ಬೆಳ್ಳಿಪರದೆಯ ಮೇಲೆ 'ಅಪ್ಪು' ಕಂಡು ಫ್ಯಾನ್ಸ್​ ಭಾವುಕ; ರೀ-ರಿಲೀಸ್​ ಚಿತ್ರಕ್ಕೆ ಹೊಸ ಮೆರುಗು ಕೊಟ್ಟ ಸಿನಿಪ್ರಿಯರು | Appu

ವಿಜಯವಾಣಿ - 2025-03-14T155854.428
Published on

Appu Re-Release: ಕನ್ನಡ ಚಿತ್ರರಂಗದ ಪವರ್​ ಸ್ಟಾರ್​, ನಟ ಪುನೀತ್ ರಾಜ್​ಕುಮಾರ್​ ಹೀರೋ ಆಗಿ ನಟಿಸಿದ ಮೊಟ್ಟಮೊದಲ ಸಿನಿಮಾ ‘ಅಪ್ಪು’ ಇಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರೀ-ರಿಲೀಸ್ ಆಗಿದೆ.

ತಮ್ಮ ಸರಳತೆ, ಸಜ್ಜನಿಕೆ, ನಗುಮುಖದ ಸ್ವಭಾವದಿಂದಲೇ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಬೇರೂರಿ ಕುಳಿತಿರುವ ಪುನೀತ್ ರಾಜ್​ಕುಮಾರ್​ರನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ ಅನ್ನೋದಕ್ಕೆ ಇಂದಿನ ಅಪ್ಪು ರೀ-ರಿಲೀಸ್ ಚಿತ್ರವೇ ಜ್ವಲಂತ ಸಾಕ್ಷಿ. ಬ್ಲಾಕ್​ಬಸ್ಟರ್​ ಹಿಟ್​ ಚಿತ್ರವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ನೋಡಿದ ಅಭಿಮಾನಿಗಳು ಮತ್ತು ಸಿನಿಪ್ರಿಯರು ಇದು ಹೊಸ ಚಿತ್ರ ಎಂಬಂತೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು ವಿಶೇಷ.

ಮಾ.14ರ ಬೆಳಗ್ಗಿನ ಮೊದಲ ಪ್ರದರ್ಶನದ ಚಿತ್ರಮಂದಿರಗಳ ಟಿಕೆಟ್​ಗಳು ನಿನ್ನೆಯೇ ಸೋಲ್ಡ್​ ಔಟ್​ ಆಗಿದ್ದು, ಸ್ಟಾರ್​ ನಟನ ಹೊಸ ಸಿನಿಮಾ ನೋಡಲು ಮುಗಿಬೀಳುವ ಅಭಿಮಾನಿಗಳಂತೆ ಪ್ರೇಕ್ಷಕರು ಅಪ್ಪು ರೀ-ರಿಲೀಸ್​ ವೀಕ್ಷಿಸಲು ಆಗಮಿಸಿದ್ದಾರೆ. ಚಿತ್ರದ ಟೈಟಲ್​ ಕಾರ್ಡ್​ ಪ್ರದರ್ಶನವಾಗುತ್ತಿದ್ದಂತೆ ಹೂವು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಪುನೀತ್ ರಾಜ್​ಕುಮಾರ್​ ಫ್ಯಾನ್ಸ್​ ಬಳಗ, ಅಪ್ಪು ಅವರ ಫೋಟೋ ಕಂಡು ಭಾವುಕರಾದರು.

ಬೆಂಗಳೂರಿನ ಸಂತೋಷ್​, ನರ್ತಕಿ, ವೀರೇಶ್​ ಚಿತ್ರಮಂದಿರಗಳು ಸಿನಿಪ್ರಿಯರಿಂದ ತುಂಬಿ ತುಳುಕುತ್ತಿದ್ದು, ಸಂಭ್ರಮ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಮತ್ತೊಂದೆಡೆ, ಅಪ್ಪು ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್​ಗೆ ನಾಯಕಿಯಾಗಿ ಮಿಂಚಿದ ನಟಿ ರಕ್ಷಿತಾ ಪ್ರೇಮ್​ ಕೂಡ ವೀರೇಶ್​ ಚಿತ್ರಮಂದಿರಕ್ಕೆ ಆಗಮಿಸಿ, ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ರಕ್ಷಿತಾ ಸೇರಿದಂತೆ ಇನ್ನೂ ಅನೇಕ ನಟಿಮಣಿಯರು, ಹಿರಿಯ ಕಲಾವಿದರು ಚಿತ್ರ ನೋಡಿದ್ದಾರೆ.

2002ರಲ್ಲಿ ಅಪ್ಪು

ರಾಜ್ಯದ ಬಹುತೇಕ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಪುನೀತ್ ರಾಜ್​ಕುಮಾರ್​ ಅಭಿನಯದ ಅಪ್ಪು 2002ರಲ್ಲಿ ತೆರೆಕಂಡು, ಶತದಿನೋತ್ಸವ ಸಂಭ್ರಮ ಕಂಡಿತ್ತು. ಅಂದು ದೊಡ್ಡ ಮಟ್ಟದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಅಪ್ಪು ಚಿತ್ರ ಶತದಿನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಸಂಭ್ರಮಾಚರಣೆ ಕಾರ್ಯಕ್ರಮದ ವಿಡಿಯೋಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net