷದ ಅಕ್ಷಯ್ ಎಂಬಾತ ಸಾವನ್ನಪ್ಪಿರುವ ಯುವಕ ಎಂದು ಗುರುತಿಸಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಲ್ಲದೆ, ಕಣ್ಣೂರು ಜಿಲ್ಲೆಯಲ್ಲಿ ಅರ್ಜೆಂಟೀನಾ ವಿಜಯೋತ್ಸವ ಹಿಂಸಾಚಾರಕ್ಕೆ ತಿರುಗಿತು. ಅಭಿಮಾನಿಗಳು ಸಂಭ್ರಮದಲ್ಲಿ ತೊಡಗಿದ್ದ ವೇಳೆ ಚಾಕು ಇರಿತವಾಗಿದ್ದು, ಮೂರು ಜನ ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)