ಅಂದೇ ನಾನು ಸತ್ತುಹೋಗಬೇಕು ಅನಿಸಿತ್ತು! ಅವರಿಗೆಲ್ಲ ಭಾವನೆ, ಹೃದಯವೇ ಇಲ್ವಾ? ನಟಿ ಮೀನಾ ಬಿಚ್ಚುನುಡಿ | Actress Meena

ವಿಜಯವಾಣಿ (75)
Published on

Actress Meena: ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಹುಭಾಷಾ ತಾರೆ ಮೀನಾ, ದಕ್ಷಿಣ ಭಾರತದ ಹಲವಾರು ಸೂಪರ್​ಹಿಟ್​, ಬ್ಲಾಕ್​ಬಸ್ಟರ್​ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಪ್ರಸ್ತುತ, ಚಿತ್ರರಂಗದಿಂದ ದೂರ ಸರಿದಿರುವ ಮೀನಾ, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

'ಜಯಮ್ಮು ನಿಶ್ಚಯಮ್ಮು ರಾ' ಎಂಬ ಟಾಕ್ ಶೋ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಕೆಲವು ಘಟನೆಗಳನ್ನು ನೆನೆದು ಭಾವುಕರಾದ ಮೀನಾ, ಮೂರು ವರ್ಷಗಳ ಹಿಂದೆ ನನ್ನ ಪತಿ ವಿದ್ಯಾ ಸಾಗರ್ ಅವರನ್ನು ಕಳೆದುಕೊಂಡೆ. 2022ರಲ್ಲಿ ಶ್ವಾಸಕೋಶದ ಸೋಂಕಿನಿಂದಾಗಿ ಪತಿ ನಿಧರಾದರು. ಗಂಡ ಇನ್ನಿಲ್ಲ ಎಂಬ ವಿಷಯವನ್ನು ಅರಗಿಸಿಕೊಳ್ಳಲು ನನ್ನಿಂದ ಸಾಧ್ಯವಾಗದ ಸಮಯಕ್ಕೆ ನನ್ನ ಎರಡನೇ ವಿವಾಹದ ಬಗ್ಗೆ ಕೇಳಿಬಂದ ವದಂತಿಗಳು ನನ್ನನ್ನು ತೀರ ದುಃಖಕ್ಕೆ ದೂಡಿತು ಎಂದಿದ್ದಾರೆ.

"ನಾನು ಎರಡನೇ ಮದುವೆಗೆ ರೆಡಿಯಾಗಿದ್ದೇನೆ ಎಂಬ ಆಧಾರರಹಿತ ವದಂತಿಗಳಿಂದ ಉಂಟಾದ ದುಃಖ ಹೇಳತೀರದು. ಇದನ್ನೆಲ್ಲ ಕೇಳುವ ಬದಲಿಗೆ ಸಾವು ಬಂದಿದ್ದರೆ, ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ಅನಿಸಿತ್ತು. ಇತರ ನಟರೊಂದಿಗೆ ನನ್ನ 2ನೇ ಮದುವೆ ಸುದ್ದಿಗಳು, ಊಹಾಪೋಹಗಳು ನನ್ನ ಮತ್ತು ಕುಟುಂಬದವರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇದರಿಂದ ತುಂಬ ಕುಗ್ಗಿ ಹೋಗಿದ್ದೆ" ಎಂದು ಹೇಳಿದ್ದಾರೆ.

"ಈ ವದಂತಿ ಹಬ್ಬಿಸುವವರಿಗೆ ಹೃದಯ ಅಥವಾ ಕುಟುಂಬವೇ ಇಲ್ವಾ? ಎಂಬ ಯೋಚನೆ ನನ್ನನ್ನು ಕಾಡಿತ್ತು. ಪತಿಯ ಅಗಲಿಕೆಯ ನೋವಿನಿಂದ ಹೊರಬರಲು ಸುಮಾರು ಎರಡು ವರ್ಷಗಳ ಕಾಲ ಬೇಕಾಯಿತು. ನನ್ನ ಸ್ನೇಹಿತರು ನನ್ನನ್ನು ಆ ದುಃಖದಿಂದ ಹೊರತಂದರು. ಇಂತಹ ಒಳ್ಳೆಯ ಸ್ನೇಹಿತರನ್ನು ಪಡೆದಿರುವುದು ನನ್ನ ಪುಣ್ಯ ಹಾಗೂ ಅದೃಷ್ಟ" ಎಂದು ಮೀನಾ ಭಾವುಕರಾದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net