

ತಮಿಳುನಾಡು: 2010ರಲ್ಲಿ ತಮಿಳು ಚಿತ್ರರಂಗದ ಸೂಪರ್ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ 'ಎಂಥಿರನ್' ಸಿನಿಮಾ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜತೆಗೆ ಬಾಕ್ಸ್ ಆಫೀಸ್ನಲ್ಲಿ ಸೂಪರ್ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಬಹುತೇಕ ಹಾಡುಗಳನ್ನು ಕಂಪೋಸ್ ಮಾಡಿದ್ದ ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್ ಅವರು, ಇಡೀ ಜಗತ್ತಿನಲ್ಲಿ ತಮ್ಮ ಹೆಸರನ್ನು ಅಭಿಮಾನಿಗಳ ಮನದಲ್ಲಿ ಹಸಿರಾಗಿಸಿದ್ದ ಖ್ಯಾತ ಪಾಪ್ ಸಿಂಗರ್ ಅವರಿಂದ ಒಂದು ಹಾಡನ್ನು ಹಾಡಿಸಲು ಯೋಜನೆ ಹಾಕಿಕೊಂಡಿದ್ದರಂತೆ. ಆದ್ರೆ. ಅದು ಅಂದುಕೊಂಡಂತೆ ನಡೆಯಲಿಲ್ಲ ಎಂದು ಹೇಳಿದ್ದಾರೆ. ಅಸಲಿಗೆ ಏಕೆ ಆಗಲಿಲ್ಲ ಎಂಬುದರ ಹಿಂದಿರುವ ಕಾರಣವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
2010ರಲ್ಲಿ ರಜನಿಕಾಂತ್ ಅವರ 'ಎಂಥಿರನ್' ಸಿನಿಮಾದ ಒಂದು ಹಾಡನ್ನು ವಿಶ್ವದ ಪ್ರಸಿದ್ಧ ಪಾಪ್ ಸಿಂಗರ್ ಮೈಕಲ್ ಜ್ಯಾಕ್ಸೆನ್ ಅವರಿಂದ ಹಾಡಿಸಲು ಯೋಜನೆ ಹಾಕಿಕೊಂಡಿದ್ದೆ. ಈ ಕುರಿತು ಅವರೊಂದಿಗೆ ಮಾತುಕತೆ ಕೂಡ ಮಾಡಿದ್ದೆ. ಆದ್ರೆ, ದುರಾದೃಷ್ಟವಶಾತ್ ಅದೇ ಸಮಯದಲ್ಲಿ ಅವರು ಅನಾರೋಗ್ಯದಿಂದ ನಿಧನರಾದರು. ಮೈಕಲ್ರನ್ನು ಭೇಟಿ ಮಾಡಿದ ಕ್ಷಣವೇ ರೋಮಾಂಚಕ! ಆ ಘಟನೆಯನ್ನು ವಿವರಿಸಲು ನಿಜಕ್ಕೂ ಕಷ್ಟಸಾಧ್ಯ. ಆದರೂ ನಿಮ್ಮ ಮುಂದೆ ಹೇಳುತ್ತೇನೆ ಎಂದು ರೆಹಮಾನ್ ವಿವರಿಸಿದರು.
"2009ರಲ್ಲಿ ನಾನು ಆಸ್ಕರ್ಗೆ ನಾಮಿನೇಟ್ ಆಗಿದ್ದೆ. ಈ ವೇಳೆ ಮೈಕಲ್ ಜ್ಯಾಕ್ಸನ್ ಅವರ ಆಪ್ತರೊಬ್ಬರನ್ನು ನಾನು ಭೇಟಿಯಾಗಿ, ಮಾತನಾಡಿಸಿದೆ. ಆಗ ನನಗೆ ಜ್ಯಾಕ್ಸನ್ರನ್ನು ನೋಡುವ ತವಕವಿತ್ತು. ಅವರ ಸ್ನೇಹಿತರ ಬಳಿ ಮನವಿ ಮಾಡಿದೆ. ಅದಕ್ಕೆ ಅವರಿದ್ದವರು, ಮೇಲ್ ಕಳಿಸುತ್ತೇನೆ ನೋಡೋಣ ಎಂದರು. ಕಳಿಸಿದ ಮೇಲ್ಗೆ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಬೇಸರವಾಯಿತು. ಇರಲಿ ಬಿಡಿ ಎಂದು ಹೇಳಿ, ಸುಮ್ಮನಾಗಿದ್ದೆ" ಎಂದು ಹೇಳಿದರು.
"ಆಸ್ಕರ್ಗೆ ಹೋಗುವ ಮುನ್ನ ಮೈಕಲ್ ಅವರಿಂದ ಭೇಟಿಗೆ ಆಫರ್ ಒದಗಿ ಬಂದಿತು. ಆದರೆ, ನಾನು ಅದಕ್ಕೆ ಒಪ್ಪಲಿಲ್ಲ. ಆಸ್ಕರ್ ಪ್ರಶಸ್ತಿ ಗೆದ್ದರೆ, ಅವರನ್ನು ಭೇಟಿಯಾಗುತ್ತೇನೆ. ಇಲ್ಲವಾದಲ್ಲಿ ಭಾರತಕ್ಕೆ ವಾಪಾಸ್ ಆಗುತ್ತೇನೆ ಎಂದು ತಿಳಿಸಿದ್ದೆ. ನನ್ನ ಮನಸ್ಸಿನಲ್ಲಿ ನಾನು ಗೆದ್ದು ಬರುವೆ ಎಂಬುದೇ ಇತ್ತು. ಅದರಂತೆಯೇ ಪ್ರಶಸ್ತಿ ನನ್ನ ಪಾಲಾಯಿತು. ಬಳಿಕ ಜ್ಯಾಕ್ಸನ್ ಅವರನ್ನು ನೇರವಾಗಿ ಮಾತನಾಡಿಸಿ, 'ಸ್ಲಮ್ಡ್ಯಾಂಗ್ ಮಿಲಿಯನೇರ್' ಚಿತ್ರದ ಕುರಿತು ಒಂದಷ್ಟು ಚರ್ಚೆ ನಡೆಸಿದೆವು" ಎಂದರು.
"ಅಂದು ಅವರನ್ನು ಭೇಟಿಯಾದ ವಿಷಯವನ್ನು ರಜನಿ ಸಿನಿಮಾದ ನಿರ್ದೇಶಕರಿಗೆ ತಿಳಿಸಿದೆ. ಆಗ ಅವರು ಜ್ಯಾಕ್ಸನ್ ಅವರಿಂದ ಒಂದು ಹಾಡನ್ನು ಹಾಡಿಸಬಹುದೇ? ಪ್ರಯತ್ನಿಸಿ ಎಂದು ಕೇಳಿದರು. ಇದರ ಬಗ್ಗೆ ಅವರೊಂದಿಗೆ ಚರ್ಚಿಸಿದಾಗ ಖಂಡಿತ ಮಾಡೋಣ ಎಂದಿದ್ದರು. ಅದರೆ, ಅಂದು ಅವರ ಆರೋಗ್ಯ ಸರಿಯಿರಲಿಲ್ಲ. ಅದೇ ವರ್ಷ ಮೈಕಲ್ ಜ್ಯಾಕ್ಸನ್ ನಮ್ಮನ್ನೆಲ್ಲಾ ಅಗಲಿದರು. ಹೀಗಾಗಿ ಅದು ಸಾಧ್ಯವಾಗಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು,(ಏಜೆನ್ಸೀಸ್).