ದೂದಿಹಳ್ಳಿ ಮುರಾರ್ಜಿ ಶಾಲಾ ಬಾಲಕಿ ಅರ್ಚನಾ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ಬಯಲಾಯ್ತು ಸತ್ಯ

Dudihalli Suicide Case
Published on

ಹಾವೇರಿ/ ಹಿರೇಕೆರೂರ: ಹಿರೇಕೆರೂರ ತಾಲೂಕು ದೂದಿಹಳ್ಳಿ ಗ್ರಾಮದ ಮುರಾರ್ಜಿ ವಸತಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯ ಹಿಂದಿ ಶಿಕ್ಷಕನ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಶಂಕೆ ಮೂಡಿದ್ದು, ಇದನ್ನು ಮುಚ್ಚಿಹಾಕುವ ಹುನ್ನಾರವೂ ನಡೆದಿತ್ತೆಂಬ ಅಂಶ ಬಹಿರಂಗವಾಗಿದೆ. ಹಿರೇಕೆರೂರ ತಾಲೂಕಿನ ಆಲದಕಟ್ಟಿ ಗ್ರಾಮದ ಅರ್ಚನಾ ಬಸನಗೌಡ ಗೌಡಣ್ಣನವರ(15) ಮೃತಪಟ್ಟ ಬಾಲಕಿ. ಜು.2ರಂದು ಬಾಲಕಿ ನೇಣು ಬಿಗಿದುಕೊಂಡು ಅಸುನೀಗಿದ್ದು, ಅಂದೇ ಕುಟುಂಬದವರು, ಶಿಕ್ಷಕರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ, ಅರ್ಚನಾ ಬರೆದಿಟ್ಟ ಡೆತ್‌ನೋಟ್ ವೈರಲ್‌ನಿಂದಾಗಿ ಅಸಲಿ ಸತ್ಯ ಬಹಿರಂಗಗೊಂಡಿದೆ. ಬಾಳು ಬೆಳಗಬೇಕಿದ್ದ ಶಿಕ್ಷಕರೇ ಮುದ್ದಾದ ಬಾಲಕಿಗೆ ಮುಳುವಾದರಾ ಎಂಬ ಮಾತು ಕೇಳಿಬರುತ್ತಿವೆ.
ಅರ್ಚನಾ ಡೆತ್ ನೋಟಿನಲ್ಲಿ ಎಲ್ಲ ವಿಷಯವನ್ನು ಬರೆದಿಟ್ಟು ಕೊನೆಗೆ ತನಗೆ ನೋವು ನೀಡಿದ ಸಾವಿಗೆ ಕಾರಣರಾದ ರೆಯಾ ಮತ್ತು ಆಕೆಯ ತಾಯಿಗೆ ನೀವು ಮಾಡಿದ ತಪ್ಪಿಗೆ ಭಾರಿ ಬೆಲೆ ತೆರಬಾಕಾಗುತ್ತದೆ ಎಂದು ನಮೂದಿಸಿದ್ದಾಳೆ. ತನ್ನನ್ನು ಸುಡುವ ಬದಲು ಮಣ್ಣಿನಲ್ಲಿ ಹೂಳಬೇಕು ಎಂದು ಬರೆದಿರುವುದು ನಾನಾ ಸಂಶಯಗಳಿಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಅನಾರೋಗ್ಯದಿಂದ ಬೇಸತ್ತು ಸಾವನ್ನಪ್ಪಿದ್ದಾಳೆ ಎಂದರೂ, ಡೆತ್‌ನೋಟ್ ರಹಸ್ಯದಲ್ಲಿ ಸಾವಿಗೆ ಬೇರೇನೋ ಕಾರಣಗಳಿವೆ ಎಂಬುದು ಗೋಚರವಾಗುತ್ತಿದೆ.
ಡೆತ್‌ನೋಟ್ ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮದ ಕೆಲ ಮುಖಂಡರು ಪಾಲಕರಿಗೆ ಹೆದರಿಸಿ, ರಾಜಿ ಪಂಚಾಯಿತಿ ಮಾಡಿಸಲು ದೂದಿಹಳ್ಳಿ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಾಂಶುಪಾಲ ಈರಾನಾಯ್ಕ ಎದುರು ಸಭೆ ನಡೆಸಿ 10 ಲಕ್ಷಕ್ಕೆ ಡಿಮಾಂಡ್ ಮಾಡಿದ್ದಾರೆ. ಕೊನೆಗೆ ಆರೀಫವುಲ್ಲಾಸಾಬ್ 1 ಲಕ್ಷ ರೂ. ಕೊಟ್ಟು ಸುಮ್ಮನಾಗಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರಿಗೆ ವಿಷಯ ತಿಳಿಸದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ ತಪ್ಪಿತಸ್ಥರೆಲ್ಲ ಮೇಲೂ ಕ್ರಮ ಜರುಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಏನಿದು ಪ್ರಕರಣ ?
ಅರ್ಚನಾ ಶಾಲೆಯಲ್ಲಿ ಆಟ, ಪಾಠ, ಎಲ್ಲದರಲ್ಲೂ ಮೂಂಚೂಣಿಯಲ್ಲಿದ್ದಳು. ಇದೇ ಇವಳ ಬಾಳಿಗೆ ಮುಳುವಾಗಿದೆ ಎನ್ನಲಾಗಿದೆ. ಈ ಶಾಲೆಯ ಹಿಂದಿ ಶಿಕ್ಷಕ ಆರೀಫವುಲ್ಲಾಸಾಬ್ ಕುಟುಂಬಸಮೇತ ವಸತಿ ಶಾಲೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದಾರೆ. ಇವರ ಪುತ್ರಿ ರೆಯಾ ಹಾಗೂ ಅರ್ಚನಾ ಇಬ್ಬರೂ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ರೆಯಾ ಓದಿನಲ್ಲಿ ಸ್ವಲ್ಪಮಟ್ಟಿಗೆ ಹಿಂದೆ ಇದ್ದಳು. ಇದನ್ನರಿತ ಈಕೆಯ ತಾಯಿ ಅರ್ಚನಾಳ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದರು. ಮನೆಗೆ ಬಂದು ರೆಯಾಳ ಓದಿಗೆ ಸಹಾಯ ಮಾಡುವಂತೆ ಪದೇಪದೆ ವಸತಿಗೃಹಕ್ಕೆ ಕರೆಸಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತ ಅರ್ಚನಾ ಅನಾರೋಗ್ಯದ ನೆಪವೊಡ್ಡಿ, ಜೂ.29ರಂದು ತಮ್ಮ ಪಾಲಕರನ್ನು ಕರೆಸಿಕೊಂಡು ಊರಿಗೆ ಹೋಗಿದ್ದಾಳೆ. ಜು.2ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಪತ್ರದಲ್ಲಿ ಏನಿದೆ ?
ಅಜ್ಜ, ಅಜ್ಜಿ, ಅಮ್ಮ, ಅಪ್ಪಾಜಿ, ಅಕ್ಕ ನನ್ನನ್ನು ಕ್ಷಮಿಸಿ. ಯಾಕೆಂದರೆ ನಾನು ನಿಮ್ಮನ್ನು ದೂರ ಹೋಗಿದ್ದಕ್ಕೆ. ನಾನು ಯಾಕೆ ಈ ನಿರ್ಧಾರ ಮಾಡಿದೆ ಎಂದರೆ, ನನಗೆ ನಿಜವಾಗಿಯೂ ಬದುಕಲು ಇಷ್ಟವಿಲ್ಲ. ಎಂಥ ಖುಷಿ ಇದ್ದರೂ ಇಲ್ಲ. ಹಾಗಂಥ ನನಗೆ ಓದುವುದರಿಂದ ಸಮಸ್ಯೆ ಏನಿಲ್ಲ. ನಾನು ಚೆನ್ನಾಗಿ ಓದುತ್ತೇನೆ. ಆದರೆ, ನಾನು ಹುಟ್ಟಿದಾಗಿನಿಂದಲೂ ನಿಮಗೆ ಯಾರಿಗೂ ಒಳ್ಳೆಯದಾಗಿಲ್ಲ. ನಾನು ದುರಾದೃಷ್ಟವಂತೆ. ಹಾಗಾಗಿ, ನಾನು ನಿಮ್ಮನ್ನು ಬಿಟ್ಟು ಹೊರಟಿನಿ. ಅಪ್ಪಾಜಿ ಈಗಾದರೂ ನೀವು ಕುಡಿಯುವುದು ಬಿಡಿ. ಅಪ್ಪ, ಅಮ್ಮ ನಾನು ಸತ್ತ ಮೇಲೆ ನೀವು ಅಳಬೇಡಿ. ನನ್ನ ಮರೆತುಬಿಡಿ. ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಒಬ್ಬಳೇ ಮಗಳು. ನನಗೆ ಅಂತಾ ನೀವು ಎಷ್ಟು ದುಡ್ಡು ಖರ್ಚು ಮಾಡುತ್ತಿದ್ದೀರಿ. ನನಗೆ ಆಶೀರ್ವಾದ ಮಾಡಿ. ಮತ್ತೆ ಈ ಭೂಮಿ ಮೇಲೆ ನಾನು ಹುಟ್ಟಬಾರದು. ನಾನು ಸತ್ತಮೇಲೆ ನನ್ನನ್ನು ಸುಡಬೇಡಿ ಎಂದು ಡೆತ್‌ನೋಟ್‌ನಲ್ಲಿ ಅರ್ಚನಾ ಬರೆದುಕೊಂಡಿದ್ದಾಳೆ.
ಮುಖ್ಯವಾಗಿ ಕೊನೆಯ ಸಾಲುಗಳಲ್ಲಿ, ‘ರೆಯಾ ನಾ ನಿನ್ನ ಬಿಡಲ್ಲ. ನೀನು ನಿಮ್ಮ ಮಮ್ಮಿ ಕೊಟ್ಟ ಕಷ್ಟಕ್ಕೆ ಬೆಲೆ ತೆರುತ್ತೀರಿ..’ ಎಂದು ನೋವಿನಿಂದ ಬರೆದಿದ್ದಾಳೆ ಅರ್ಚನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net