ಕಲಿತ ಶಾಲೆಗೆ ಮುಖ್ಯ ಅತಿಥಿಗಳಾಗಿ ಬರುವಂತಹ ಸಾಧನೆ ಮಾಡಿ: ಡಾ. ಶಂಕರೇಗೌಡ

12_HSN_04
Published on

ಹಾಸನ: ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ತಮ್ಮ ಗುರಿ ಸಾಧನೆಗೆ ಸತತ ಪ್ರಯತ್ನ ಪಡಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಬುದ್ಧಿವಂತಿಕೆ, ಸನ್ಮಾರ್ಗದಿಂದ ಸಾಧನೆಯ ದುರ್ಗಮ ಮಾರ್ಗವನ್ನು ಸುಗಮ ಮಾರ್ಗವನ್ನಾಗಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂದು ರಾಜೀವ್ ಡಿಪ್ಲೋಮೊ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರೇಗೌಡ ತಿಳಿಸಿದರು.

ನಗರದ ವಿಜಯ ಶಾಲೆಯಲ್ಲಿ ಈಚೆಗೆ ಆಯೋಜಿಸಲಾಗಿದ್ದ ವಿದ್ಯಾರ್ಥಿ-ಶಿಕ್ಷಕ- ಪೋಷಕ ಸೌಹಾರ್ದ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎದುರಾಗುವ ಯಾವುದೇ ಸವಾಲನ್ನು ಮೆಟ್ಟಿ ನಿಲ್ಲುವ ಧೀಮಂತಿಕೆ ನಮಗಿರಬೇಕು. ಯೋಗ್ಯ ಸ್ನೇಹಿತರನ್ನು ಹೊಂದುವುದು ಮತ್ತು ರೂಢಿಸಿಕೊಳ್ಳುವ ಕೌಶಲಗಳು ನಮ್ಮನ್ನು ಸಾಧನೆಯತ್ತ ಮುನ್ನಡೆಸುವಲ್ಲಿ ಸಹಕಾರಿಯಾಗುತ್ತವೆ. ನೀವು ಓದಿದ ಶಾಲೆಗೆ ಮುಂದೆ ಮುಖ್ಯ ಅತಿಥಿಯಾಗಿ ಬರಬೇಕು. ಕೀಳರಿಮೆಯಿಂದ ಹೊರಬರಬೇಕು. ಮುಂದೆ ಜೀವನದಲ್ಲಿ ಯಾವ ಉದ್ಯೋಗವನ್ನು ಮಾಡಿದರೂ ಅದರಲ್ಲಿ ಪ್ರಾಮಾಣಿಕರಾಗಿರಿ ಎಂದು ಕಿವಿಮಾತು ಹೇಳಿದರು.

ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ಮಾತನಾಡಿ, ಶಾಲೆ, ಆಡಳಿತ ಮಂಡಳಿ ಹಾಗೂ ಶಿಕ್ಷಕರ ಮೇಲೆ ನಂಬಿಕೆ ಇಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ತನ್ಮೂಲಕ ವಿದ್ಯಾರ್ಥಿಗಳ ಏಳಿಗೆಗೆ ಸಹಕರಿಸುತ್ತಿರುವ ಎಲ್ಲ ಪೋಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಜಯ ಶಾಲೆಯು ಕಳೆದ 28 ವರ್ಷಗಳಿಂದ ಗುಣಾತ್ಮಕ ಶಿಕ್ಷಣ, ಕ್ರೀಡೆ, ಕಲೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು, ಪ್ರಕೃತಿ ರಕ್ಷಣೆಯ ಮಹತ್ವ ಇವುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಬಾರದು. ಬದಲಾಗಿ ಅವರ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಪೋಷಕರಾದ ಡಾ.ಗುರುಪ್ರಸಾದ್, ಸತೀಶ್ ಕುಮಾರ್, ಎನ್.ಕೆ. ಸವಿತಾ, ವನಿತಾ ಶಾಲೆಯ ಬಗೆಗಿನ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಳ್ಳುತ್ತಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಶ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಅಧ್ಯಕ್ಷರಾದ ವೈ.ಎನ್.ಸುಬ್ಬಸ್ವಾಮಿ, ಶೈಕ್ಷಣಿಕ ಮುಖ್ಯಸ್ಥೆ ಎಸ್. ಶ್ರೀಲಕ್ಷ್ಮೀ, ಪ್ರಾಂಶುಪಾಲ ಕೆ ಎಸ್.ನಂದೀಶ , ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net