

Mumbai: ವಂಚನೆ, ಒಬಿಸಿ ಮತ್ತು ಅಂಗವಿಕಲ ಕೋಟಾದ ಪ್ರಯೋಜನಗಳನ್ನು ತಪ್ಪಾಗಿ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್ (Puja Khedkar) ತಂದೆ ಮತ್ತು ತಾಯಿ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಜಾಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಂದೆ ದಿಲೀಪ್ ಖೇಡ್ಕರ್ ಮತ್ತು ಅವರ ಬಾಡಿಗಾರ್ಡ್, ಲಾರಿ ಚಾಲಕನನ್ನು ಕಿಡ್ನ್ಯಾಪ್ ಮಾಡಿ, ತಮ್ಮ ಪುಣೆ ನಿವಾಸದಲ್ಲಿ ಬಚ್ಚಿಟ್ಟಿರುವ ವಿಷಯ ಇದೀಗ ಪೊಲೀಸರಿಗೆ ಲಭಿಸಿದೆ. ಇದಕ್ಕೆ ಕಾರಣ, ತಮ್ಮ ಐಷಾರಾಮಿ ಎಸ್‌ಯುವಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಹಿನ್ನೆಲೆ, ವಾಹನ ಸಂಪೂರ್ಣ ಜಖಂಗೊಂಡಿದೆ. ಕಾರಿಗೆ ಉಂಟಾದ ಹಾನಿಗೆ ಪರಿಹಾರ ಕೊಡುವಂತೆ ಅಮಾಯಕನನ್ನು ಪೂಜಾ ತಂದೆ ಅಪಹರಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಪೊಲೀಸರ ಪ್ರಕಾರ, ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಖಾಕಿ ಪೂಜಾ ಖೇಡ್ಕರ್ ತಂದೆಗೆ ನೋಟಿಸ್ ನೀಡಲಾಗಿದೆ. ಆದರೆ, ಅವರ ಪತ್ನಿ ಮನೋರಮಾ ಮಾತ್ರ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿಡ್ನ್ಯಾಪ್ ಆದ ಲಾರಿ ಚಾಲಕನನ್ನು ಪ್ರಹ್ಲಾದ್ ಕುಮಾರ್ ಎಂದು ಗುರುತಿಸಲಾಗಿದೆ. ಈತನನ್ನು ಖೇಡ್ಕರ್ ಮನೆಯಿಂದ ರಕ್ಷಿಸಲು ಹೋದ ಖಾಕಿ ಮೇಲೆ ಮನೋರಮಾ ತಮ್ಮ ಮನೆಯಲ್ಲಿದ್ದ ಸಾಕು ನಾಯಿಗಳನ್ನು ದಾಳಿ ಮಾಡಲು ಬಿಟ್ಟಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮುಂಬೈನ ಐರೋಲಿಯಲ್ಲಿ ಖೇಡ್ಕರ್ ಮತ್ತು ಆತನ ಬಾಡಿಗಾರ್ಡ್ ಪ್ರಫುಲ್ ಸಲುಂಖೆ, ತಮ್ಮ ಲ್ಯಾಂಡ್ ಕ್ರೂಸರ್ ಕಾರಿಗೆ ಡಿಕ್ಕಿ ಹೊಡೆದ ಸಿಮೆಂಟ್ ಮಿಕ್ಸರ್ ಲಾರಿಯ ಚಾಲಕನನ್ನು 2 ಕೋಟಿ ರೂ. ಕೊಡುವಂತೆ ಬೆದರಿಸಿದರು. ಇದನ್ನು ಕೊಡಲು ಸಾಧ್ಯವಾಗದ ಆತನನ್ನು ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಹೋದರು ಎಂದು ತಿಳಿಸಿದ್ದಾರೆ.
ಲಾರಿ ಚಾಲಕ ಕುಮಾರ್ ಕಾಣೆಯಾಗಿದ್ದಾರೆ ಎಂದು ಟ್ರಕ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧಾರದ ಮೇಲೆ ಖೇಡ್ಕರ್ ನಿವಾಸಕ್ಕೆ ತೆರಳಿದ ಪೊಲೀಸರಿಗೆ, ಆರೋಪಿ ಪತ್ನಿಯ ಅನುಚಿತವಾಗಿ ವರ್ತನೆ ಕೆರಳಿಸಿದೆ. ಪ್ರಸ್ತುತ, ಪ್ರಕರಣದ ತನಿಖೆ ಮುಂದುವರೆದಿದ್ದು, ವಿಚಾರಣೆಗೆ ಖೇಡ್ಕರ್ ದಂಪತಿ ಆಗಮನಕ್ಕೆ ಪೊಲೀಸರು ಕಾಯುತ್ತಿದ್ದಾರೆ,(ಏಜೆನ್ಸೀಸ್).