ಸಂಪಾದಕೀಯ | ಜನರ ಪ್ರಾಣಕ್ಕೆ ಬೆಲೆ ಇಲ್ಲವೆ?

Untitled design (6)
Published on

ಕರ್ನಾಟಕ ಸೇರಿದಂತೆ ದೇಶಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಮತ್ತು ಈ ಅವಘಡಗಳಲ್ಲಿ ಸಾವುನೋವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕದ ವಿಚಾರ. ಒಂದೆಡೆ ಅತಿ ವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿದ್ದರೆ, ಮತ್ತೊಂದೆಡೆ ರಸ್ತೆ ಹೊಂಡಗಳು ಜನರ ಪ್ರಾಣ ಕಸಿಯುತ್ತಿವೆ. ಹಾಸನ ಜಿಲ್ಲೆಯ ಮೊಸಳೆಹಳ್ಳಿಯಲ್ಲಿ ಸೆಪ್ಟೆಂಬರ್ 13ರ ಸಂಜೆ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ನುಗ್ಗಿಬಂದ ಟ್ರಕ್ 10 ಜನರ ಪ್ರಾಣವನ್ನೇ ಕಸಿದುಕೊಂಡಿದೆ. ಮೃತರಲ್ಲಿ ಬಹುತೇಕರು ಯುವಕರಾಗಿದ್ದು, ತಮ್ಮದಲ್ಲದ ತಪ್ಪಿಗೆ ಪ್ರಾಣ ತೊರೆಯುವಂತಾಗಿದ್ದು ದುರದೃಷ್ಟಕರ.

ಯುದ್ಧ, ಭಯೋತ್ಪಾದನೆ ಮತ್ತು ನಕ್ಸಲೀಯರ ವಿಧ್ವಂಸಕ ಕೃತ್ಯದಿಂದ ಸಂಭವಿಸುವ ಸಾವುಗಳಿಗಿಂತಲೂ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚಿದೆ ಎಂಬುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ‘ದೇಶದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದಕ್ಕೆ ಸಿವಿಲ್ ಇಂಜಿನಿಯರ್​ಗಳು ಮತ್ತು ಕನ್ಸಲ್ಟಂಟ್​ಗಳು ತಯಾರಿಸುತ್ತಿರುವ ದೋಷಪೂರಿತ ರಸ್ತೆ ವಿನ್ಯಾಸಗಳು ಮತ್ತು ವಿಸ್ತೃತ ಯೋಜನಾ ವರದಿಗಳು (ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್ಸ್- ಡಿಪಿಆರ್) ಕಾರಣ’ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿದ್ದರು. ರಸ್ತೆ ನಿರ್ಮಾಣ ಉದ್ಯಮದಲ್ಲಿರುವವರು ರಸ್ತೆ ಸುರಕ್ಷತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಮತ್ತು ಪರಿಕರಗಳನ್ನು ಬಳಸಿಕೊಂಡು ಹೊಸ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಬೇಕು ಎಂದೂ ಕರೆ ನೀಡಿದ್ದರು.

ಅಜಾಗರೂಕ ಚಾಲನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಮತ್ತು ಸಂಚಾರ ಪೊಲೀಸ್ ಇಲಾಖೆಯಲ್ಲಿ ಇರುವ ಲಂಚದ ಹಾವಳಿಯಿಂದ ವ್ಯವಸ್ಥೆ ಹದಗೆಟ್ಟು ಹೋಗಿದ್ದು, ನಿಯಮಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ಯಾವುದೇ ತಪ್ಪು ಮಾಡದ ಅಮಾಯಕ ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸ್ಥಿತಿ ಬದಲಾಗಲೇಬೇಕು. ಅತಿ ವೇಗದ ಚಾಲನೆ, ನಿರ್ಲಕ್ಷ್ಯ ಚಾಲನೆ, ರಾಂಗ್ ವೇಯಲ್ಲಿ ನುಗ್ಗಿ ಬರುವುದು ಹೀಗೆ ಸಂಚಾರ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅಪಘಾತ ಮತ್ತು ಜೀವಹಾನಿಗೆ ಕಾರಣವಾಗುತ್ತಿವೆ. 2024ರಲ್ಲಿ ದೇಶದಲ್ಲಿ 1.68 ಲಕ್ಷ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ 30 ಸಾವಿರ ಜನರು ಹೆಲ್ಮೇಟ್ ಧರಿಸದ ಕಾರಣಕ್ಕೆ ಜೀವ ತೆತ್ತಿದ್ದಾರೆ.

2023ರಲ್ಲಿ ರಸ್ತೆ ಅಪಘಾತಗಳಿಗೆ 1.8 ಲಕ್ಷ ಜನ ಬಲಿಯಾಗಿದ್ದಾರೆ. ರಸ್ತೆ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಜಂಟಿ ಹೊಣೆಗಾರಿಕೆ ಇದೆ. ರಸ್ತೆಗಳ ದುಸ್ಥಿತಿ, ವಾಹನ ಸವಾರರ ಅಜಾಗರೂಕ ಚಾಲನೆ, ವಿಶ್ರಾಂತಿ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಹವಾಮಾನ ವೈಪರೀತ್ಯದಂಥ ಕಾರಣಗಳು ಅಪಘಾತದ ಪ್ರಮಾಣ ಹೆಚ್ಚಿಸುತ್ತಿವೆ. ಜನರು ಕೂಡ ಸಂಚಾರ ನಿಯಮಗಳ ಪಾಲನೆಯಲ್ಲಿ ಯಾವುದೇ ಕಾರಣಕ್ಕೂ ಅಸಡ್ಡೆ ತೋರಬಾರದು, ಅಡ್ಡಾದಿಡ್ಡಿ ಸಂಚರಿಸುವ ವಾಹನ ಚಾಲಕರ ವಿರುದ್ಧ ಸಂಚಾರ ಪೊಲೀಸರು ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ, ರಸ್ತೆಗಳ ಗುಣಮಟ್ಟ ಹೆಚ್ಚಬೇಕು. ಗುಂಡಿಗಳು ಸೃಷ್ಟಿಸಿರುವ ಗಂಡಾಂತರಗಳಿಂದ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಲವು ನಿದರ್ಶನಗಳಿಗೆ ರಾಜ್ಯ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net