ಆ ರೀತಿ ಎಲ್ಲಾದರೂ ಬರೆಯಲಾಗಿದ್ಯಾ? ಪಾಕ್​ ನಾಟಕೀಯ ಹೇಳಿಕೆಗೆ ಬಿಸಿಸಿಐ ಟಕ್ಕರ್​ | IND vs PAK

ವಿಜಯವಾಣಿ (74)
Published on

IND vs PAK: ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನ ಮೇಲೆ ಪ್ರಾಬಲ್ಯ ಮೆರೆದಿದೆ. ಭಾನುವಾರ (ಸೆ.14) ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ, ನೀರು ಕುಡಿದಂತೆ ಪಾಕ್​ ತಂಡವನ್ನು ಮಣಿಸಿತು. ಐಸಿಸಿ ನಿಯಮಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಿಂದ ಕಣಕ್ಕಿಳಿದ ಟೀಮ್ ಇಂಡಿಯಾ, ಕೇವಲ 15.5 ಓವರ್‌ಗಳಲ್ಲಿ ಪಾಕ್​ ನೀಡಿದ್ದ 128 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು. ಇನ್ನು ಪಂದ್ಯ ಗೆದ್ದ ಬಳಿಕ ಹಿಂತಿರುಗದೆ ಪೆವಿಲಿಯನ್​ನತ್ತ ಸಾಗಿದ ಸೂರ್ಯಕುಮಾರ್​ ಯಾದವ್​, ಎದುರಾಳಿ ತಂಡದ ಆಟಗಾರರೊಂದಿಗೆ ಕೈಮೀಲಾಯಿಸಲಿಲ್ಲ. ಸದ್ಯ ಇದೇ ಪಾಕ್ ಹೊಸ ಡ್ರಾಮಾಗೆ ಕಾರಣವಾಗಿದೆ.

ಸೂರ್ಯಕುಮಾರ್ ಯಾದವ್ ಪಡೆ, ಪಂದ್ಯ ಗೆದ್ದ ಕೂಡಲೇ ನೇರವಾಗಿ ಡ್ರೆಸ್ಸಿಂಗ್ ರೂಮ್​ಗೆ ಹೋಯಿತು. ಪಾಕಿಸ್ತಾನಿ ಆಟಗಾರರು ಹ್ಯಾಂಡ್‌ಶೇಕ್‌ಗಾಗಿ ಕ್ರೀಡಾಂಗಣದಲ್ಲಿ ಕಾಯುತ್ತಿದ್ದರೂ ಕೂಡ ಭಾರತೀಯ ಆಟಗಾರರು ಅವರನ್ನು ನಿರ್ಲಕ್ಷಿಸಿ, ತಮ್ಮ ನಿಲುವಿಗೆ ಬದ್ಧರಾದರು. ಅದಕ್ಕೆ ಕಾರಣ ಏನೂ ಅನ್ನೋದು ಎಲ್ಲ ಭಾರತೀಯರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಇದರಿಂದ ಪಾಕಿಸ್ತಾನಕ್ಕೆ ಮೈದಾನದಲ್ಲಿ ಭಾರೀ ಮುಖಭಂಗವಾಯಿತು. ಇದನ್ನೇ ಮುಂದಿಟ್ಟು ಭಾರತ ವಿರುದ್ಧ ಕಿಡಿಕಾರಿರುವ ಕೆಲವು ಪಾಕ್​ ಮಾಜಿ ಆಟಗಾರರು, ಬಿಸಿಸಿಐ ಅನ್ನು ಟೀಕಿಸಿದ್ದಾರೆ.

ಹಸ್ತಲಾಘವ ಮಾಡಲೇಬೇಕೇ?

ವರದಿ ಪ್ರಕಾರ, ಬಿಸಿಸಿಐನಿಂದ ಅನುಮತಿ ಪಡೆದ ನಂತರವೇ ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರಲು ಟೀಮ್ ಇಂಡಿಯಾ ನಿರ್ಧರಿಸಿತು. ಪಂದ್ಯದ ಟಾಸ್​ ಹಾಗೂ ಗೆಲುವು ಸಾಧಿಸಿದ ಸಮಯದಲ್ಲಿ ಎದುರಾಳಿ ತಂಡದ ಆಟಗಾರರೊಂದಿಗೆ ಸೂರ್ಯಕುಮಾರ್ ಪಡೆ ಹಸ್ತಲಾಘವ ಮಾಡಲಿಲ್ಲ. ಆದಾಗ್ಯೂ, ಭಾರತೀಯ ಆಟಗಾರರು ತಮ್ಮೊಂದಿಗೆ ಹಸ್ತಲಾಘವ ಮಾಡದಿರುವ ಬಗ್ಗೆ ಪಾಕ್ ತೀವ್ರ ಅಸಮಾಧಾನ ಹೊರಹಾಕಿದೆ.

ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಡವಳಿಕೆಯ ವಿರುದ್ಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ದೂರು ನೀಡಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಕ್ರಿಕೆಟ್​ ಮೂಲಗಳು ತಿಳಿಸಿವೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಪಾಕ್​ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕಡ್ಡಾಯವೇನಲ್ಲ

"ನಿಮಗೆ ಯಾವುದೇ ಸಂದೇಹಗಳಿದ್ದರೆ, ಮೊದಲು ನಿಯಮ ಪುಸ್ತಕವನ್ನು ಒಮ್ಮೆ ಓದಿ. ಅದರಲ್ಲಿ ಎಲ್ಲಿಯೂ ಎದುರಾಳಿ ತಂಡದ ಆಟಗಾರರೊಂದಿಗೆ ಕೈಮೀಲಾಯಿಸಲೇಬೇಕು ಎಂದು ಕಡ್ಡಾಯವಾಗಿ ಉಲ್ಲೇಖಿಸಿಲ್ಲ ಅಥವಾ ತಿಳಿಸಿಲ್ಲ. ಅದು ಕೇವಲ ಸಭ್ಯ ಸನ್ನೆ ಅಷ್ಟೇ. ಕೈಕುಲುಕಬೇಕೇ ಅಥವಾ ಬೇಡವೇ ಎಂಬುದು ಅವರವರ/ ಆಯಾ ತಂಡಗಳ ಸ್ವಂತ ನಿರ್ಧಾರಗಳಿಗೆ ಬಿಟ್ಟದ್ದು. ಹಸ್ತಲಾಘವ ಮಾಡದಿರುವುದು ದೊಡ್ಡ ಅಪರಾಧವಲ್ಲ" ಎಂದು ಖಡಕ್ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net