

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು, ಫೆ.5ರಂದು ಮತದಾನ ನಡೆಯಲಿದೆ. ಫೆ.8ರಂದು ಫಲಿತಾಂಶ ಪ್ರಕಟವಾಗಲಿದೆ.
ಒಟ್ಟು 70 ವಿಧಾನಸಭೆ ಕ್ಷೇತ್ರಗಳಿರುವ ದೆಹಲಿಯಲ್ಲಿ 1.55 ಕೋಟಿ ಮತದಾರರಿದ್ದಾರೆ. 12 ಮೀಸಲು ಕ್ಷೇತ್ರಗಳಿದ್ದು, ಆಮ್ ಆದ್ಮಿ ಪಕ್ಷ ನಾಲ್ಕನೇ ಬಾರಿಗೆ ದೆಹಲಿ ಗದ್ದುಗೆ ಏರುವ ಉತ್ಸಾಹದಲ್ಲಿದೆ. ಆಡಳಿತಾರೂಢ ಆಪ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸವಾಲೊಡ್ಡಿದ್ದು, ಈ ಸಲವಾದರೂ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಪಣತೊಟ್ಟಿವೆ.
ರಾಷ್ಟ್ರೀಯ ಮಟ್ಟದಲ್ಲಿ ಆಪ್-ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿದ್ದರೂ, ದೆಹಲಿಯಲ್ಲಿ ಈ ಎರಡೂ ಪಕ್ಷಗಳು ಅಧಿಕಾರಕ್ಕಾಗಿ ಪ್ರತ್ಯೇಕ ಹೋರಾಟ ನಡೆಸುತ್ತಿವೆ. ಕಾಂಗ್ರೆಸ್ ಮತ್ತು ನಾಯಕತ್ವದ ಬಗ್ಗೆ ಕೆಂಡ ಕಾರುತ್ತಿರುವ ಆಪ್ ನಾಯಕರು, ಕಾಂಗ್ರೆಸ್ನ್ನು ಇಂಡಿಯಾ ಮೈತ್ರಿಕೂಟದಿಂದ ಹೊರಗಿಡಬೇಕೆಂದೂ ಕೆಲ ದಿನಗಳ ಹಿಂದೆ ಆಗ್ರಹಿಸಿದ್ದರು.
ದೆಹಲಿಯಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಈ ಬಾರಿ 2 ಲಕ್ಷಕ್ಕೂ ಹೆಚ್ಚು ಯುವಜನರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆ ಸುಗಮಗೊಳಿಸಲು ಹಲವು ಉಪಕ್ರಮಗಳನ್ನು ಘೊಷಿಸಿರುವ ಅವರು, ವೃದ್ಧರು ಮತ್ತು ಅಂಗವಿಕಲರಿಗೆ ತೊಂದರೆಯಿಲ್ಲದಂತೆ ಮತಗಟ್ಟೆಗೆ ಪ್ರವೇಶಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಟ್ಯಾಂಪರಿಂಗ್ ಅಸಾಧ್ಯ: ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವುದು ಅಸಾಧ್ಯ. ಇವಿಎಂಗಳ ವಿಶ್ವಾಸಾರ್ಹತೆಯನ್ನು ಹಲವಾರು ನ್ಯಾಯಾಲಯಗಳೇ ಎತ್ತಿಹಿಡಿದಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಟ್ಯಾಂಪರಿಂಗ್ ಆರೋಪಗಳು ಆಧಾರರಹಿತವಾಗಿವೆ. ಮತದಾನದ 8 ದಿನ ಮೊದಲು ಇವಿಎಂಗಳನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಏಜೆಂಟರ ಮೂಲಕ ಪ್ರತಿ ಹಂತದಲ್ಲೂ ಮಾಹಿತಿ ಪಡೆಯುತ್ತಿದ್ದಾರೆ. ಅದೇ ದಿನ ಹೊಸ ಬ್ಯಾಟರಿ ಹಾಕಿ ಅದನ್ನು ಸೀಲ್ ಮಾಡಿ ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗುತ್ತದೆ. ಮತದಾನದ ದಿನ ಸ್ಟ್ರಾಂಗ್ ರೂಂಗಳಲ್ಲಿ ಪೋಲಿಂಗ್ ಏಜೆಂಟ್ಗಳ ಎದುರೇ ಸೀಲ್ ಒಡೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಪ್ -ಕೈ- ಬಿಜೆಪಿ ಸಮರ: ಭ್ರಷ್ಟಾಚಾರದ ವಿರುದ್ಧ ಹೋರಾಡಿ ಅಧಿಕಾರಕ್ಕೇರಿದ ಆಪ್ ವಿರುದ್ಧವೇ ಹಗರಣದ ಆರೋಪ ಬಂದು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿ ಹಲವರು ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಹಿಂದೆ ಆಪ್ಗೆ ಮತಹಾಕಿದ್ದ ಹಲವರು ಆಪ್ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎತ್ತಲು ಶುರು ಮಾಡಿರುವುದು ಬಿಜೆಪಿಗೆ ವರದಾನ. ಆದರೆ, ಅದು ಎಷ್ಟರಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗಬಹುದು ಎಂಬ ಬಗ್ಗೆ ಖಚಿತತೆ ಇಲ್ಲ. 2015ರಿಂದ ದೆಹಲಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕೇಜ್ರಿವಾಲ್, ಉಚಿತ ವಿದ್ಯುತ್, ನೀರು ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ 2,100 ರೂ. ನೆರವು, ವೃದ್ಧರಿಗೆ ಉಚಿತ ಆರೋಗ್ಯದ ಭರವಸೆ ನೀಡುವ ಮೂಲಕ ಜನ-ಮನ ಸೆಳೆಯುವ ಯತ್ನ ಮಾಡಿದೆ. ದಿಲ್ಲಿಯಲ್ಲಿ ಕಳೆದ 26 ವರ್ಷಗಳಿಂದ ಅಧಿಕಾರದಿಂದ ದೂರವಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನೇ ನೆಚ್ಚಿ ಕೂತಿದೆ. ಮಾಜಿ ಸಿಎಂ ಶೀಲಾ ದೀಕ್ಷಿತ್ ನಾಯಕತ್ವದಲ್ಲಿ ಮೂರು ಬಾರಿ ಸತತ ಅಧಿಕಾರಕ್ಕೇರಿದ್ದ ಕಾಂಗ್ರೆಸ್, ರಾಜಕೀಯವಾಗಿ ಬಿಜೆಪಿಗಿಂತಲೂ ದುರ್ಬಲ ಸ್ಥಿತಿಯಲ್ಲಿದೆ. ಹೀಗಾಗಿ, ಈ ಚುನಾವಣೆ ಕಾಂಗ್ರೆಸ್ಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ದಿಲ್ಲಿಯಲ್ಲಿ ಪ್ಯಾರಿ ದೀದಿ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್, ಈ ಮೂಲಕ ಮತದಾರರನ್ನು ಆಕರ್ಷಿಸಲು ಮುಂದಾಗಿದೆ.
2013ರಿಂದ ಅಧಿಕಾರದಲ್ಲಿ: 2013ರಲ್ಲಿ ಬಿಜೆಪಿ 31 ಸೀಟುಗಳನ್ನು ಗೆದ್ದಿತ್ತಾದರೂ, 28 ಸೀಟುಗಳನ್ನು ಗೆದ್ದಿದ್ದ ಆಪ್ಗೆ 8 ಸೀಟುಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿ ಸರ್ಕಾರ ರಚನೆಗೆ ನೆರವಾಗಿತ್ತು. ಆದರೆ, ಆಪ್-ಕೈ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. 2015ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆದು, ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ 66 ಸೀಟುಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತು. ಬಿಜೆಪಿ 4 ಸೀಟುಗಳಿಗೆ ಸೀಮಿತಗೊಂಡರೆ ಕಾಂಗ್ರೆಸ್ನದ್ದು ಶೂನ್ಯ ಸಾಧನೆಯಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ನ ರಾಜಕೀಯ ದೌರ್ಬಲ್ಯಗಳನ್ನು ಚೆನ್ನಾಗಿಯೇ ಬಳಸಿಕೊಂಡ ಆಪ್, 2020ರ ವಿಧಾನಸಭೆ ಚುನಾವಣೆಯನ್ನೂ (62 ಸೀಟು) ಗೆದ್ದುಕೊಂಡು ಅಧಿಕಾರಕ್ಕೇರಿತು.
ಬಿಜೆಪಿ ಪ್ಲ್ಯಾನ್ ಏನು?