

ಚೆನ್ನೈ: ಚಿತ್ರರಂಗದಲ್ಲಿ ಇದೀಗ ಮತ್ತೊಮ್ಮೆ ಡಿವೋರ್ಸ್ ಸರಣಿ ಮುಂದುವರೆದಿದ್ದು, ಕಾಲಿವುಡ್ನಲ್ಲೇ ಹೆಚ್ಚು ಎಂದರೆ ತಪ್ಪಾಗಲಾರದು. ಕೆಲ ದಿನಗಳ ಹಿಂದೆ ವಿಚ್ಛೇದನ ಘೋಷಿಸಿದ್ದ ಜಯಂ ರವಿ ಬಳಿಕ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ (AR Rahman) ಅವರ ಪತ್ನಿ ಸಾಯಿರಾ (Saira) ಅವರು ಡಿವೋರ್ಸ್ (Divorce) ಘೋಷಣೆ ಮಾಡಿದ್ದು, ಈ ವಿಚಾರ ಚಿತ್ರರಂಗದಲ್ಲೇ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ.
ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮದುವೆಯಾಗಿ 29 ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರವನ್ನು ಸೃಷ್ಟಿಸಿವೆ ಎಂದು ವಂದನಾ ಶಾ ತಿಳಿಸಿದ್ದಾರೆ.
1995ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯು ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ಧಾನೆ. ಅವರ ಹಿರಿಯ ಮಗಳಿಗೆ ಈಗಾಗಲೇ ಮದುವೆಯಾಗಿದ್ದು, ಈ ಸಮಯದಲ್ಲಿ ರೆಹಮಾನ್ ದಂಪತೊ ವಿಚ್ಛೇದನ ಪಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಇದೀಗ ತಮ್ಮ ಪೋಷಕರು ವಿಚ್ಛೇದನ ಪಡೆಯುತ್ತಿರುವ ಬಗ್ಗೆ ರೆಹಮಾನ್- ಸಾಯಿರಾ (AR Rahman-Saira) ದಂಪತಿ ಮಕ್ಕಳಾದ ಖತೀಜಾ, ರಹೀಮಾ ಮತ್ತು ಅಮೀನ್ ತಮ್ಮ ಪೋಷಕರ ವಿಚ್ಛೇದನದ ಕುರಿತು ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ದಂಪತಿಯ ಹಿರಿಯ ಪುತ್ರಿಯಾದ ಖತೀಜಾ, ಈ ವಿಷಯವನ್ನು ಅತ್ಯಂತ ಗೌಪ್ಯತೆ ಮತ್ತು ಗೌರವದಿಂದ ಪರಿಗಣಿಸಬಹುದಾದರೆ ನಾನು ಅದನ್ನು ಬಹಳವಾಗಿ ಪ್ರಶಂಸಿಸುತ್ತೇನೆ. ನಿಮ್ಮ ಪರಿಗಣನೆಗೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.
ದಂಪತಿಯ ಎರಡನೇ ಪುತ್ರಿ ರಹೀಮಾ, ಅವರಿಬ್ಬರು ವಿಚ್ಛೇದನ ಪಡೆಯುತ್ತಿರುವುದು ವೈಯಕ್ತಿಕ ನಿರ್ಧಾರವಾಗಿದ್ದು, ರೆಹಮಾನ್ ಮತ್ತು ಸೈರಾ ಇಬ್ಬರೂ ವಯಸ್ಕರಾಗಿರುವುದರಿಂದ ತಮಗಾಗಿ ಉತ್ತಮ ಆಯ್ಕೆಗಳನ್ನು ಮಾಡಲು ಸಮರ್ಥರಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ಮತ್ತು ಗಾಯಕನಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದಂಪತಿಯ ಕಿರಿಯ ಪುತ್ರ ಅಮೀನ್, ತನ್ನ ತಾಯಿ ಮತ್ತು ತಂದೆಯ ಬೇರ್ಪಡುವಿಕೆಯ ಸುದ್ದಿ ಅವರಿಗೆ ಬಹಳ ದುಃಖ ತಂದಿದೆ. ಈ ಸಂದರ್ಭದಲ್ಲಿ, ತನಗೆ ಮತ್ತು ತನ್ನ ಕುಟುಂಬಕ್ಕೆ ಅಗತ್ಯವಿರುವ ಖಾಸಗಿ ಸಮಯವನ್ನು ನೀಡುವಂತೆ ವಿನಮ್ರವಾಗಿ ವಿನಂತಿಸಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬರಲು ತಮಗೆ ಸಮಯ ಬೇಕು ಎಂದು ಪೋಸ್ಟ್ ಮಾಡಿದ್ದಾರೆ.
ರೆಹಮಾನ್ (AR Rahman) ಕೂಡ ಡಿವೋರ್ಸ್ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್ (AR Rahman) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.